ಅಸಮರ್ಥ ಹಾಗೂ ಅರೆಜ್ಞಾನದ ಪರೀಕ್ಷಕರಿಂದ ಹಾಗೂ ಇಲಾಖೆಯಲ್ಲಿನ ಅರೆಬೆಂದ ಮೆದುಳುಗಳಿಂದಲೇ ಈ ಜನಿವಾರ, ಉಡುದಾರ, ಹಿಜಾಬ, ತಾಳಿ ಸಂಬಂಧಿತ ಅಸಂಬದ್ಧ ಹಾಗೂ ಅನಪೇಕ್ಷಿತ ವಿವಾದಗಳೆದ್ದಿರುವುದು.
Invigilatorಗಳು ಪರೀಕ್ಷಾ ಕೊಠಡಿಗಳಲ್ಲಿ ಪರಿವೀಕ್ಷಕರಾಗಿ ಕಾವಲು ಕೆಲಸ ಮಾಡಲೆಂದೇ ನೇಮಕವಾಗಿರುತ್ತಾರೆ. ಅದಕ್ಕೆಂದೇ ಭತ್ಯೆಯನ್ನೂ ಪಡೆಯುತ್ತಾರೆ. ತಮ್ಮ ಕೆಲಸವನ್ನು ಹಗುರ ಮಾಡಿಕೊಳ್ಳಲೆಂದೇ ಇಲ್ಲಸಲ್ಲದ ಅಸಮರ್ಪಕ ನಿಯಮಗಳನ್ನು ಸೃಷ್ಠಿಸಿ ಆ ಪರೀಕ್ಷೆಯೆಂಬ ರಾಡಿಯನ್ನು ಮತ್ತಷ್ಟು ಗಬ್ಬೆಬ್ಬಿಸಿದ್ದಾರೆ.
ಹೆಚ್ಚೆಂದರೆ ನಲವತ್ತು ಜನ ಪರೀಕ್ಷಾರ್ಥಿಗಳು ಕುಳಿತು ಮೂರು ಗಂಟೆ ಪರೀಕ್ಷೆ ಬರೆಯುವ ಕೊಠಡಿಯನು ಸರ್ವೇಕ್ಷಣೆ ಮಾಡಲಾಗದ ಇವರುಗಳನ್ನು ಸಮರ್ಥರೆಂದು ಪರಿಗಣಿಸುವುದು ಹೇಗೆ?
ಪರೀಕ್ಷಾ ಕೇಂದ್ರದ ಪ್ರವೇಶದಲ್ಲಿಯೇ ಎಲೆಕ್ಟ್ರಾನಿಕ್ ಗ್ಯಾಜೆಟ್ಟುಗಳನ್ನು ಪರಿಶೋಧಿಸುವ ಯಂತ್ರವೊಂದನ್ನು ಇರಿಸಿದಲ್ಲಿ ಬಹುತೇಕ ಸೋಸುವಿಕೆ ಅಲ್ಲಿಯೇ ಮುಗಿದು ಹೋಗುತ್ತದೆ. (ಆ ಸೋಸುವಿಕೆಯಲಿ ಸಿಕ್ಕಿ ಬೀಳುವ ವಸ್ತುಗಳನ್ನು ವಾಪಾಸ್ ಕೊಡದಿರುವ ನಿಯಮವಿದ್ದಲ್ಲಿ, ಅವನ್ನು ಅಲ್ಲಿಯವರೆಗೆ ತರುವ/ತಂದು ಕಳೆದುಕೊಳ್ಳುವ ತಪ್ಪನ್ನು ಯಾವ ಪರೀಕ್ಷಾರ್ಥಿಯೂ ಮಾಡಲಾರರು).
