ಚಾಮರಾಜನಗರ: ಜಿಲ್ಲೆಗೆ ಅಭಿವೃದ್ದಿಪರ ಕಾರ್ಯಕ್ರಮಗಳನ್ನು ಸಿಎಂ ಸಿದ್ದರಾಮಯ್ಯ ಘೋಷಿಸುವ ವಿಶ್ವಾಸವಿದೆ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.
ನಗರದ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರಬೆಟ್ಟದಲ್ಲಿ ಏ.24ರಂದು ಸಚಿವ ಸಂಪುಟಸಭೆ ನಡೆಯುತ್ತಿದ್ದು, ಜಿಲ್ಲಾಭಿವೃದ್ದಿಗೆ ಪೂರಕವಾದ ಪ್ರಸ್ತಾವನೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದ್ದು, ಸಚಿವ ಸಂಪುಟಸಭೆಯಲ್ಲಿ ಚರ್ಚಿಸಿ, ಅಭಿವೃದ್ದಿಪರ ಕಾರ್ಯಕ್ರಮಗಳನ್ನು ಸಿಎಂ ಸಿದ್ದರಾಮಯ್ಯ ಘೋಷಿಸುವ ವಿಶ್ವಾಸವಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ 2013-14 ರ ಅವಧಿಯಲ್ಲಿ ಜಿಲ್ಲೆಗೆ ಹಲವಾರುಬಾರಿ ಭೇಟಿನೀಡುವ ಮೂಲಕ ಜಿಲ್ಲಾಭಿವೃದ್ದಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಬದನಗುಪ್ಪೆ, ಕೆಲ್ಲಂಬಳ್ಳಿಯಲ್ಲಿ ಕೈಗಾರಿಕಾಪ್ರದೇಶ ಸ್ಥಾಪನೆಗೆ ಒತ್ತು, ಮೆಡಿಕಲ್. ಎಂಜಿನಿಯರಿಂಗ್ ಕಾಲೇಜು, ಕೃಷಿವಿಜ್ಞಾನ ಕಾಲೇಜು, ಯಳಂದೂರಿನಲ್ಲಿ 100ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲಿಪೂಜೆ, ಪ್ರಸ್ತುತ ಕಾಡಾ ಅಚ್ಚುಕಟ್ಟು ಪ್ರದೇಶದಲ್ಲಿ ಬೃಹತ್ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ವರ್ಷಕ್ಕೆ 1೦೦ ಕೋಟಿ ಸೇರಿದಂತೆ 5.50 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಸಂಪುಟಸಭೆಯಲ್ಲಿಟ್ಟು, ಅನುಮೋದನೆ ಪಡೆಯುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಕೊಳ್ಳೇಗಾಲ ಉಪವಿಭಾಗದಲ್ಲಿ ಮತ್ತೊಂದು ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ, ಸಿದ್ದಯ್ಯನಪುರ ಸುತ್ತಮುತ್ತ ಸುಮಾರು ೪೫೦೦ಕ್ಕು ಹೆಚ್ಚು ರಾಜಮನೆತನಗಳ ಆಸ್ತಿಯಿದ್ದು, ಖಾತೆಮಾಡಿ ಕೊಡುವವರಗೆ ಕಂದಾಯಗ್ರಾಮ ಘೋಷಣೆ ಮಾಡಬಾರದು ಎಂದು ಚಾಮರಾಜನಗರ ಜಿಲ್ಲಾಧಿಕಾರಿಅವರಿಗೆ ರಾಜಮಾತೆಪ್ರಮೋದಾದೇವಿ ಒಡೆಯರ್ ಪತ್ರ ಬರೆಯುತ್ತಾರೆ. ಇನ್ನೊಂದೆಡೆ ಅವರೇ’ ಆಸ್ತಿ ಅರಮನೆಗೆ ಸೇರಿದ್ದರೂ, ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವುದಲ್ಲ ಎಂದು ಪತ್ರಿಕಾ ಹೇಳಿಕೆಕೊಡುತ್ತಾರೆ. ಈ ವಿಚಾರ ಗಂಭೀರವಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಿ, ಪರಿಹಾರ ಸೂಚಿಸಬೇಕು ಎಂದು ಹೇಳಿದರು.
ರೈತರು ಕೃಷಿಭೂಮಿ ಸಾಗುವಳಿ ಮಾಡುವ ವಿಚಾರದಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆ ನಡುವೆ ಒಮ್ಮತವಿಲ್ಲ. ಹಾಗಾಗಿ ಸರ್ಕಾರ ಬಿಳಿಗಿರಿರಂಗನಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಆಯೋಜಿಸಿ, ಪರಿಹಾರ ಒದಗಿಸಬೇಕು ಎಂಬುದು ನಮ್ಮ ಪ್ರಮುಖ ಒತ್ತಾಯವಾಗಿದೆ. ಸಚಿವ ಸಂಪುಟಸಭೆಯಲ್ಲಿ ಜಿಲ್ಲಾಭಿವೃದ್ದಿಗೆ ಪ್ರಥಮ ಆದ್ಯತೆ ನೀಡಬೇಕು ಎಂಬುದು ನನ್ನ ಮನವಿ ಎಂದರು.
ಗೋಷ್ಠಿಯಲ್ಲಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಆರ್.ಮಹದೇವು, ಜಿಲ್ಲಾಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು, ಯಳಂದೂರು ಹಾಗೂ ಕೊಳ್ಳೇಗಾಲ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಭುಪ್ರಸಾದ್, ಮಹದೇಶ್ವರಬೆಟ್ಟ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ರಾಜೇಂದ್ರ, ನಂಜುಂಡಸ್ವಾಮಿ, ಸೋಮಣ್ಣ ಗೌಡಹಳ್ಳಿ ರಾಜೇಶ್
ಹಾಜರಿದ್ದರು.
– ಶ್ರೀ ಸಾಯಿ ಎಸ್ ಮಂಜು
