ಹಾಸನ: ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಮಾವೇಶ ಮಾಡಿದರೆ ಸಾಲದು, ಅಭಿವೃದ್ಧಿ ಕೆಲಸ ಮಾಡುವುದು ಮುಖ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಕನ್ನಡಿಗರ ಬದುಕಿಗೆ ಶಾಪವಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿ ದುಸ್ಥಿತಿಯತ್ತ ಸಾಗಿದ್ದು ಹಿಂದೆಂದೂ ಕಾಣದ ವಸೂಲಿ ಸರ್ಕಾರವನ್ನು ಜನ ನೋಡುವಂತಾಗಿದೆ ಎಂದು ಟೀಕಿಸಿದರು .
ರಾಜ್ಯ ಇಂದು ಆರ್ಥಿಕ ದಿವಾಳಿಯಾಗಿದ್ದು ಶೂನ್ಯ ಅಭಿವೃದ್ಧಿ ಕಾಣುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಸಾಮಾಜಿಕ ನ್ಯಾಯದ ಕಗ್ಗೋಲೆ ಮತ್ತು ವ್ಯಾಪಕ ಭ್ರಷ್ಟಾಚಾರದಿಂದ ಜನರು ನಲುಗಿದ್ದಾರೆ. ಜನಾದೇಶಕ್ಕೆ ಈ ರೀತಿಯ ಆಡಳಿತ ಜನರಿಗೆ ದ್ರೋಹವೆಸಗಿದಂತಾಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರ ವ್ಯಾಪಕವಾಗಿದ್ದು ವಸೂಲಿ ಸರ್ಕಾರವಾಗಿ ಹಗರಣಗಳ ಸುರಿಮಳೆಯನ್ನೇ ಮಾಡಿದೆ. 60% ಕಮಿಷನ್ ಸರ್ಕಾರ ಎಂಬ ಕಪ್ಪು ಚುಕ್ಕಿಯೊಂದಿಗೆ ಪ್ರತಿ ಟೆಂಡರ್ ನಲ್ಲೂ ಕಮಿಷನ್ ದಂಧೆ ನಡೆಯುತ್ತಿದೆ. ಈ ಮೂಲಕ ರಾಜ್ಯವನ್ನು ಕಾಂಗ್ರೆಸ್ ಪಕ್ಷದ ಎಟಿಎಂ ಆಗಿ ಪರಿವರ್ತಿಸಿದ್ದು ಕರ್ನಾಟಕದಲ್ಲಿ ಲೂಟಿ ಮಾಡಿದ ಹಣವನ್ನು ಹೈಕಮಾಂಡ್ ಗೆ ಮತ್ತು ಇತರ ರಾಜ್ಯಗಳಿಗೆ ಅಕ್ರಮವಾಗಿ ಸಾಗಿಸುತ್ತಿದೆ ಎಂದು ದೂರಿದರು.
ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಮೇಲೆ 14 ಮುಡಾ ನಿವೇಶನ ಹಗರಣ, ಅವರ ಸರ್ಕಾರದ ಸಚಿವರ ವಾಲ್ಮೀಕಿ ನಿಗಮದ 187 ಕೋಟಿ ಲೂಟಿ ಹಗರಣ, ಸ್ಮಾರ್ಟ್ ಮೀಟರ್ ಹೆಸರಿನಲ್ಲಿ 15,568 ಕೋಟಿ ಹಗರಣದ ಶಂಕೆ ಇವೆಲ್ಲವೂ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಉದಾಹರಣೆಗಳಾಗಿವೆ ಎಂದು ಲೇವಡಿ ಮಾಡಿದರು.
ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಮಾವೇಶ ಮಾಡಲು ಹೊರಟಿದೆ ಆದರೆ ಆಯಾ ಕ್ಷೇತ್ರಗಳಿಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡದೆ ಅಭಿವೃದ್ಧಿ ಕುಂಠಿತವಾಗಿದೆ. ಈ ರೀತಿ ದುರಾಡಳಿತ ನೀಡಿದರೆ ಸಮಾವೇಶಕ್ಕೆ ಯಾವ ಅರ್ಥವಿರುತ್ತದೆ ಜನರೇ ಇದನ್ನು ತೀರ್ಮಾನಿಸಲಿದ್ದಾರೆ ಎಂದರು.
ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ, ಹಾಲು, ನೀರು, ವಿದ್ಯುತ್, ಡೀಸೆಲ್ ಬೆಲೆ ವಿವಿಧ ತೆರಿಗೆ ಮತ್ತು ಶುಲ್ಕಗಳ ವಿಪರೀತ ಹೆಚ್ಚಳದಿಂದಾಗಿ ಬಡವರು ಮಧ್ಯಮ ವರ್ಗದವರು ತೀರಾ ಸಂಕಷ್ಟಕೀಡಾಗಿದ್ದಾರೆ, ಒಟ್ಟಾರೆ ಜನಸಾಮಾನ್ಯರ ಬದುಕೆ ಸಂಪೂರ್ಣ ದುಸ್ತರವಾಗಿದೆ ಎಂದು ಟೀಕಿಸಿದರು .