ನೋಡಿ ಬರೆಯುವುದು, ತೋರಿಸಿಕೊಂಡು ಬರೆಯುವುದು, ಉತ್ತರ ಪತ್ರಿಕೆ ಕೈ ಬದಲು, ಪಿಸು ಮಾತಿನಲಿ ಉತ್ತರ ಕೊಡುವ/ಪಡೆಯುವ, ಚೀಟಿ / ಪುಸ್ತಕ ಬಳಸಿ ನಕಲು ಮಾಡುವುದು ಮುಂತಾದುವುಗಳ ನಿಯಂತ್ರಣವನು ವೃತ್ತಿಪರ ಶಿಸ್ತಿನಿಂದ, ಯಾವುದೇ ಮುಲಾಜಿಲ್ಲದೇ ಹಾಗೂ ಪ್ರಾಮಾಣಿಕತೆಯಿಂದ ಮಾಡಿದಲ್ಲಿ ಪರೀಕ್ಷಾರ್ಥಿಗಳು ಧರಿಸಿರುವ ಯಾವುದನ್ನೂ ಬಿಚ್ಚಿಸುವ ಅಗತ್ಯ ಇಲ್ಲ.
ಯಾವುದೇ ಬಗೆಯ ನಕಲು ಮಾಡುವ ಪ್ರಯತ್ನ, ಹೇಳಿಕೊಡುವ, ಹೇಳಿಸಿಕೊಳ್ಳುವ, ನಕಲಿಗೆ ಸಹಾಯ ಮಾಡುವವರ ವಿರುದ್ಧ ಕಠಿಣ ಕ್ರಮವನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳಬೇಕೇ ಹೊರತು ಪರೀಕ್ಷಾರ್ಥಿಗಳ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡುವ ಹಾಗೂ ಸಮಾಜದ ಶಾಂತಿಗೆ ಕಿಡಿ ಇಡುವವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಆಸ್ಪದ ನೀಡುವ ಕ್ರಮಗಳನ್ನು ಕೈಬಿಡಬೇಕು.
ಪರಿವೀಕ್ಷಕರಾಗಿ ಶಿಸ್ತಿನಿಂದ ಕಾರ್ಯನಿರ್ವಹಿಸಬಲ್ಲವರು ಸಾಕಷ್ಟು ಸಂಖ್ಯೆಯಲಿ ಸಿಗದಿದ್ದಲ್ಲಿ, ಆಯ್ದ ಇತರ ಇಲಾಖೆಗಳಿಂದಲೂ ಅಗತ್ಯ ಸಿಬ್ಬಂಧಿಯನು ತೆಗೆದುಕೊಳ್ಳುವ ಬಗ್ಗೆ ಆಲೋಚಿಸಬಹುದು.
Invigilator ತಾನೇ ಯಾರಿಂದಲೋ ಉತ್ತರ ಪತ್ರಿಕೆ ಪಡೆದು, ಅದರಲ್ಲಿನ ಉತ್ತರಗಳನು ಕೊಠಡಿಯ ಎಲ್ಲರಿಗೂ ಹಂಚುವ (ನನಗೀ ಅನುಭವ ಪದವಿ ಪರೀಕ್ಷೆಯಲಿ ಆಗಿದೆ) ಮೂಲಕ ಅಪರಾಧವೆಸಗುವ ಮತ್ತು ಕರ್ತವ್ಯಲೋಪ ಕೆಲಸ ಮಾಡಬಾರದಷ್ಚೇ.
ನಾ ಕಂಡ ಹಲವು ಮೇಷ್ಟ್ರುಗಳಲ್ಲಿ ಕೆಲವರು
ತಮ್ಮ ವಿದ್ಯಾರ್ಥಿಗಳಲ್ಲಿ ಜ್ಞಾನದೆಡೆಗೆ
ಆಸಕ್ತಿ, ಪ್ರೀತಿ, ಕುತೂಹಲ ಹಾಗೂ ದಾಹ ಹುಟ್ಟುಹಾಕುವುದಕ್ಕಿಂತ
ಸುಲಭವಾಗಿ ಅಂಕ ಗಳಿಸುವುದು ಹೇಗೆ ಹಾಗೂ ನಿಯಮಗಳನ್ನು ವಂಚಿಸಲು ಇರುವ ಅಡ್ಡದಾರಿಗಳು ಯಾವುವು ಎಂಬುದನ್ನೇ ಮುಖ್ಯ ಕಾರ್ಯಸೂಚಿಯನ್ನಾಗಿ ಇಟ್ಟುಕೊಂಡಿರುವುದು ಆತಂಕ ಮೂಡಿಸುತ್ತದೆ.
