ಟಿ.ನರಸೀಪುರ : ಪರಿಶಿಷ್ಟ ಜಾತಿ ಸಮುದಾಯಗಳ ಜನರು ತಮ್ಮ ತಮ್ಮ ಮೂಲ/ಉಪಜಾತಿ ಹೆಸರು ಹಾಗೂ ಇನ್ನಿತರ ಮಾಹಿತಿಯನ್ನು ಸಮರ್ಪಕವಾಗಿ ನೀಡುವಂತೆ ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ನೀಡಲು ಮನವಿ ಮಾಡಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗ ಮೇ 5 ರಿಂದ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯಗಳ ಜಾತಿ ಜನಗಣತಿಯ ಸಮೀಕ್ಷೆ ಪ್ರಾರಂಭವಾಗಿದೆ. ಈ ಸಮೀಕ್ಷೆಯು 3 ಹಂತಗಳಲ್ಲಿ ನಡೆಯಲ್ಲಿದ್ದು ಮೊದಲನೆಯದಾಗಿ 05/05/2025 ರಿಂದ 17/05/2025ರ ವರೆಗೆ ಸಮೀಕ್ಷೆದಾರರಿಂದ ಮನೆ-ಮನೆ ಭೇಟಿ ಸಮೀಕ್ಷೆ ನಡೆಯುತ್ತದೆ. ಎರಡನೆಯದಾಗಿ 19/05/2025 ರಿಂದ 21/05/2025ರ ವರೆಗೆ ತಮ್ಮ ತಮ್ಮ ಏರಿಯಾದ ಬೂತ್ ಮಟ್ಟದ ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ನಡೆಯುತ್ತದೆ. ಮೂರನೆಯದಾಗಿ 19/05/2025ರಿಂದ 23/05/2025ರ ವರೆಗೆ ತಮ್ಮ ತಮ್ಮ ಮೊಬೈಲ್ ನಿಂದ ಆನ್ ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಂಡು ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾದ ಅವಕಾಶವಿರುತ್ತದೆ.
ಹಾಗಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಹೊಲಯ, ಮಾದಿಗ, ಕೊರಮ, ಕೊರಚ, ಭೋವಿ, ಲಂಬಾಣಿ, ಅರುಂದತಿಯಾರ್….. ಮುಂತಾದ ಪರಿಶಿಷ್ಟ ಜಾತಿ-ಸಮುದಾಯಗಳ ಜನರು ತಮ್ಮ ತಮ್ಮ ಮೂಲ ಉಪಜಾತಿಗಳ ಹೆಸರನ್ನು ಕಡ್ಡಾಯವಾಗಿ ಯಾವುದೇ ಅಳುಕು ಹಿಜರಿಕೆ ಪಡದೆ ಸಮೀಕ್ಷೆದಾರರಿಗೆ ನೀಡಬೇಕು.
ಮುಖ್ಯವಾಗಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಜಾತಿ ಸರ್ಟಿಫಿಕೇಟ್ ಪಡೆದಿರುವವರೂ ಕೂಡ ಕಡ್ಡಾಯವಾಗಿ ತಮ್ಮ ತಮ್ಮ ಮೂಲ ಉಪಜಾತಿಗಳ ಹೆಸರನ್ನು ನಮೂದಿಸಲೇಬೇಕು.ಏಕೆಂದರೆ ಪರಿಶಿಷ್ಟ ಜಾತಿಯಲ್ಲಿರುವ ಎಲ್ಲಾ ಉಪಜಾತಿಗಳಿಗೂ ಅವರವರ ಜಾತಿ ಜನಸಂಖ್ಯೆಗನುಗುಣವಾಗಿ ಮೀಸಲಾತಿಯಲ್ಲಿ ಅವರವರ ನ್ಯಾಯಯುತವಾದ ಪಾಲು ಅವರಿಗೆ ಸಿಗಲೇಬೇಕು, ಯಾರಿಗೂ ಅನ್ಯಾಯವಾಗಬಾರದು. ಆಗಾಗಬೇಕಾದರೆ ಈ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಜನರು ಪಾಲ್ಗೊಳ್ಳಲೇಬೇಕು.
ಹಾಗಾಗಿ SC ಸಮುದಾಯಗಳ ಕಾಲೇಜು ವಿದ್ಯಾರ್ಥಿಗಳು, ವಿದ್ಯಾವಂತ ಯುವಜನರು, ನೌಕರರು – ನಿವೃತ್ತ ನೌಕರರು ಹಾಗೂ ದಲಿತ ಚಳವಳಿಯ ಕಾರ್ಯಕರ್ತರು ತಮ್ಮ ತಮ್ಮ ಊರು – ಕೇರಿಗಳು, ವಾರ್ಡ ಮತ್ತು ಬ್ಲಾಕ್ ಗಳಲ್ಲಿರುವ ನಿಮ್ಮ ಸ್ನೇಹಿತರಿಗೆ, ಬಂಧು – ಬಳಗ ನೆಂಟರಿಷ್ಟರುಗಳಿಗೆಲ್ಲಾ ಈ ಸಮೀಕ್ಷೆಯ ಮಹತ್ವವನ್ನು ಮನವರಿಕೆ ಮಾಡಿಕೊಡುವ ಮೂಲಕ ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕೆಂದು ವಿನಂತಿಸುತ್ತೇನೆಂದರು.
–-ಎಂ. ನಾಗೇಂದ್ರ ಕುಮಾರ್

[…] […]