ಪೇಟೆಯಲ್ಲಿ ತನ್ನ ಪಟಾಲಂನ ಮೀಟಿಂಗ್ ಸ್ಥಳವಾದ ಓಕೆ ಅಂಗಡಿ ಬಳಿ ಮಂಜಯ್ಯ ಗುಂಪು ಸೇರಿಸತೊಡಗಿದ. ಮೂರು ಆಟೋಗಳನ್ನು ಬಾಡಿಗೆಗೆ ತೆಗೆದುಕೊಂಡ ಮಂಜಯ್ಯ, ತನ್ನ ತರಲೆ ಸೈನ್ಯವನ್ನು ಗದ್ದೆಯ ಏರಿಯ ಮೇಲೆ ನಿಲ್ಲಿಸಿಕೊಂಡು ಮೋಣುವನ್ನು ಕರೆತರಲು ತನ್ನ ಚೇಲಾ ಒಬ್ಬನನ್ನು ಕಳುಹಿಸಿದ.
ಮೊದಲೇ ಮುಂದೇನು ಎಂಬ ಚಿಂತೆಯಲ್ಲಿ ಕಂಗಾಲಾಗಿದ್ದ ಮೋಣು, ಈ ಗುಂಪನ್ನು ನೋಡಿ ಭೂಮಿಗಿಳಿದು ಹೋದ. ಮೋಣುವನ್ನು ಸುತ್ತುವರಿದ ಗುಂಪು ಬೆದರಿಕೆ, ಒತ್ತಡ ಮುಂತಾದ ರೀತಿಯಲ್ಲಿ ಹಿಂಸಿಸಿ, ಕಡೆಗೆ ಏಳು ಸಾವಿರ ರೂಪಾಯಿಗಳಿಗೆ ಒಪ್ಪುವಂತೆ ತಾಕೀತು ಮಾಡಿತು. ಮೋಣುವಿನ ಮಗಳನ್ನು ಹೊರುವುದಾಗಿ ಎಚ್ಚರಿಕೆ ನೀಡಿದ್ದಲ್ಲದೆ, ಮೋಣುವನ್ನೂ ಸಹ ಪತ್ತೆಯಿಲ್ಲದಂತೆ ಕಾಡಿನಲ್ಲಿ ಗುಂಡಿ ತೆಗೆದು ಹೂಳುವುದಕ್ಕೂ ಸಿದ್ಧರಿರುವುದಾಗಿ ಹೆದರಿಸಿದರು.
ಯಾವುದೋ ಊರಿನಿಂದ ಹೊಟ್ಟೆಪಾಡಿಗಾಗಿ ನಾಲ್ಕು ಕಾಸು ಸಂಪಾದಿಸಲು ಬಂದಿದ್ದ ಮೋಣು, ಬೇರೆ ದಾರಿ ಕಾಣದೆ ಅವರು ಕೇಳಿದ ಹಣಕ್ಕೆ ಒಪ್ಪಿಕೊಂಡ. ಯಾವುದಾದರೂ ವ್ಯಾಪಾರಿಯನ್ನು ಕರೆದುಕೊಂಡು ಬಂದು, ಮರುದಿನ ಮುಂಗಡ ಹಣ ಪಡೆದು ತಮಗೆ ಬರಬೇಕಾದ ಹಣ ಕೊಟ್ಟರೆ ಮಾತ್ರ ಶುಂಠಿ ಕೀಳಲು ಬಿಡುವುದಾಗಿ, ಇಲ್ಲವಾದಲ್ಲಿ ಮೋಣುವಿನ ಹೆಣ ನಾಯಿ-ನರಿಗಳ ಪಾಲಾಗುವುದಾಗಿ ಎಚ್ಚರಿಸಿದರು.
ಮಂಜಯ್ಯನ ಗ್ಯಾಂಗ್ ಅತ್ತ ಹೋದ ಕೂಡಲೇ ಮೋಣು ಗುಡಿಸಲಿನ ಹೊರಗಡೆ ಬಿಟ್ಟಿದ್ದ ಹವಾಯಿ ಚಪ್ಪಲಿಯನ್ನು ಮೆಟ್ಟಿಕೊಂಡು, ಹೆಂಡತಿ-ಮಗಳಿಗೂ ಹೇಳದೆ ನೇರವಾಗಿ ಪೇಟೆಗೆ ಬಂದ. ಈ ಹಿಂದೆಯೇ ತನ್ನ ಬೆಳೆ ನೋಡಿದ್ದ ವ್ಯಾಪಾರಸ್ಥರನ್ನು ಕಂಡು, ಅಂದಿನ ದರಕ್ಕೆ ಮಾತುಕತೆ ಮಾಡಿಕೊಂಡು ಮೂವತ್ತು ಸಾವಿರ ರೂಪಾಯಿ ಮುಂಗಡ ಹಣ ತಂದು ನೇರವಾಗಿ ಮಂಜಯ್ಯನ ಮನೆಗೇ ಹೋಗಿ ತಲುಪಿಸಿದ. ಉಳಿದ ಹಣವನ್ನು ಕೊನೆಯಲ್ಲಿ ಲೆಕ್ಕಾಚಾರ ಮಾಡಿ ಕೊಡುವುದಾಗಿ ತಿಳಿಸಿದ.