ಹೆಚ್ಚು ಶ್ರಮ ಪಡದೇ ಸುಲಭ ಮಾರ್ಗದಲಿ ಅಂಕ ಗಳಿಸಲು ಇರುವ ಒಳದಾರಿಗಳನ್ನು ಸಲಹೆ ರೂಪದಲಿ ಕೊಡುವ ಇವರು ಪರೀಕ್ಷೆಯನು ಪಾಸು ಮಾಡಲು ಇರುವ ಕಾಪಿ ಹೊಡೆಯುವ ಬಾಬತ್ತನ್ನು ನಿಯಂತ್ರಿಸುವ ಪ್ರಕ್ರಿಯೆಯನು ಪರಿಣಾಮಕಾರಿಯಾಗಿ ಜಾರಿ ತರುತ್ತಾರಾ ಎಂಬ ಸಂಶಯವಿದೆ.
ಪರಿವೀಕ್ಷಕರು ‘ನೀನ್ಹೆಂಗೆ ಕಾಪಿ ಹೊಡೀತೀಯ ನೋಡ್ತೀನಿ’ ; ಪರೀಕ್ಷಾರ್ಥಿಗಳು ‘ನೀನ್ಹೆಂಗೆ ಹಿಡೀತೀಯ ನೋಡ್ತೀನಿ’ ಎಂಬಂತೆ ಪರಸ್ಪರ ಪಂಥಾಹ್ವಾನ ಕೊಟ್ಟುಕೊಳ್ಳುವ ಮೂಲಕ ಈ ಪರೀಕ್ಷೆ ಎಂಬುದು ಪ್ರಹಸನವಾಗಿ ಪರಿವರ್ತನೆಯಾಗಿಬಿಟ್ಚಿದೆ.
ಬಹುತೇಕ ಶಿಕ್ಷಕರೇ ಆಗಿರುವ ಪರೀಕ್ಷಾ ಪರಿವೀಕ್ಷಕರು ತಮ್ಮಲ್ಲಿ ಪಾಠ ಕಲಿತ ವಿದ್ಯಾರ್ಥಿಗಳಿಗೆ ಪ್ರಾಮಾಣಿಕತೆ, ಆತ್ಮಗೌರವ, ನೈತಿಕತೆ, ಸಾಮಾಜಿಕ ನಡವಳಿಕೆಗಳನ್ನು ಹೇಳಿಕೊಟ್ಟಿದ್ದರೆ; ವಿದ್ಯಾಭ್ಯಾಸದ ಮೂಲ ಉದ್ದೇಶವನು ಮನವರಿಕೆ ಮಾಡಿಕೊಟ್ಟಿದ್ದರೆ; ಪರೀಕ್ಷೆಯ ಮಹತ್ವವನು ತಿಳಿ ಹೇಳಿದ್ದರೆ; ಬದುಕಿನಲಿ ಪರೀಕ್ಷೆಯ ಅಂಕಗಳಿಗಿಂತಲೂ ಹೆಚ್ಚಿನದಿನ್ನೇನೇನಿದೆ ಎಂಬುದನ್ನು ಮನನ ಮಾಡಿಸಿ ಆತ್ಮವಿಶ್ವಾಸ ಮೂಡಿಸಿದ್ದಿದ್ದರೆ ಈ ಕಳ್ಳಾ-ಪೋಲೀಸ್ ಆಟ ಆಡುವ ಅಗತ್ಯವಿರಲಿಲ್ಲ.
ಹಾಗೆಯೇ ಈ ಹಾಸ್ಯಾಸ್ಪದ ಜನಿವಾರ, ಉಡುದಾರ, ಹಿಜಾಬ, ತಾಳಿ ತೆಗೆಸುವ ಅಸಂಬದ್ಧ ನಿಯಮಗಳಿಂದ ಸಮಾಜದಲ್ಲಿನ ಶಾಂತಿ ಕದಡುವ ಕೆಲಸ ಮಾಡುತ್ತಿರಲಿಲ್ಲ.
ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಆದರ್ಶಪ್ರಾಯ ಗುರುಗಳಿಗೆ ನನ್ನ ನಮನಗಳು.
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
