ನಮ್ಮ ಬಹುತೇಕ ಹಳ್ಳಿ, ಪಟ್ಚಣಗಳು ನೀರು ಲಭ್ಯವಿರುವಲ್ಲೇ ಸೃಷ್ಠಿಯಾದವು. ದೈನಂದಿನ ಬಳಕೆ, ಕೃಷಿ, ಪಶು ಸಂಗೋಪನೆ, ಕೈಗಾರಿಕಾ ಅಗತ್ಯಗಳಿಗೆ ನೀರು ಅತ್ಯಗತ್ಯ. ಹೊಳೆ, ನದಿ, ಬಾವಿ, ಕಾಲುವೆಗಳಲ್ಲದೇ ವರ್ಷದ ಎಲ್ಲಾ ಸಮಯದಲಿ ನೀರಿನ ಸಂಗ್ರಹ ಮೂಲವಾಗಿ ಕೆರೆಗಳು ಬಹುಮುಖ್ಯವಾದ ಪಾತ್ರ ನಿರ್ವಹಿಸುತ್ತಿವೆ.
ಪ್ರತೀ ಊರಿನಲ್ಲೂ ಇದ್ದ ಹಾಗೂ ಇರುವ ಕೆರೆಗಳ ವಿವರಗಳನ್ನು ಆಯಾ ಗ್ರಾಮ ಪಂಚಾಯ್ತಿಗಳ ಸೂಚನಾ ಫಲಕದಲಿ ನಕಾಶೆ, ವಿಸ್ತೀರ್ಣ, ಸರಹದ್ದು, ಹಿಂದಿನ ಹತ್ತು ವರ್ಷಗಳಲ್ಲಿ ಆ ಕೆರೆಗೆ ಆಗಿರುವ ಕಾಮಗಾರಿ, ಆಗಿರುವ ವೆಚ್ಚ, ನೀರು ಬರುವ ಹಾಗೂ ಹೊರಗೆ ಹರಿದು ಹೋಗುವ ಕಾಲುವೆಗಳ ವಿವರ, ಕೆರೆಗೆ ಇರುವ ಸಾರ್ವಜನಿಕ ದಾರಿ ಮುಂತಾದ ವಿವರಗಳನ್ನು ಪ್ರಕಟಿಸಬೇಕಿದೆ.
ಎಷ್ಟೋ ಕೆರೆಗಳು ಸಾರ್ವಜನಿಕ ಹಾಗೂ ಸಮುದಾಯದ ಆಸ್ತಿಯೆಂಬುದು ಆಯಾ ಗ್ರಾಮದವರಿಗೇ ಗೊತ್ತಿರುವುದಿಲ್ಲ.
ಸಾರ್ವಜನಿಕ ಕೆರೆಯ ಕಾಮಗಾರಿಯ ಹೆಸರಿನಲಿ ಪಕ್ಕದ ಹಿಡುವಳಿದಾರರಿಗೆ ಬೇಕಿರುವ ಕೆಲಸಗಳನು ಮಾಡಿಸಿಕೊಂಡು ಪಂಚಾಯ್ತಿಯ ಹಣ ದುರುಪಯೋಗವಾಗುತ್ತಿರುತ್ತದೆ. ಕೆರೆಯ ಪಕ್ಕದ ಹಿಡುವಳಿದಾರರು ಆ ಕೆರೆಯನ್ನು ತಮ್ಮ ಖಾಸಗಿ ಆಸ್ತಿಯಂತೆ ಬಳಸುತ್ತಿರುತ್ತಾರೆ; ಅಲ್ಲದೇ ಕೆರೆಯ ಆವರಣಕ್ಕೂ ಬೇಲಿ ಹಾಕಿ ಒತ್ತುವರಿ ಮಾಡಿ ಅತಿಕ್ರಮಣ ಮಾಡಿಕೊಂಡಿರುತ್ತಾರೆ. ಕೆರೆಯ ಸುತ್ತಲಿರುವವರು ನನಗಿಷ್ಟು, ನಿನಗಿಷ್ಟು ಎಂದು ತಮ್ಮ ಪಿತ್ರಾರ್ಜಿತ ಆಸ್ತಿಯೇನೋ ಎಂಬಂತೆ ನೀರು-ನೆಲವನ್ನು ದುರ್ಬಳಕೆ ಮಾಡಿಕೊಂಡಿರುತ್ತಾರೆ.
ಅತಿಕ್ರಮವನ್ನು ಗುರುತಿಸಿ, ಒತ್ತುವರಿಯನ್ನು ತೆರವುಗೊಳಿಸಬೇಕಾದ ನೌಕರರು ವಿನಾಕಾರಣ ಕಾಲಹರಣ ಮಾಡುತಿರುತ್ತಾರೆ. ಕರ್ತವ್ಯಲೋಪವೆಸಗುತ್ತಾ ಸಾರ್ವಜನಿಕ ಸಂಪನ್ಮೂಲವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಜೊತೆ ಕೈಜೋಡಿಸಿರುವ ನೌಕರರನ್ನು ಸಹಾ ಅಪರಾಧಿಗಳೆಂದು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ನಮ್ಮೂರ ಕೆರೆಗಳು ಎಲ್ಲಿವೆ, ಹೇಗಿವೆ, ಯಾವುದಕ್ಕೆ ಬಳಕೆಯಾಗ್ತಿವೆ ಹಾಗೂ ಅವುಗಳಿಗಾಗಿ ಜನರ ತೆರಿಗೆಯ ಹಣ ಎಷ್ಚು, ಯಾಕೆ ಮತ್ತು ಹೇಗೆ ಬಳಕೆಯಾಗಿದೆ ಎಂಬುದನು ತಿಳಿಯುವ ಹಕ್ಕು ಗ್ರಾಮದ ಪ್ರತಿಯೋರ್ವರದ್ದು.
