ಟಿ.ನರಸೀಪುರ : ಸರ್ಕಾರದ ಅವಿವೇಕಿ ನೀತಿಗಳಿಂದ ರೈತರು ಸೇರಿದಂತೆ ಶ್ರೀ ಸಾಮಾನ್ಯರು ಪರಿಪಾಟಲು ಪಡುವಂತ್ತಹ ದುಸ್ಥಿತಿ ನಿರ್ಮಾಣವಾಗಿದೆ.ಈ ಕಾರಣಕ್ಕಾಗಿಯೇ ದೇಶಕ್ಕೆ ಅನ್ನ ಹಾಕುವ ರೈತರ ರೋಧನೆಗಳು ಸರ್ಕಾರದ ಕಿವಿಗೆ ಮುಟ್ಟುತ್ತಿಲ್ಲವೆಂದು ರೈತ ಯುವ ಮುಖಂಡ ಸುಜ್ಜಲೂರು ಚಂದ್ರು ಆಕ್ರೋಶದ ಮಾತುಗಳನ್ನಾಡಿದರು.

ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ತಹಶಿಲ್ದಾರ್ ಟಿ.ಜಿ.ಸುರೇಶ್ ಆಚಾರ್ ಅಧ್ಯಕ್ಷತೆಯಲ್ಲಿ ಕರೆದಿದ್ದ ರೈತರ ಕುಂದು ಕೊರತೆಯ ಸಭೆಯಲ್ಲಿ ಮಾತನಾಡಿ ಕೋತಿಗಳು ಕಾಡಿನಿಂದ ನಾಡಿಗೆ ಬರಲು ಕಾರಣವೇನು…? ನಮ್ಮನ್ನಾಳುವ ಸರ್ಕಾರಗಳು ನಮಗೆ ಏನೂ ತಿಳಿಯದೆಂದು ಸಮಜಾಯಿಷಿ ನೀಡುತ್ತವೆ.ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಎಕರೆ ಅರಣ್ಯ ಪ್ರದೇಶದಲ್ಲಿ ಟೀ,ರಬ್ಬರ್ ಪ್ಲಾಂಟೇಷನ್ ಮಾಡುವವರಿಗೆ ಎಕರೆಗೆ ಎರೆಡು ಸಾವಿರ ರೂಗಳಂತೆ ಲೀಸ್ ಗೆ ಕೊಡುತ್ತಿರುವ ಸರ್ಕಾರಗಳನ್ನು ದೂಷಿಸಬೇಕಿದೆ.ಅಲ್ಲಿರುವ ಕೋತಿಗಳು,ಹಂದಿಗಳು ಸೇರಿದಂತೆ ಇತರೆ ಪ್ರಾಣಿಗಳು ಆಹಾರ ಹುಡುಕಿ ನಾಡಿಗೆ ಬಂದು ರೈತರು ಬೆಳೆದ ಬೆಳೆಗಳನ್ನು ನಾಶ ಪಡಿಸುತ್ತಿವೆ.ಇದಕ್ಕಾಗಿ ನಾವು ಕೋತಿಗಳನ್ನು ದೂರಲು ಸಾಧ್ಯವಿಲ್ಲ ಎಂದು ಸರ್ಕಾರದ ವಿರುದ್ಧ ಹರಿ ಹಾಯ್ದರು.

ಸ್ಥಳೀಯವಾಗಿ ಇರುವ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನಾವು ಏನೆಂದರೂ ಪ್ರಯೋಜನವಿಲ್ಲ. ಲೋಪವಿರುವುದು ಸರ್ಕಾರದ ಮಟ್ಟದಲ್ಲಿ.ಹತ್ತು ಸಾವಿರ ಎಕರೆ ಕಾಡನ್ನು ನಾಶ ಮಾಡಿದರೆ ಅಲ್ಲಿ ವಾಸಿಸುವ ಪ್ರಾಣಿಗಳು ಮೂಲ ಸ್ಥಾನವನ್ನು ಬದಲಾವಣೆ ಮಾಡುತ್ತವೆ.ಸರ್ಕಾರಗಳು ಕಾರ್ಖಾನೆಗಳನ್ನು ತೆರೆಯಲು ಅವಕಾಶ ಕೊಡುವ ಮೊದಲು ಸಾಧಕ,ಭಾದಕಗಳನ್ನು ಚರ್ಚಿಸಿ ನಿರ್ಧರಿಸಬೇಕೆಂದು ತಾಕೀತು ಮಾಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆಯ ಮೈಸೂರು ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಮಾತನಾಡಿ 2025 ರಲ್ಲಿ ಭತ್ತ ಖರೀದಿ ಕೇಂದ್ರವನ್ನು ಏಕೆ ತೆರೆದಿಲ್ಲಾ…ಅದಕ್ಕೆ ತಾಂತ್ರಿಕ ದೋಷವೇನಾದರು ಇದೆಯಾ…ಇದ್ದರೆ ಇಲಾಖೆ ದೋಷವೋ…ರಾಜಕೀಯ ದೋಷವೋ…ಹತ್ತು ವರ್ಷಗಳ ಕಾಲ ಸತತವಾಗಿ ತೆಗೆದಂತ್ತಹ ಭತ್ತ ಖರೀದಿ ಕೇಂದ್ರವನ್ನ ಈ ವರ್ಷ ಏಕೆ ತೆರೆದಿಲ್ಲ ಅಧಿಕಾರಿಗಳು ಸಭೆಗೆ ತಿಳಿಸಬೇಕೆಂದರು.

