ರಾಮನಾಥಪುರ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಅನುದಾನವೊಂದೇ ಆಧಾರವಾಗಬೇಕಿಲ್ಲ. ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಹಾಗೂ ದಾನಿಗಳು ಕೈಜೋಡಿಸಿದರೆ ಸರ್ಕಾರಿ ಶಾಲೆಗಳನ್ನೂ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ರಾಮನಾಥಪುರ ಹೋಬಳಿಯ ಸಂಗೀತ ಗ್ರಾಮ ರುದ್ರಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ.
ಗಾನಕಲಾಭೂಷಣ ವಿದ್ವಾನ್ ಡಾ. ಆರ್.ಕೆ. ಪದ್ಮನಾಭ ಅವರ ಮಾರ್ಗದರ್ಶನ ಹಾಗೂ ಶಾಲೆಯ ಸಹಶಿಕ್ಷಕ ಎ.ಬಿ. ಮೂರ್ತಿ ಅವರ ವಿಶೇಷ ಆಸಕ್ತಿ ಮತ್ತು ನಿರಂತರ ಪರಿಶ್ರಮದಿಂದ ಶಾಲೆ ಇಂದು ಸುಸಜ್ಜಿತ ಮೂಲಸೌಕರ್ಯಗಳೊಂದಿಗೆ ಕಂಗೊಳಿಸುತ್ತಿದೆ. ನೂರಾರು ದಾನಿಗಳ ಸಹಕಾರದಿಂದ ಇದುವರೆಗೆ ಒಂದು ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ಹಾಗೂ ಸೌಲಭ್ಯಗಳನ್ನು ಶಾಲೆಗೆ ದಾನದ ರೂಪದಲ್ಲಿ ಒದಗಿಸಲಾಗಿದೆ.
ಶಾಲೆಯ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದಿರುವ ಶಿಕ್ಷಕ ಎ.ಬಿ. ಮೂರ್ತಿ ಅವರು ತಮ್ಮ ಗುರುಗಳಾದ ಡಾ. ಆರ್.ಕೆ. ಪದ್ಮನಾಭ ಅವರ ಸಹಕಾರದೊಂದಿಗೆ ಶಾಲಾಭಿವೃದ್ಧಿ ಸಮಿತಿ (ಎಸ್ಡಿಎಂಸಿ), ಮುಖ್ಯಶಿಕ್ಷಕರು, ಸಹಶಿಕ್ಷಕರು, ಶಿಕ್ಷಣ ಇಲಾಖೆ, ಗ್ರಾಮಸ್ಥರು, ಜನಪ್ರತಿನಿಧಿಗಳು, ಪೋಷಕರು ಹಾಗೂ ದಾನಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಶಾಲೆಯ ಸರ್ವತೋಮುಖ ಪ್ರಗತಿಗಾಗಿ ಶ್ರಮಿಸುತ್ತಿದ್ದಾರೆ.

ಮೂಲಸೌಕರ್ಯ ಅಭಿವೃದ್ಧಿಗೆ ದಾನಿಗಳ ಕೊಡುಗೆ
ಶಾಲೆಯ ಕೊಠಡಿಗಳ ನವೀಕರಣ, ಗೋಡೆಗಳಿಗೆ ಬಣ್ಣ, ಕಾಂಪೌಂಡ್ ನಿರ್ಮಾಣ, ಹೈಟೆಕ್ ಶೌಚಾಲಯ, ಕೈತೊಳೆಯುವ ನೀರಿನ ತೊಟ್ಟಿಗಳು, ಸುಂದರ ಉದ್ಯಾನವನ, ರಂಗಮಂಟಪ, ಗೇಟ್ ಮತ್ತು ಕಮಾನು, ಧ್ವಜಸ್ತಂಭ, ಗ್ರಂಥಾಲಯ, ಕಂಪ್ಯೂಟರ್, ಯುಪಿಎಸ್, ಪ್ರೊಜೆಕ್ಟರ್, ಪ್ರಿಂಟರ್, ಧ್ವನಿವರ್ಧಕಗಳು, ಅಕ್ವಾಗಾರ್ಡ್, ಕೊಳವೆಬಾವಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ದಾನಿಗಳ ನೆರವಿನಿಂದ ಕಲ್ಪಿಸಲಾಗಿದೆ.