ರಾಜ್ಯ ಸರ್ಕಾರ ಆಡಳಿತಕ್ಕೆ ಬಂದು 10 ತಿಂಗಳಲ್ಲೇ 697 ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ರೈತರೆಲ್ಲ ಪರಿಹಾರಕ್ಕಾಗಿಯೇ ಸಾಯುತ್ತಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲರ ಬೇಜವಾಬ್ದಾರಿ ಅಮಾನವೀಯ ಹೇಳಿಕೆ ಎಷ್ಟು ಸರಿ!? ಎಂದು ಪ್ರಶ್ನಿಸಿದರು.
ಆರೋಗ್ಯ ವ್ಯವಸ್ಥೆಯು ಸಂಪೂರ್ಣ ಹದಗೆಟ್ಟು ಹೋಗಿದ್ದು ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರ ಸಾವು ಹೆಚ್ಚಾಗಿದೆ. ಆರೋಗ್ಯ ಇಲಾಖೆಯಲ್ಲಿ 2600 ವೈದ್ಯ ಸಿಬ್ಬಂದಿ ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡಿಲ್ಲ, ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನು ರಾಜ್ಯ ಸರ್ಕಾರ ಮುಚ್ಚಲು ಹೊರಟಿರುವುದು ಆಡಳಿತ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಖಜಾಂಚಿ ಶೋಭನ್ ಬಾಬು, ನಗರಾಧ್ಯಕ್ಷ ಯೋಗೀಶ್, ಮಂಜು ಇತರರು ಉಪಸ್ಥಿತರಿದ್ದರು.
ಆನೆ ಬಾಯಿಗೆ ಅರೆಕಾಸಿನ ಮಜ್ಜಿಗೆ:
ಆಲೂರು ಸಕಲೇಶಪುರ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಇದುವರೆಗೆ ಕೇವಲ 20 ಕೋಟಿ ಹಣ ಬಿಡುಗಡೆಯಾಗಿದ್ದು ಆನೆಬಾಯಿಗೆ ಅರೆಕಾಸಿನ ಮಜ್ಜಿಗೆ ಅಂತಾಗಿದೆ ಎಂದು ಸಿಮೆಂಟ್ ಮಂಜು ಟೀಕಿಸಿದರು .
ಶಾಸಕರ ನಿಧಿಯಾಗಿ ನಾಲ್ಕು ಕೋಟಿ, ಆರ್ಡಿಪಿಆರ್ ಇಲಾಖೆಗೆ 10 ಕೋಟಿ, ಎಸ್ ಸಿಪಿ, ಟಿಎಸ್ಪಿ ಎರಡು ಕೋಟಿ, ಸಣ್ಣ ನೀರಾವರಿ ಇಲಾಖೆಗೆ ಒಂದು ಕೋಟಿ ಸೇರಿದಂತೆ ಸುಮಾರು 20 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ 120 ಕಿಲೋಮೀಟರ್ ವ್ಯಾಪ್ತಿ ಇರುವ ಕ್ಷೇತ್ರದ ಅಭಿವೃದ್ಧಿಗೆ ಇಷ್ಟು ಹಣ ಸಾಕೆ, 48 ಪಂಚಾಯಿತಿಗಳಿರುವ ಒಂದು ಪುರಸಭೆ ,ಒಂದು ಪಟ್ಟಣ ಪಂಚಾಯಿತಿಗೆ ಇಷ್ಟು ಹಣ ಸಾಕಾಗಲಿದೆಯೇ ಎಂದು ಪ್ರಶ್ನಿಸಿದರು.
ಉಡಾಫೆ ಉತ್ತರ:
ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ. ಕಾಡಾನೆ ಸಮಸ್ಯೆ ಇದೆ ಎಂದು ಗ್ರಾಮಸ್ಥರು ದೂರವಾಣಿ ಕರೆ ಮಾಡಿದರೆ ಸರ್ಕಾರಕ್ಕೆ ಹಾಗೂ ನಿಮ್ಮ ಶಾಸಕರಿಗೆ ತಿಳಿಸಿ ಎಂದು ಉಡಾಫೆಯ ಉತ್ತರ ನೀಡುತ್ತಿರುವ ಹಲವು ಉದಾಹರಣೆಗಳನ್ನು ಕಂಡಿದ್ದೇನೆ. ಈ ಸಂಬಂಧ ಕಳೆದ ಬಾರಿಯ ಅಧಿವೇಶನದಲ್ಲಿ ಹಕ್ಕು ಚ್ಯುತಿ ಮಂಡಿಸಿದ್ದೇನೆ. ಆದರು ಪ್ರಯೋಜನ ವಾಗಿಲ್ಲ ಎಂದು ಸಿಮೆಂಟ್ ಮಂಜು ಅಸಮಾಧಾನ ವ್ಯಕ್ತಪಡಿಸಿದರು. ಅರಣ್ಯ ಇಲಾಖೆಯಲ್ಲಿ ಇಟಿಎಫ್ ಎಸಿಎಫ್ ಗಳಿಗೆ ಸಮರ್ಪಕ ವಾಹನವಿಲ್ಲದೆ ಪರದಾಡುವಂಥಾಗಿದೆ ಎಂದರು.