ಹಸಿಭತ್ತ,ಬಿಸಿಬೆಲ್ಲದ ನಾಡಿನಲ್ಲಿ ಲಕ್ಷಾಂತರ ಕ್ವಿಂಟಾಲ್ ಭತ್ತ ಬೆಳೆಯುತ್ತೇವೆ.ಕೇಂದ್ರ ಸರ್ಕಾರ ಹತ್ತು ಸಾವಿರ ಕೋಟಿ ರೂ ಬಿಡುಗಡೆ ಮಾಡಿದೆ.ಅನುದಾನ ಇದ್ದರೂ ಏಕೆ ಖರೀದಿ ಮಾಡಿಲ್ಲ.ಇದು ಯಾರ ವೈಪಲ್ಯ,ಒಂದು ಕ್ವಿಂಟಾಲ್ ಗೆ 500 ರೂಪಾಯಿ ಕಮ್ಮಿಗೆ ಭತ್ತ ಮಾರಿ ಎಕರೆಗೆ 15 ಸಾವಿರ ಲಾಸ್ ಮಾಡಿಕೊಂಡಿದ್ದು ಇದನ್ನು ಯಾರು ಭರಿಸುತ್ತಾರೆ.ಅಧಿಕಾರಿಗಳು ತಿಂಗಳಿಗೆ 1ಲಕ್ಷ ಪಡೆಯುವ ಸಂಬಳದಲ್ಲಿ 80 ಸಾವಿರ ಕೊಟ್ಟರೆ ಒಪ್ಪುತ್ತೀರ.ಸಂವಿಧಾನ ಪೀಠಿಕೆಯಲ್ಲಿ ಇರುವಂತೆ ಸರ್ಕಾರಗಳು ನಡೆಯುತ್ತಿವೆಯೇ,ಭೋದನೆ ಮಾಡಿದರಷ್ಟೇ ಸಾಲದು ಕಾರ್ಯ ರೂಪಕ್ಕೆ ತರಬೇಕೆಂದು ಸರ್ಕಾರದ ವಿರುದ್ಧ ಗುಡುಗಿದರು.
ತಾಲ್ಲೂಕಿನಲ್ಲಿರುವ ಕೆರೆಕಟ್ಟೆಗಳು ಶೇಕಡ 30 ರಷ್ಚು ಒತ್ತುವರಿಯಾಗಿವೆ.ಅದರಲ್ಲೂ ತಾಲ್ಲೂಕಿನ ಬನ್ನೂರು ಹೋಬಳಿಯ ಹೆಗ್ಗೆರೆ ಕರೆ ಶೇ. 40 ರಷ್ಚು ಒತ್ತುವರಿಯಾಗಿದೆ.ಕಳೆದ ಐದು ವರ್ಷದಿಂದೀಚೆಗೆ ಒತ್ತುವರಿಯಾಗಿದೆ.ಅಧಿಕಾರಿಗಳು ಗಮನ ಹರಿಸಿಲ್ಲ ಎಂದರೆ ಕೆರೆ ಬದಲು ಕಟ್ಚೆ ಆಗುತ್ತದೆ ಎಂದು ಅಧಿಕಾರಿಗಳ ನಿರ್ಲಕ್ಷವನ್ನು ದಾಖಲೆ ಸಮೇತ ವಿವರಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು ಜಿಲ್ಲಾ ಕಾರ್ಯಾಧ್ಯಕ್ಷರಾದ ಕಿರಗಸೂರು ಶಂಕರ್ ಮಾತನಾಡಿ ಪ್ರಾಣಿ ದಯಾ ಸಂಘದವರು ಪ್ರಾಣಿಗಳನ್ನು ಹಿಂಸಿಸಬಾರದು ಒಂದು ವೇಳೆ ಆಗೆ ಮಾಡಿದರೆ ಅವರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆಂದು ಕಾನೂನು ಮಾಡಿಸಿದ್ದಾರೆ.ಆದರೆ ಕೆಲವು ಪ್ರಾಣಿಗಳು ಮಂಗಗಳು,ಕಾಡು ಹಂದಿಗಳು,ಆನೆಗಳು ಸೇರಿದಂತೆ ಇತರೆ ಸೊಪ್ಪು,ತರಕಾರಿ,ಹಣ್ಣು,ಹಂಪಲು ತಿನ್ನುವ ಪ್ರಾಣಿಗಳಿಂದ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆಗಳನ್ನು ನಾಶ ಮಾಡಿ ಹೋಗುತ್ತಿದ್ದು ಸಾಲ,ಸೋಲ ಮಾಡಿ ಬೇಸಾಯ ಮಾಡಿದ ರೈತರು ಏನು ಮಾಡಬೇಕು…?