ಟಿ.ನರಸೀಪುರ : ಲೋಕಾಯುಕ್ತರಿಗೆ ದೂರು ನೀಡಲು ಬಾರದ ಸಾರ್ವಜನಿಕರು. ಕೇವಲ 21 ಅರ್ಜಿಗಳಷ್ಟೇ ಸ್ವೀಕಾರ. ಕಂದಾಯ,ತಾಲ್ಲೂಕು ಪಂಚಾಯತಿ, ಅಬಕಾರಿ ಹಾಗೂ ಪಿ.ಆರ್.ಇ.ಡಿ.ಇಲಾಖೆಗಳ ವಿರುದ್ಧ ದೂರು. ಸಾರ್ವಜನಿಕ ಸೇವೆಯಲ್ಲಿ ದೂರುಗಳು ಬಾರದಂತೆ ಕರ್ತವ್ಯ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಲೋಕಾಯುಕ್ತ ಡಿವೈಎಸ್ಪಿ ವೆಂಕಟೇಶ್ ತಾಕೀತು.
ಪಟ್ಟಣದ ಗುರು ಭವನದಲ್ಲಿ ಲೋಕಾಯುಕ್ತ ಅಧಿಕಾರಿಗಳು ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳಿಗೆ ಮಿನಿಮಮ್ ಸಾಮಾನ್ಯ ಜ್ಞಾನವಿರಬೇಕು. ಕಚೇರಿಗಳಿಗೆ ತಮ್ಮ ಕೆಲಸಗಳಿಗಾಗಿ ಬರುವ ಸಾಮಾನ್ಯ ನಾಗರೀಕರನ್ನು ಕಾಯಿಸದೇ, ವಿಳಂಬ ನೀತಿ ಅನುಸರಿಸದೇ ಕೆಲಸ ಮಾಡಿಕೊಡಬೇಕು. ನಿಮ್ಮ ಸ್ವಂತದವರು, ಆತ್ಮೀಯರು ಬಂದಾಗ ನಿಮ್ಮ ಸಿಬ್ಬಂದಿ ಕರೆದು ಬೇಗ ಅವರ ಕೆಲಸ ಮಾಡಿ ಕಳಿಸು ಎಂದು ಹೇಳುವ ಆಗೆಯೇ ಸಾಮಾನ್ಯರನ್ನೂ ಕಾಣಬೇಕು. ಸರ್ಕಾರದ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂದರು.
ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿ ತಾಲ್ಲೂಕಿನ ವಿವಿಧ ಭಾಗಗಳಿಗೆ ವಿಸಿಟ್ ಮಾಡಲು ಹೋಗುವಾಗ ಕೆಲವು ನಿಬಂಧನೆಗಳನ್ನು ಇನ್ನು ಮುಂದೆ ಕಡ್ಡಾಯವಾಗಿ ಪಾಲಿಸಲೇಬೇಕು.ನಾವು ಮುಂದಿನ ಭಾರಿ ಏಕಾಏಕಿ ಭೇಟಿ ನೀಡಿದಾಗ ನಿಬಂಧನೆಗಳನ್ನು ಪಾಲಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಪ್ರತಿ ಇಲಾಖೆಯ ಕಚೇರಿಗಳಲ್ಲಿ ಕಡ್ಡಾಯವಾಗಿ ಲೋಕಾಯುಕ್ತ ನಾಮಫಲಕವನ್ನು ಅಳವಡಿಸಬೇಕು. ಕಚೇರಿಗೆ ಬರುವ ಸಾರ್ವಜನಿಕರಿಗೆ ಅಧಿಕಾರಿಗಳಿಂದ ತೊಂದರೆ ಆದಾಗ ನಾಮಫಲಕ ನೋಡಿ ಸ್ಥಳದಲ್ಲೇ ದೂರು ನೀಡಲು ಸಹಾಯಕವಾಗುತ್ತದೆ.ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಿ ಸಾರ್ವಜನಿಕರ ಉತ್ತಮ ಸೇವೆ ಹೊದಗಿಸಬೇಕು.