ಇದರೊಂದಿಗೆ ಬಿಸಿಯೂಟ ಯೋಜನೆಗೆ ತಟ್ಟೆ, ಲೋಟ, ಟ್ರಾಲಿ, ಮಿಕ್ಸಿ, ಗ್ರೈಂಡರ್, ಇಡ್ಲಿ ಪಾತ್ರೆಗಳು, ನೀರಿನ ಮೋಟಾರ್, ಪೈಪ್ಗಳು, ಆಟದ ಮೈದಾನದ ಅಭಿವೃದ್ಧಿ, ಕ್ರೀಡಾ ಸಾಮಗ್ರಿಗಳು, ಪೀಠೋಪಕರಣಗಳು, ಶಾಲಾ ಸಮವಸ್ತ್ರ, ಬ್ಯಾಗ್ಗಳು, ಟೈ-ಬೆಲ್ಟ್, ನೀರಿನ ಬಾಟಲಿಗಳು ಹಾಗೂ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ.
ವಿಶೇಷವಾಗಿ ಸುಮಾರು 60 ಲಕ್ಷ ರೂಪಾಯಿ ಮೌಲ್ಯದ 30 ಗುಂಟೆ ಜಮೀನನ್ನು ಶಾಲೆಯ ಹೆಸರಿಗೆ ದಾನವಾಗಿ ಪಡೆಯುವಲ್ಲಿ ಶಿಕ್ಷಕ ಎ.ಬಿ. ಮೂರ್ತಿ ಹಾಗೂ ದಾನಿಗಳ ಪ್ರಯತ್ನ ಗಮನಾರ್ಹವಾಗಿದೆ.

ಡಾ. ಆರ್.ಕೆ. ಪದ್ಮನಾಭ ಅವರಿಂದ ವಿಶೇಷ ನೆರವು
ಸಂಗೀತ ವಿದ್ವಾಂಸ ಡಾ. ಆರ್.ಕೆ. ಪದ್ಮನಾಭ ಅವರು ಶಾಲೆಯ ಅಭಿವೃದ್ಧಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಕೊಡುಗೆ ನೀಡಿದ್ದಾರೆ. ಬಯಲು ರಂಗಮಂಟಪ ನಿರ್ಮಾಣಕ್ಕೆ ₹1.45 ಲಕ್ಷ, ಅಕ್ವಾಗಾರ್ಡ್ಗೆ ₹1.22 ಲಕ್ಷ, ಕ್ಯಾನನ್ ಪ್ರಿಂಟರ್ಗೆ ₹1.12 ಲಕ್ಷ, ಟ್ರಾಲಿಗಳಿಗೆ ₹2.33 ಲಕ್ಷ, ಆಟದ ಮೈದಾನದ ಗೇಟ್ಗಳಿಗೆ ₹2.20 ಲಕ್ಷ, ಕೈತೊಳೆಯುವ ತೊಟ್ಟಿಗೆ ₹85 ಸಾವಿರ, ಯುಪಿಎಸ್ಗೆ ₹60 ಸಾವಿರ, ಎರಡು ಎಚ್ಪಿ ಮೋಟಾರ್ಗೆ ₹70 ಸಾವಿರ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಿದ್ದಾರೆ.
