ಚನ್ನರಾಯಪಟ್ಟಣ: ರಾಷ್ಟ್ರೀಯ ವಿಪತ್ತು ದಿನಾಚರಣೆಯ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚನ್ನರಾಯಪಟ್ಟಣ ತಾಲ್ಲೂಕು ಘಟಕದ ವತಿಯಿಂದ ಶ್ರವಣಬೆಳಗೊಳದ ಬಾಹುಬಲಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣೆ, ಆರೋಗ್ಯ ಅರಿವು ಹಾಗೂ ರಕ್ತದ ಗುಂಪು ಪರೀಕ್ಷೆ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕದ ಅಧ್ಯಕ್ಷ ಭರತ್ ಕುಮಾರ್ ಹೆಚ್.ಜಿ. ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಆಧುನಿಕ ಜೀವನಶೈಲಿಯಲ್ಲಿ ಮಾನವನ ಚಟುವಟಿಕೆಗಳಿಂದ ಪ್ರಕೃತಿ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಪ್ರಕೃತಿಯ ನಾಶದಿಂದ ಭೂಕಂಪ, ಪ್ರವಾಹ, ಸುನಾಮಿ, ಚಂಡಮಾರುತ ಹಾಗೂ ಬರಗಾಲದಂತಹ ನೈಸರ್ಗಿಕ ವಿಕೋಪಗಳ ಪರಿಣಾಮಗಳು ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿದೆ. ಇಂತಹ ವಿಪತ್ತುಗಳಿಂದ ಅಪಾರ ಜೀವಹಾನಿ ಹಾಗೂ ಆರ್ಥಿಕ ನಷ್ಟ ಸಂಭವಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಪ್ರಕೃತಿ ಸಂರಕ್ಷಣೆಯ ಮಹತ್ವವನ್ನು ಅರಿತು ತಮ್ಮ ಗ್ರಾಮಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಪುನರ್ಜೀವ ಸ್ವಯಂಸೇವಾ ಸಂಸ್ಥೆ ಹಾಗೂ ಚನ್ನರಾಯಪಟ್ಟಣದ ಸ್ವಯಂಪ್ರೇರಿತ ರಕ್ತ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ಮತ್ತು ವಿದ್ಯಾರ್ಥಿಗಳಿಗೆ ಉಚಿತ ರಕ್ತದ ಗುಂಪು ಪರೀಕ್ಷೆ ಆಯೋಜಿಸಿರುವುದು ವಿಶೇಷವಾಗಿದೆ. ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಸುನಿಲ್ ಡಿ. ಮಾತನಾಡಿ, ರಾಷ್ಟ್ರೀಯ ವಿಪತ್ತುಗಳ ಕುರಿತು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಇಂದಿನ ಯುವಜನತೆ ಆಧುನಿಕ ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತರಾಗಿದ್ದು, ನೈಸರ್ಗಿಕ ವಿಪತ್ತುಗಳು ಸಂಭವಿಸಿದ ಸಂದರ್ಭದಲ್ಲಿ ಅವುಗಳನ್ನು ಎದುರಿಸುವ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಾಯೋಗಿಕ ಜ್ಞಾನ ಹೊಂದಿರಬೇಕು ಎಂದು ತಿಳಿಸಿದರು.

ಆರೋಗ್ಯವೇ ಭಾಗ್ಯ ಎಂಬಂತೆ ಆರೋಗ್ಯ ಜಾಗೃತಿ ಮತ್ತು ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ರಕ್ತದಾನದಿಂದ ಮೂವರು ರೋಗಿಗಳ ಜೀವ ಉಳಿಸಲು ಸಾಧ್ಯವಾಗುತ್ತದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.

ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಶಿವಕುಮಾರ್ ಮಾತನಾಡಿ, ಚನ್ನರಾಯಪಟ್ಟಣ ತಾಲ್ಲೂಕು ಘಟಕದ ವತಿಯಿಂದ ನಿರಂತರವಾಗಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರ ಭಾಗವಾಗಿ ವಿದ್ಯಾರ್ಥಿಗಳಿಗೆ ಉಚಿತ ರಕ್ತದ ಗುಂಪು ಪರೀಕ್ಷೆ ನಡೆಸುವುದರ ಜೊತೆಗೆ ಮಾಸ್ಕ್, ಪ್ರಥಮ ಚಿಕಿತ್ಸಾ ಸಾಮಗ್ರಿಗಳು, ತೂಕ ಮಾಪನ ಸೇರಿದಂತೆ ವಿವಿಧ ಉಪಯುಕ್ತ ವಸ್ತುಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತಾಲ್ಲೂಕು ಘಟಕದ ನಿರ್ದೇಶಕ ಉದಯಶಂಕರ್, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
