ಹಾಸನ- ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತರಿಗೆ ಚೈತನ್ಯ ತುಂಬಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಏಪ್ರಿಲ್ 12 ರಿಂದ 14 ರವರೆಗೆ ‘ನೇರ ಮಾರಾಟದ ಮೂಲಕ ನಮ್ಮ ಹೋರಾಟ’, ‘ನಮ್ಮ ಬೆಳೆಗೆ ನಮ್ಮದೇ ಬೆಲೆ’ ವಿನೂತನ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಣಗಾಲ್ ಮೂರ್ತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಮೊದಲ ಸಂತೆಯು ಏಪ್ರಿಲ್ 12ರಿಂದ 14 ರವರೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮುನಿ ವೆಂಕಟಯ್ಯ ಸ್ಮಾರಕ ಬಯಲು ರಂಗಮಂದಿರದ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿ ನಡೆಯಲಿದೆ ಎಂದರು.
ರೈತರು ತಮ್ಮ ಬೆಳೆಗಳಿಗೆ ತಾವೇ ಬೆಲೆ ನಿಗದಿಪಡಿಸಿ, ಗ್ರಾಹಕರಿಗೆ ನೇರವಾಗಿ ತರಕಾರಿ ಮಾರಾಟ ಮಾಡುವ ಕಾರ್ಯಕ್ರಮ ಇದಾಗಿದೆ. ಈಗಾಗಲೇ ಅನೇಕ ಕಲಾವಿದರು, ಸಾಹಿತಿಗಳು ಮತ್ತು ಪ್ರಬುದ್ಧ ವ್ಯಕ್ತಿಗಳನ್ನು ಸಂಪರ್ಕಿಸಿ ಹೋರಾಟಕ್ಕೆ ಬೆಂಬಲ ಕೇಳಿದ್ದೇವೆ ಎಂದರು.
ಬೆಂಗಳೂರಿನ ಗ್ರಾಹಕರು ಬಡಾವಣೆಗಳಲ್ಲಿ ರೈತರ ಸಂತೆಗಳನ್ನು ಆಯೋಜಿಸಲು ಇಚ್ಛಿಸಿದಲ್ಲಿ, ಗ್ರಾಹಕರ ಸಮಿತಿಗಳನ್ನು ರಚಿಸಿಕೊಂಡು ರೈತರ ಸಂಘಟಕರೊಂದಿಗೆ ಚರ್ಚೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಈ ಮೊದಲ ಸಂತೆ ಯಶಸ್ಸು ಕಂಡಲ್ಲಿ ಬೆಂಗಳೂರಿನ ಇತರೆ ಬಡಾವಣೆಗಳಿಗೂ ವಿಸ್ತರಿಸಲಾಗುವುದು. ಮಧ್ಯವರ್ತಿಗಳಿಲ್ಲದ ಕಮಿಷನ್ ರಹಿತ ಮಾರುಕಟ್ಟೆಯಾಗಿದ್ದು, ರೈತರೇ ನೇರವಾಗಿ ಬಂದು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿದ್ದಾರೆ ಎಂದರು.
ರೈತರ ಜಮೀನು ಹರಾಜಿಗೆ ವಿರೋಧ: ಜಿಲ್ಲೆಯ ಬೇಲೂರು ತಾಲ್ಲೂಕಿನ ಮಾದಿಹಳ್ಳಿ ಹೋಬಳಿಯ ದಾಸಗೋಡನಹಳ್ಳಿ, ಕಟ್ಟಾಯ ಹೋಬಳಿಯ ದೊಡ್ಡ ಭೀಕನಹಳ್ಳಿ ಗ್ರಾಮದ ರೈತರ ಜಮೀನನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಹರಾಜು ಮಾಡಲು ಹೊರಟಿದ್ದು, ಇದನ್ನು ರೈತ ಸಂಘ ತೀವ್ರವಾಗಿ ವಿರೋಧಿಸುತ್ತದೆ ಎಂದು ತಿಳಿಸಿದರು.
ಬಹುತೇಕ ರೈತರು ಬ್ಯಾಂಕ್ಗಳಿಂದ ಸಾಲ ಪಡೆದಿದ್ದರೂ, ಅಲ್ಪಸ್ವಲ್ಪ ಹಣ ಪಾವತಿ ಮಾಡಿದ್ದಾರೆ. ಆದರೆ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಸಮಯಕ್ಕೆ ಸರಿಯಾಗಿ ಸಾಲ ಪಾವತಿ ಮಾಡುತ್ತಿಲ್ಲ ಎಂಬ ನೆಪ ಹೇಳಿ, ಬ್ಯಾಂಕಿನವರು ರೈತರ ಜಮೀನನ್ನು ಹರಾಜು ಮಾಡುತ್ತಿರುವುದು ಸರಿಯಲ್ಲ ಎಂದರು.
ಮಂಜಣ್ಣ, ಮರ್ಕುಲಿ ಪ್ರಕಾಶ್, ಶಿವಕುಮಾರ್, ಚಂದ್ರಶೇಖರ್ ಇತರರು ಇದ್ದರು.