ಅಂತಹ ಪ್ರಾಣಿಗಳಿಗೆ ಶಿಕ್ಷೆ ವಿಧಿಸುವವರು ಯಾರು…ನ್ಯಾಯ ಕೊಡುವವರು ಯಾರು…ಎಂದು ಪ್ರಶ್ನೆ ಮಾಡಿ ಇದಕ್ಕೆ ಅಧಿಕಾರಿಗಳು ಏನು ಪರಿಹಾರ ನೀಡುತ್ತೀರೆಂದಾಗ ಅಧಿಕಾರಿಗಳಿಗೆ ಉತ್ತರ ಸಿಗದೆ ಮೌನಕ್ಕೆ ಶರಣಾದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಹಣ ದಾಹ…ಬ್ಯಾಂಕುಗಳ ಕಿರುಕುಳ…ಅಕ್ರಮ ಗಣಿಗಾರಿಕೆ… ಕಾಡಿನಿಂದ ನಾಡಿಗೆ ಬಂದ ಮಂಗಗಳ ಉಪಟಳದಿಂದ ರೈತರು ಬೆದರಿ ಬೆಂಡಾಗಿ ಹೋಗಿದ್ದು ತಾಲ್ಲೂಕು ಆಡಳಿತ ರೈತರಿಗೆ ನ್ಯಾಯ ಹೊದಗಿಸಬೇಕೆಂಬ ಕೂಗು ಜೋರಾಗಿ ಕೇಳಿ ಬಂದಿತು.
ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ರೈತ ಮುಖಂಡರು ತಾಲ್ಲೂಕು ಅಧಿಕಾರಿಗಳ ಬಳಿ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳುವ ಮೂಲಕ ರೈತರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಣೆ ಮಾಡಬೇಕೆಂದರು. ಇದೇ ವೇಳೆ ಅಧಿಕಾರಿಯೋರ್ವರ ಬೇಜವಬ್ದಾರಿ ನೆಡೆಗೆ ರೈತ ಮುಖಂಡರಾದ ಕಳ್ಳೀಪುರ ಮಹದೇವಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಏರು ಧ್ವನಿಯಲ್ಲಿ ಮಾತನಾಡುವ ಮೂಲಕ ನೀವು ಪಡೆಯುವ ಸಂಬಳಕ್ಕೆ ತಕ್ಕಂತೆ ಕೆಲಸ ಮಾಡಿ ಎಂದರು.ರೈತರ ಸಮಸ್ಯೆಗಳನ್ನು ಬೇಗ ಬಗೆಹರಿಸಿ,ಅನ್ನದಾತನ ನೆರವಿಗೆ ತಾಲ್ಲೂಕು ಆಡಳಿತ ಮುಂದಾಗಬೇಕೆಂದು ಆಗ್ರಹಿಸಿದರು.
ರೈತರಿಗೆ ಅಧಿಕಾರಿಗಳು ಹೇಗೆ ನೆರವಾಗಬಹುದು,ಯಾವ,ಯಾವ ಇಲಾಖೆ ಹೋಬಳಿ ಮಟ್ಟಗಳಲ್ಲಿ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಕೊಡಬಹುದೆನ್ನುವ ಸಲಹೆಗಳನ್ನು ಹೇಳುವ ಮೂಲಕ ಸರ್ಕಾರದ ಗಮನ ಸೆಳೆಯಬೇಕೆಂಬ ಸಲಹೆಯನ್ನು ರೈತರೇ ನೀಡಿದರು.
ಸಭೆ ಆರಂಭಕ್ಕೆ ಮೊದಲು ರೈತಗೀತೆ,ನಾಡಗೀತೆಯನ್ನು ಹಾಡುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಮೂಲ ಸಂಘಟನೆಯ ಬನ್ನೂರು ನಾರಾಯಣ್,ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಿರಗಸೂರು ಶಂಕರ್,ಕರೋಹಟ್ಟಿ ಕುಮಾರಸ್ವಾಮಿ,ಕಳ್ಳೀಪುರ ಮಹದೇವಸ್ವಾಮಿ,ಕುರುಬೂರು ಸಿದ್ದೇಶ್ ಸೇರಿದಂತೆ ನೂರಾರು ರೈತ ಮುಖಂಡರು ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
-ಎಂ. ನಾಗೇಂದ್ರ ಕುಮಾರ್
ವರದಿಗಾರರು