ಇದರ ಜತೆಗೆ ಶ್ರುತಿ ಪೆಟ್ಟಿಗೆ, ಡ್ರಮ್ ಸೆಟ್, ಫ್ಯಾನ್ಗಳು, ಸೌಂಡ್ ಬಾಕ್ಸ್ಗಳು, ಸಂಸ್ಕೃತ ಪುಸ್ತಕಗಳು, ಇಡ್ಲಿ ಪಾತ್ರೆ, ವಿದ್ಯಾರ್ಥಿಗಳ ಲೇಖನ ಸಾಮಗ್ರಿಗಳು ಹಾಗೂ ಪ್ರತಿ ವರ್ಷ ಪ್ರತಿಭಾ ಪುರಸ್ಕಾರಕ್ಕೂ ನೆರವು ನೀಡುತ್ತಿದ್ದಾರೆ.

ಹಲವು ಸಂಸ್ಥೆಗಳು, ಗಣ್ಯರ ಉದಾರ ಕೊಡುಗೆ
ಕರಿಯನಾಯಕ ಮತ್ತು ಸನ್ಸ್, ರುದ್ರಪಟ್ಟಣದ ವತಿಯಿಂದ ಜಮೀನಿನ ದಾನಪತ್ರಕ್ಕೆ ನೆರವು ನೀಡಲಾಗಿದೆ. ಮೈಸೂರಿನ ಬ್ರಿಗೇಡಿಯರ್ ಆರ್.ವಿ. ಸೀತಾರಾಮಯ್ಯ ಅವರು ಶಾಲೆಯ ಗೇಟ್ ಮತ್ತು ಕಮಾನು, ಗೋಡೆ ಬರಹ ಹಾಗೂ ಕ್ರೀಡಾ ಸಾಮಗ್ರಿಗಳಿಗೆ ನೆರವು ನೀಡಿದ್ದಾರೆ.
ಬೆಂಗಳೂರಿನ ಆಕ್ವೆನ್ ಫೈನಾನ್ಷಿಯಲ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಾಲ್ಕು ಕೊಠಡಿಗಳ ನವೀಕರಣಕ್ಕೆ ₹4.22 ಲಕ್ಷ, ಕಂಪ್ಯೂಟರ್ಗಳಿಗೆ ₹1.50 ಲಕ್ಷ, ವಿದ್ಯಾರ್ಥಿಗಳ ಬ್ಯಾಗ್ ಹಾಗೂ ಲೇಖನ ಸಾಮಗ್ರಿಗಳನ್ನು ಒದಗಿಸಲಾಗಿದೆ.
ಶಾಸಕರ ಧರ್ಮಪತ್ನಿ ತಾರಾ ಮಂಜು ಅವರು ವಿದ್ಯಾರ್ಥಿಗಳಿಗೆ ಸಮವಸ್ತ್ರ, ಬ್ಯಾಗ್, ನೋಟ್ಬುಕ್ ಹಾಗೂ ನೀರಿನ ಬಾಟಲಿಗಳನ್ನು ನೀಡಿದ್ದಾರೆ. ಉದ್ಯಮಿ ಆರ್.ಕೆ. ಶ್ರೀನಿವಾಸಮೂರ್ತಿ ಅವರು ಶಾಲಾ ಉದ್ಯಾನವನ ನಿರ್ಮಾಣಕ್ಕೆ ₹1.80 ಲಕ್ಷ ನೆರವು ನೀಡಿದ್ದಾರೆ. ಆರ್.ಎಸ್. ಕೃಪಾ ಮತ್ತು ಕುಟುಂಬ ಶೌಚಾಲಯಗಳ ನವೀಕರಣಕ್ಕೆ ₹1.50 ಲಕ್ಷ ನೀಡಿದ್ದಾರೆ.