ನಂತರ ನೇರವಾಗಿ ಗದ್ದೆಯ ಬದುವಿನಲ್ಲಿದ್ದ ಗುಡಿಸಲಿಗೆ ಬಂದು, ಇನ್ನು ಹದಿನೈದು ದಿನಗಳೊಳಗೆ ಪೇಟೆಯ ನಾರಾಯಣ ಪೂಜಾರಿ ಶುಂಠಿ ಕೀಳಿಸಲು ಜನರನ್ನು ಕರೆತರುತ್ತಾನೆ ಎಂದೂ, ಸಾವಿರದ ಐನೂರ ಐವತ್ತು ರೂಪಾಯಿಗೆ ದರ ನಿಗದಿಪಡಿಸಿಕೊಂಡು ಬಂದಿರುವುದಾಗಿಯೂ ಹೆಂಡತಿಗೆ ತಿಳಿಸಿದ.
ಎರಡು ಸಾವಿರ ಮೂಟೆ ಬೆಳೆ ಬರಬಹುದೆಂದೂ, ತನ್ನ ಹಳೆಯ ಸಾಲವನ್ನೆಲ್ಲ ತೀರಿಸಿ, ಬಡಗರದಲ್ಲೇ ಒಂದು ಮನೆಯನ್ನು ಖರೀದಿಸಿ, ಮುಂದಿನ ವರ್ಷದೊಳಗೆ ಮಗಳ ಮದುವೆಯನ್ನೂ ಮಾಡಲು ಸಾಧ್ಯವಾಗಬಹುದೆಂದೂ ಹೆಂಡತಿಗೆ ಹೇಳಿದ.
ಮರುದಿನ ಬೆಳಿಗ್ಗೆ ನಾರಾಯಣ ಪೂಜಾರಿ ಮೋಣುವಿನ ಗದ್ದೆಗೆ ಬಂದು ಒಂದು ಸುತ್ತು ಹಾಕಿ, ಅಲ್ಲಲ್ಲಿ ಮಡಿಗಳನ್ನು ಕೆದಕಿ ಶುಂಠಿಯ ಗುಣಮಟ್ಟವನ್ನು ಪರಿಶೀಲಿಸಿದ. ಅಲ್ಲಲ್ಲಿ ಗೆಡ್ಡೆಗಳು ಯಾಕೋ ಕಪ್ಪು ಬಣ್ಣಕ್ಕೆ ತಿರುಗಿದಂತೆ ಕಾಣುತ್ತಿದ್ದವು. ಮೋಣುವಿನ ಎದೆ ದಸಕ್ಕೆಂದಿತ್ತು. ಪೂಜಾರಿ ಪ್ರಶ್ನಾರ್ಥಕವಾಗಿ ಮೋಣುವಿನೆಡೆಗೆ ನೋಡಿದ.
“ಏನೂ ಯೋಚನೆ ಮಾಡಬೇಡಿ. ಈ ಸುತ್ತಮುತ್ತಲಿನ ಎಲ್ಲಾ ಊರುಗಳ ಬೆಳೆಯಲ್ಲೇ ನನ್ನದೇ ನಂಬರ್ ಒನ್. ಸುತ್ತಮುತ್ತಲಿನ ಎಲ್ಲರ ಬೆಳೆ ಹಾಳಾಗಿದ್ದರೆ, ಕೆಲವರದ್ದಾದರೂ ಚೆನ್ನಾಗಿರುತ್ತದಲ್ಲವೇ? ಎಲ್ಲೋ ಒಂದೆರಡು ಗೆಡ್ಡೆಗಳನ್ನು ಕೀಳುವುದು ತಡವಾಗಿತ್ತಲ್ಲ, ಹಾಗಾಗಿ ಬಣ್ಣ ಬದಲಾಗಿರಬಹುದು” ಎಂದ.

ಪೂಜಾರಿ ಗೊಣಗುತ್ತಲೇ ಪೇಟೆಗೆ ಹೋದ.
