ಚಾಮರಾಜನಗರ:-ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವ ಕುರಿತು ಕೇಂದ್ರದ ವರಿಷ್ಠರ ಸಮ್ಮುಖದಲ್ಲಿ ಚರ್ಚೆಯಾಗಿ ಈ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಬೇಕು. ಮತ್ತೆ ಯತ್ನಾಳ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಗೌಡ ಲಿಂಗಾಯಿತ- ಪಂಚಮಸಾಲಿ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಅಮ್ಮನಪುರ ಮಲ್ಲೇಶ್ ಒತ್ತಾಯಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿರುವುದನ್ನು ಹಿಂದೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಯತ್ನಾಳ್ ಅವರು ಹೊಸ ಪಕ್ಷ ಕಟ್ಟುತ್ತಾರೆ ಎಂದು ಸುದ್ದಿ ಇತ್ತೀಚಿಗೆ ಮಾಧ್ಯಮದಲ್ಲಿ ನೋಡಿದ್ದೇವೆ. ಯತ್ನಾಳ್ ಅವರು ಹೊಸದಾಗಿ ಹಿಂದೂ ಪಕ್ಷ ಕಟ್ಟುವ ಕಲ್ಪನೆಯನ್ನು ಕೈಬಿಡಬೇಕು. ಆತುರದಲ್ಲಿ ನಿರ್ಧಾರ ತೆಗೆದುಕೊಂಡು ಹೊಸ ಪಕ್ಷವನ್ನು ಕಟ್ಟುವ ಕಾರ್ಯಕ್ಕೆ ಮುಂದಾಗಬೇಡಿ ಎಂದು ಮನವಿ ಮಾಡಿದರು. ಬಿಜೆಪಿ ಮತ್ತು ಹಿಂದೂ ಪಕ್ಷದಿಂದ ಮತಗಳು ವಿಭಜನೆಯಾಗಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಅವಕಾಶವಾಗುತ್ತದೆ. ಈಗಾಗಲೇ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ರಾಜ್ಯ ಕಾನೂನಾತ್ಮಕವಾಗಿ ಹಾಗೂ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ದೂರಿದರು.
ಮುಂದಿನ ದಿನದಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಮುಖಂಡರು ಸಭೆ ಸೇರಿ ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ ಮಾಡಿರುವ ಉಚ್ಚಾಟನೆಯನ್ನು ಹಿಂದೆ ತೆಗೆದುಕೊಳ್ಳಬೇಕು ಎಂದು ದೆಹಲಿಗೆ ತೆರಳಿ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸುವ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಲೋಕೇಶ್, ಸತೀಶ್, ಮಹದೇವಸ್ವಾಮಿ, ಸುಭಾಷ್ ಹಾಜರಿದ್ದರು.
ವರದಿ: ಶ್ರೀ ಸಾಯಿ ಎಸ್ ಮಂಜು