ಇದಲ್ಲದೆ ಬಿ.ಎಸ್.ಎಸ್. ಮೈಕ್ರೋ ಫೈನಾನ್ಸ್, ಸರಸ್ವತಿ, ಕೃಷ್ಣಪ್ರಸಾದ್, ಎಂ.ಎಸ್. ದೀಪಕ್, ಅವಿರತ ಟ್ರಸ್ಟ್, ಆರ್.ಕೆ. ಶಿವಣ್ಣ, ಕನಕ ತಾರಾ, ಆರ್.ವೈ. ತಮ್ಮೇಗೌಡ, ನಾಗರತ್ನ ನಾಗರಾಜ್, ಗುಂಡುರಾಮಯ್ಯ, ಲಕ್ಕೂರ್ ಕಾಂತರಾಜ್, ಬಸವೇಗೌಡ, ಧರ್ಮೇಶ್ ಮತ್ತು ಕುಟುಂಬ, ದಿವಾಕರ್ ಗೌಡ, ವೇಣುಗೋಪಾಲ್, ಆರ್.ವಿ. ಸುರೇಶ್, ಡ್ರೈವರ್ ಬಾಬಣ್ಣ ಸೇರಿದಂತೆ ಹಲವು ದಾನಿಗಳು ಶಾಲೆಯ ಅಭಿವೃದ್ಧಿಗೆ ಉದಾರವಾಗಿ ನೆರವು ನೀಡಿದ್ದಾರೆ.

ಶೈಕ್ಷಣಿಕ ಪ್ರಗತಿಗೂ ವಿಶೇಷ ಆದ್ಯತೆ
ಶಾಲೆಯ ಭೌತಿಕ ಅಭಿವೃದ್ಧಿಯ ಜತೆಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೂ ಶಿಕ್ಷಕ ಎ.ಬಿ. ಮೂರ್ತಿ ಅವರು ಹೆಚ್ಚಿನ ಆದ್ಯತೆ ನೀಡಿದ್ದಾರೆ. ಪ್ರತಿದಿನ ತರಗತಿಗೆ ತೆರಳುವ ಮುನ್ನ ಪಾಠ ಯೋಜನೆ ಸಿದ್ಧಪಡಿಸಿಕೊಂಡು ಕಂಪ್ಯೂಟರ್, ಪ್ರೊಜೆಕ್ಟರ್, ಸಂಗೀತ, ಕಥೆ, ನೃತ್ಯ ಹಾಗೂ ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮೂಡಿಸುತ್ತಿದ್ದಾರೆ.
ಶಿಸ್ತು, ತಾಳ್ಮೆ, ಶ್ರದ್ಧೆ ಮತ್ತು ಜವಾಬ್ದಾರಿಯಿಂದ ಶಿಕ್ಷಕ ವೃತ್ತಿಯನ್ನು ನಿರ್ವಹಿಸುತ್ತಿರುವ ಇವರ ಸೇವೆಯನ್ನು ಗುರುತಿಸಿ 2015-16ನೇ ಸಾಲಿನಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, 2022-23ನೇ ಸಾಲಿನಲ್ಲಿ ರಾಜ್ಯಮಟ್ಟದ ಗ್ರಾಮೀಣ ಶಿಕ್ಷಕ ರತ್ನ ಪ್ರಶಸ್ತಿ ಹಾಗೂ 2023-24ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೇವಲ ಅನುದಾನವಷ್ಟೇ ಮುಖ್ಯವಲ್ಲ; ಸಮುದಾಯದ ಸಹಭಾಗಿತ್ವ, ಶಿಕ್ಷಕರ ಬದ್ಧತೆ ಮತ್ತು ದಾನಿಗಳ ಉದಾರ ಮನಸ್ಸು ಕೂಡ ಅಷ್ಟೇ ಮುಖ್ಯ ಎಂಬುದನ್ನು ರುದ್ರಪಟ್ಟಣದ ಈ ಶಾಲೆ ಸಾಬೀತುಪಡಿಸಿದೆ. ಇಂತಹ ಮಾದರಿ ಪ್ರಯತ್ನಗಳು ರಾಜ್ಯದ ಇತರ ಸರ್ಕಾರಿ ಶಾಲೆಗಳಿಗೂ ಪ್ರೇರಣೆಯಾಗಲಿ ಎಂಬುದು ಗ್ರಾಮಸ್ಥರು ಹಾಗೂ ಶಿಕ್ಷಣಾಭಿಮಾನಿಗಳ ಆಶಯವಾಗಿದೆ.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