ಮರುದಿನದಿಂದಲೇ ಮಾರುಕಟ್ಟೆಯಲ್ಲಿ ಶುಂಠಿಯ ಬೆಲೆ ಇಳಿಮುಖವಾಗಬೇಕೇ? ಅಯ್ಯೋ! ಎಂದು ನೋಡುವಷ್ಟರಲ್ಲೇ ಬೆಲೆ ಸಾವಿರದ ನೂರಕ್ಕೆ ಬಂದು ಇಳಿಯಬೇಕೇ? ಪೂಜಾರಿ ತಲೆ ಮೇಲೆ ಕೈಹೊತ್ತು ಕುಳಿತ.
ಬೇಗನೆ ಶುಂಠಿ ಕಿತ್ತು ತುಂಬಿಸುವಂತೆ ಗೋಗರೆದ ಮೋಣುವಿನ ಒತ್ತಾಯಕ್ಕೆ ಮಣಿದು, ಇಪ್ಪತ್ತು ಜನರನ್ನು ಶುಂಠಿ ಕೀಳಲು ಕರೆತಂದು ಬಿಟ್ಟ.
ಕಿತ್ತು ಕಿತ್ತು ಹೊರತೆಗೆದಂತೆ ಮೋಣು ಮತ್ತು ಪೂಜಾರಿ ಮೂರ್ಛೆ ಹೋಗುವುದೊಂದೇ ಬಾಕಿ! ಒಂದೊಂದು ಮಡಿಯಲ್ಲೂ ಹೆಚ್ಚೆಂದರೆ ಒಂದರಿಂದ ಎರಡು ಕೆ.ಜಿ. ಮಾತ್ರ ಚೆನ್ನಾಗಿರುವ ಶುಂಠಿ ಸಿಗತೊಡಗಿತು. ಯಾವುದೋ ಮಹಾಮಾರಿ ರೋಗ ಮೋಣುವಿನ ಕನಸನ್ನು ನಿರ್ದಾಕ್ಷಿಣ್ಯವಾಗಿ ಹೊಸಕಿ ಹಾಕಿತ್ತು.
ಎರಡು ಸಾವಿರ ಮೂಟೆಗಳಿರಲಿ, ರಾಶಿ ಕೊನೆಯಾದಾಗ ಇನ್ನೂರು ಮೂಟೆಗಳೂ ಸಿಗಲಿಲ್ಲ. ಮೋಣುವಿನ ಹೆಂಡತಿ ಮತ್ತು ಮಗಳು ನಿಂತಲ್ಲೇ ಕಣ್ಣೀರಿಳಿಸುತ್ತಿದ್ದರು. ಮೋಣು ಬಿಟ್ಟಗಣ್ಣಿನಿಂದಲೇ ಅಗೆದು ಬಗೆದು ಬರಿದಾಗಿದ್ದ ಗದ್ದೆಯನ್ನೇ ನಿರ್ಭಾವುಕನಾಗಿ ನೋಡುತ್ತಿದ್ದ.
ಈ ಮೊದಲೇ ತನ್ನ ಗೂಂಡಾಗಿರಿಯಿಂದ ಲಾಭ ಮಾಡಿಕೊಂಡಿದ್ದ ಮಂಜಯ್ಯ, ಕೊನೆಯ ಲೆಕ್ಕಾಚಾರ ಚುಕ್ತಾ ಮಾಡಲು ಬೆಳಿಗ್ಗೆ ಅಲ್ಲಿಗೆ ಬಂದ. ಅಲ್ಲಿ ಬಿದ್ದಿದ್ದ ರಾಶಿಯನ್ನು ನೋಡಿ ಮರುಮಾತನಾಡದೆ, “ಎಲ್ಲಾ ನಿಮ್ಮ ಕರ್ಮ” ಎಂದು ಹೇಳಿ ಹೊರಟುಹೋದ.

ಮೋಣು ತನ್ನ ಹೆಂಡತಿ-ಮಗಳೊಂದಿಗೆ ಬೀಜ, ಗೊಬ್ಬರ ಹಾಗೂ ಔಷಧಿ ವ್ಯಾಪಾರಿಗಳ ಬಳಿ ಮಾಡಿದ್ದ ಸಾಲವನ್ನೂ ತೀರಿಸಲಾಗದೆ ಬಿಕಾರಿಯಂತೆ ಅವರಿವರ ತೋಟಗಳಲ್ಲಿ ಕೂಲಿ ಮಾಡುತ್ತಾ, ರಸ್ತೆಬದಿಯ ತಗಡಿನ ಶೆಡ್ಡಿನಲ್ಲಿ ಕಾಲ ಕಳೆಯುವಂತಾಯಿತು. ಇನ್ನು, ಅಂದು ಊರುಬಿಟ್ಟ ನಾರಾಯಣ ಪೂಜಾರಿ ಇಂದಿನವರೆಗೂ ಯಾರಿಗೂ ಕಾಣಿಸಿಕೊಂಡಿಲ್ಲ.