ಉಢಾಫೆ,ದರ್ಪ,ಎಲ್ಲವನ್ನೂ ಮೂಟೆ ಕಟ್ಚಿ ಜನರ ಸೇವೆ ಮಾಡಬೇಕು. ಭ್ರಷ್ಟಾಚಾರ ಎಂಬುದು ಅತ್ಯಂತ ಕೆಟ್ಟ ಖಾಯಿಲೆ ಅದಕ್ಕೆ ಕಡಿವಾಣ ಹಾಕಬೇಕೆಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿ ಕುಂದು ಕೊರತೆ ಸಭೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿ.ಸೀಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಕರ್ತವ್ಯ ಲೋಪದ ಬಗ್ಗೆ ಲೋಕಾಯುಕ್ತಕ್ಕೆ ವಿಶ್ವಮಾನವ ಸೇವಾ ಸಂಸ್ಥೆ ಅಧ್ಯಕ್ಷ ಎಸ್ ಕೆ ರಾಜೂಗೌಡ ದೂರು ನೀಡಿ ಬನ್ನೂರು ಹೋಬಳಿ ಸೀಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ರವರು ಬಲಾಢ್ಯರ ಅಣತಿಯಂತೆ ಕೆಲಸ ನಿರ್ವಹಣೆ ಮಾಡುತ್ತಿದ್ದು, ನೊಂದಾಯಿತ ವಿಭಾಗ ಪತ್ರದಂತೆ ಇ-ಸ್ವತ್ತು ಖಾತೆ ಬದಲಾವಣೆ ಮಾಡಲು ಅವರ ಒಪ್ಪಿಗೆ ನೀಡಿದರೆ ಮಾತ್ರ ಖಾತೆ ಬದಲಾವಣೆ ಮಾಡುವ ಪರಿಸ್ಥಿತಿ ಇದೆ,ಸಮಯಕ್ಕೆ ಸರಿಯಾಗಿ ಕಛೇರಿಗೆ ಬರುತ್ತಿಲ್ಲ ಹಾಗೂ ಕಛೇರಿಯಲ್ಲಿ ಸರಿಯಾಗಿ ಸಾರ್ವಜನಿಕರಿಗೆ ಸಿಗುತ್ತಿಲ್ಲ, ಲೋಕಾಯುಕ್ತ ಸಂಸ್ಥೆಯ ಬಗ್ಗೆ ಕಛೇರಿಯಲ್ಲಿ ಮಾಹಿತಿ ಫಲಕ ಹಾಕಿಲ್ಲ, ಗ್ರಂಥಾಲಯ ನಿರ್ವಹಣೆ ಬಗ್ಗೆ ಗಮನ ಹರಿಸುತ್ತಿಲ್ಲ,ಕೆರೆ,ಕಟ್ಟೆಗಳ ರಕ್ಷಣೆಗೆ ಕ್ರಮ ಕೈಗೊಳ್ಳುತ್ತಿಲ್ಲ,ಕೇಂದ್ರ ಸ್ಥಾನದಲ್ಲಿ ಉಳಿಯುತ್ತಿಲ್ಲ, ಬಲಾಡ್ಯ ಹಿಡಿತಕ್ಕೆ ಪಂಚಾಯಿತಿ ನೀಡಿ ಕಾನೂನುಬಾಹಿರ ಕೆಲಸಗಳಿಗೆ ಪಂಚಾಯಿತಿ ಕಛೇರಿಯನ್ನೇ ಬಳಸುತ್ತಿದ್ದಾರೆಂದು ಗಂಭೀರವಾಗಿ ಆರೋಪಿಸಿದರು.

ಮುಂದುವರಿದು ಮಾತನಾಡಿ ಇವರ ಕರ್ತವ್ಯ ಲೋಪದ ಬಗ್ಗೆ ಪ್ರಶ್ನಿಸಿದರೇ ಕಛೇರಿಯಲ್ಲಿಯೇ ಹಲ್ಲೆಮಾಡಲು ಒಂದು ಗುಂಪು ಬಂದು ಮುಂದಾಗುತ್ತಾರೆ, ಸ್ವಚ್ಚತಾ ವಾಹನ ಬಲಾಡ್ಯರ ಖಾಸಗಿ ಕೆಲಸಗಳಿಗೆ ಬಳಸಲಾಗುತ್ತಿದೆ, ಇದಕ್ಕಾಗಿ ಕಛೇರಿಯ ಸಿಸಿಟಿವಿಯನ್ನು ಉದ್ದೇಶಪೂರ್ವಕವಾಗಿ ನಿಷ್ಕ್ರಿಯಗೊಳಿಸಿದ್ದಾರೆ ಕೇಳಿದರೆ ರಿಪೇರಿ ಎಂಬ ಮಾಮೂಲಿ ಸಿದ್ಧ ಉತ್ತರ ನೀಡುತ್ತಾರೆ, ಪಿಡಿಒ ಸೇರಿದಂತೆ ನೌಕರರು ಗುರುತಿನ ಕಾರ್ಡ್ ನ್ನು ಕೊರಳಿನಲ್ಲಿ ಧರಿಸುತ್ತಿಲ್ಲ, ಸ್ವಚ್ಚತಾ ನೌಕರರಿಗೆ ಯಾವುದೇ ಪರಿಕರಗಳನ್ನು ನೀಡದೇ ಕೆಲಸ ಮಾಡಿಸುತ್ತಿದ್ದಾರೆ.
