ಬೆಂಗಳೂರು: ಇಂಡಿಯನ್ ಹಿಸ್ಟಾರಿಕಲ್ ಅಂಡ್ ಕಲ್ಚರಲ್ ರಿಸರ್ಚ್ ಫೌಂಡೇಶನ್ (FIHCR) ವತಿಯಿಂದ ಆಯೋಜಿಸಲಾದ “ಶ್ರೀ ಅರವಿಂದ ವಾರ್ಷಿಕ ಇತಿಹಾಸ ಪ್ರಬಂಧ ಸ್ಪರ್ಧೆ 2024–25” ಬಹುಮಾನ ವಿತರಣೆ ಸಮಾರಂಭದೊಂದಿಗೆ ಭಾನುವಾರ ಯಶಸ್ವಿಯಾಗಿ ಮುಕ್ತಾಯವಾಯಿತು. ಇತಿಹಾಸಕಾರ ಮತ್ತು ಲೇಖಕರಾದ ಡಾ. ವಿಕ್ರಮ್ ಸಂಪತ್ ಅವರ ನೇತೃತ್ವದಲ್ಲಿ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
FIHCR ಯುವ ವಿಭಾಗದಡಿ ನಡೆದ ಈ ಸ್ಪರ್ಧೆಯಲ್ಲಿ ದೇಶದಾದ್ಯಂತದ 6ರಿಂದ 9ನೇ ತರಗತಿವರೆಗಿನ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮರೆಯಾದ ನಾಯಕರು, ಪ್ರಸಿದ್ಧಿಯ ಹೊರಗಿನ ಸ್ಮಾರಕಗಳು ಮತ್ತು ಇತಿಹಾಸದ ಅಧ್ಯಯನಕ್ಕೆ ಹೊಸ ದೃಷ್ಟಿಕೋನಗಳನ್ನು ಹೊಂದಿರುವ ಪ್ರಬಂಧಗಳನ್ನು ವಿದ್ಯಾರ್ಥಿಗಳು ಬರೆದಿದ್ದರು.
ಪ್ರಖ್ಯಾತ ಲೇಖಕರು ಅಶ್ವಿನ್ ಸಾಂಗ್ಹಿ ಮತ್ತು ಅಮಿಷ್ ತ್ರಿಪಾಠಿ ಅವರ ನೇತೃತ್ವದ ಮೌಲ್ಯಮಾಪನ ಮಂಡಳಿ ಪ್ರಬಂಧಗಳನ್ನು ಪರಿಶೀಲಿಸಿ, ಉತ್ತಮ ಸಂಶೋಧನೆ, ನವೀನತೆ ಮತ್ತು ಸ್ಪಷ್ಟ ಬರವಣಿಗೆಯ ಆಧಾರದ ಮೇಲೆ ವಿಜೇತರನ್ನು ಆಯ್ಕೆಮಾಡಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ಹಾಜರಿದ್ದರು. ಅವರು ಮಾತನಾಡಿ, “FIHCR ಮತ್ತು ಓಲಾ ಫೌಂಡೇಶನ್ ತಂಡದ ಪ್ರಯತ್ನ ಪ್ರಶಂಸನೀಯ. ಯುವಕರಲ್ಲಿ ಭಾರತೀಯ ಇತಿಹಾಸದ ಬಗ್ಗೆ ಕುತೂಹಲ ಮತ್ತು ಹೆಮ್ಮೆಯನ್ನು ಬೆಳೆಸುವಂತಹ ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯ,” ಎಂದರು. ಅವರು ಶ್ರೀ ಅರಬಿಂದೋ ಅವರ ಕೃತಿಗಳನ್ನು ಓದಿ ಭಾರತೀಯತೆಯನ್ನು ಅರಿಯುವಂತೆ ಯುವಕರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಓಲಾ ಫೌಂಡೇಶನ್ ಅಧ್ಯಕ್ಷೆ ರಾಜಲಕ್ಷ್ಮೀ ಅಗರವಾಲ್ ಮತ್ತು ಮುಖ್ಯಸ್ಥ ದೇವೇಶ್ ವರ್ಮಾ ಗೌರವಾತಿಥಿಗಳಾಗಿ ಉಪಸ್ಥಿತರಿದ್ದರು. ಡಾ. ವಿಕ್ರಮ್ ಸಂಪತ್ ಅವರು ಯುವಜನರ ಇತಿಹಾಸಾಸಕ್ತಿಯನ್ನು ಉತ್ತೇಜಿಸುವ ಮಹತ್ವವನ್ನು ಉಲ್ಲೇಖಿಸಿದರು.
ನಾಲ್ಕು ತರಗತಿಗಳಲ್ಲಿ ಎಂಟು ವಿದ್ಯಾರ್ಥಿಗಳು ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ಗಳಿಸಿದರು. ಹನ್ನೆರಡು ವಿದ್ಯಾರ್ಥಿಗಳಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು. ವಿಜೇತರಿಗೆ ನಗದು ಬಹುಮಾನಗಳು, ಪ್ರಮಾಣಪತ್ರಗಳು ಮತ್ತು ಟ್ರೋಫಿಗಳು ವಿತರಿಸಲಾಯಿತು.
ಶೀಘ್ರದಲ್ಲೇ ಟಾಪ್ 100 ಪ್ರಬಂಧಗಳನ್ನು ಮುದ್ರಿತ ಮತ್ತು ಡಿಜಿಟಲ್ ಆವೃತ್ತಿಗಳಲ್ಲಿ ಪ್ರಕಟಿಸುವ ಯೋಜನೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.