ವಾರ್ಡ್ ಮತ್ತು ಗ್ರಾಮಸಭೆಗಳನ್ನು ನಿಯಮಾನುಸಾರ ನಡೆಸದೆ ಗ್ರಾಮದ ಕೊಳಚೆ ನೀರು ನೇರವಾಗಿ ಕೆರೆ ಮತ್ತು ನಾಲೆಗೆ ಸೇರುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ಗ್ರಾಮದ ನಕಾಶೆ ರಸ್ತೆಗಳ ಒತ್ತುವರಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರಿ ಆಸ್ತಿಗಳ ರಕ್ಷಣೆಗೆ ಕ್ರಮ ಕೈಗೊಳ್ಳುತ್ತಿಲ್ಲ. ಮುಖ್ಯವಾಗಿ ಡಿಮ್ಯಾಂಡ್ ರಿಜಿಸ್ಟರ್ ವಹಿಗೆ ರಕ್ಷಣೆ ಇಲ್ಲವಾಗಿದೆ ಆದ್ದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಮುಖ್ಯವಾಗಿ ಲೋಕಾಯುಕ್ತ ಅಧಿಕಾರಿಗಳು ಸೀಹಳ್ಳಿ ಗ್ರಾಮ ಪಂಚಾಯಿತಿ ಕಛೇರಿಗೆ ಖುದ್ದು ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಬೇಕು ದೂರು ನೀಡಿದರು.
ಸೋಸಲೆ ಗ್ರಾಮದ ಶಿವಕುಮಾರ್ ಬಡ್ಡು ಮಾತನಾಡಿ ಲೋಕಾಯುಕ್ತ ಅಧಿಕಾರಿಗಳು ಇಲ್ಲಿಯವರೆವಿಗೂ ಎಷ್ಚು ಜನಕ್ಕೆ ನ್ಯಾಯ ಕೊಡಿಸಿದ್ದೀರಿ.ಅಧಿಕಾರಿಗಳಿಗೆ ನಿಮ್ಮ ಮೇಲೆ ಭಯ ಇದೆಯಾ…ಜನರಿಗೆ ನಿಮ್ಮ ಮೇಲೆ ಗೌರವವಿದೆಯಾ… ಆ ರೀತಿಯಾಗಿ ನಿಮ್ಮ ಕಾರ್ಯ ವೈಖರಿ ಇದೆಯಾ…ಈ ಕಾರ್ಯಕ್ರಮ ಎಷ್ಟ ಮಟ್ಚಿಗೆ ಯಶಸ್ವಿಯಾಗಿದೆ ಎಂದು ಪ್ರಶ್ನಿಸಿದಾಗ ಲೋಕಾಯುಕ್ತ ಅಧಿಕಾರಗಳು ಗರಂ ಆಗಿಯೇ ಉತ್ತರಿಸಿ ನಿಮ್ಮ ಮೇಲೆ ಗೌರವ ಬರಬೇಕೆಂದರೆ ನಿಮ್ಮ ಸರದಿ ಬಂದಾಗ ಮಾತನಾಡಿ ಅದು ಬಿಟ್ಚು ಮದ್ಯದಲ್ಲಿ ಬಂದು ತೊಂದರೆ ಕೊಡಬಾರದೆಂದು ಎಚ್ಚರಿಸಿದರು.
ಅಂತಿಮವಾಗಿ ಡಿವೈಎಸ್ಪಿ ವೆಂಕಟೇಶ್ ರವರು ಮಾತನಾಡಿ ಈಗ ಕೊಟ್ಚಿರುವ ಅರ್ಜಿಗಳನ್ನು ಅರ್ಜಿದಾರರು 15 ದಿನಗಳ ನಂತರ ನಮ್ಮ ಕಚೇರಿಗೆ ಬಂದು ಅಥವಾ ದೂರವಾಣಿ ಕರೆ ಮಾಡಿದರೆ ನಿಮ್ಮ ಅರ್ಜಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲಾಗುವುದೆಂದರು.ಯಾವುದೇ ಮುಚ್ಚು ಮರೆ ಇರುವುದಿಲ್ಲ.ಪಾರದರ್ಶಕವಾಗಿ ಸಾರ್ವಜನಿಕ ಕೆಲಸಗಳು ಆಗುತ್ತವೆಂದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಉಮೇಶ್,ತಹಶಿಲ್ದಾರ್ ಟಿ.ಜಿ.ಸುರೇಶ್ ಆಚಾರ್,ಇಒ ಅನಂತರಾಜು,ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ್,ತಾ.ಪಂ.ಯೋಜನಾಧಿಕಾರಿ ರಂಗಸ್ವಾಮಿ ಸೇರಿದಂತೆ ತಾಲ್ಲೂಕಿನ ಇಲಾಖಾವಾರು ಅಧಿಕಾರಿಗಳು ಹಾಜರಿದ್ದರು.
– ಎಂ.ನಾಗೇಂದ್ರ ಕುಮಾರ್
