ಟಿ.ನರಸೀಪುರ : ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ರಾಜ್ಯ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರನ್ನು ಭೇಟಿ ಮಾಡಿ ಕಬ್ಬು ಬೆಳೆಗಾರ ರೈತರ ಸಮಸ್ಯೆಗಳನ್ನು ಚರ್ಚಿಸಿ ಕೂಡಲೇ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯ ಪತ್ರ ಸಲ್ಲಿಸಲಾಗಿದೆ.
ಪ್ರಸಕ್ತ 2025-2026 ನೇ ಸಾಲಿಗೆ ಕಬ್ಬಿನ ಎಫ್ ಆರ್ ಪಿ ದರ ಟನ್ ಗೆ ಕೇವಲ 150/- ರೂ ಏರಿಕೆ ಮಾಡಿರುವುದು
ಅವೈಜ್ಞಾನಿಕವಾಗಿದ್ದು ಪುನರ್ ಪರಿಶೀಲನೆ ಮಾಡಿಸಿ ಸಿ ಎ ಸಿ ಪಿ ವರದಿಯಂತೆ ಟನ್ ಕಬ್ಬಿಗೆ -4500/- ರೂ ಬೆಲೆ ನಿಗದಿ ಪಡಿಸಿ,ಸಕ್ಕರೆ ಕಾರ್ಖಾನೆಗಳಿಂದ ಕಳೆದ ವರ್ಷದ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಿ,ಕಳೆದ ವರ್ಷ ಸರ್ಕಾರ ಹೆಚ್ಚುವರಿಯಾಗಿ ಟನ್ ಗೆ 150/- ರೂ ಬೆಲೆ ನಿಗದಿ ಪಡಿಸಿದ್ದು, ಕಾರ್ಖಾನೆಗಳು ಇನ್ನು ಕೊಟ್ಟಿರುವುದಿಲ್ಲ 950/- ಕೋಟಿ ಹಣ ಬಾಕಿ ಇದ್ದು ತಕ್ಷಣವೇ ಕೊಡಿಸಬೇಕು.ಕಬ್ಬಿನ ಎಫ್ ಆರ್ ಪಿ ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಿ,ಸಕ್ಕರೆ ಕಾರ್ಖಾನೆಗಳಿಂದ ಸಕ್ಕರೆ ಮೋಸ ತಪ್ಪಿಸಲು ಇಳುವರಿ ಮಿತಿ ಕನಿಷ್ಟ 9 ಕೆ ಜಾರಿ ಆಗಬೇಕು.
ಬೆಂಕಿ ಬಿದ್ದು ಸುಟ್ಟ ಕಬ್ಬಿಗೆ ಕಾರ್ಖಾನೆಗಳು ಕಬ್ಬಿನ ಹಣದಲ್ಲಿ ಶೇಕಡ 25 ರಷ್ಟು ಹಣ ಕಡಿತ ಮಾಡುವುದನ್ನು ತಪ್ಪಿಸಿ,ಕಬ್ಬಿನ ತೂಕದಲ್ಲಿ ಮೋಸ ತಪ್ಪಿಸಲು ಕಾರ್ಖಾನೆಗಳ ಮುಂದೆ ತೂಕದ ಯಂತ್ರ ಸ್ಥಾಪಿಸಬೇಕು.
ಕಬ್ಬು ಕಟಾವು ಯಂತ್ರದ ಮೂಲಕ ಕಟಾವು ಮಾಡುವಾಗ ಶೇಕಡ 8 ರಷ್ಟು ಕಬ್ಬು ವೇಸ್ಟೇಜ್ ಎಂದು ಕಡಿತ ಮಾಡುವುದನ್ನು ತಪ್ಪಿಸಬೇಕು, ಹಾಗೂ ಕಾನೂನು ಬಾಹಿರವಾಗಿ ಕಬ್ಬು ಕಡಿತ ಮಾಡಿದ ಕಾರ್ಖಾನೆಗಳಿಗೆ ದಂಡ ಹಾಕಿ ಕಡಿತ ಮಾಡಿದ ಹಣ ರೈತರಿಗೆ ವಾಪಸ್ ಕೊಡಿಸಿ,ಸಕ್ಕರೆ ಕಾರ್ಖಾನೆಗಳಿಂದ ಕಳೆದ ವರ್ಷದ ಕಬ್ಬಿನ ಬಾಕಿ ಸುಮಾರು ರೂ-500 ಕೋಟಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ಕೊಡಬೇಕಿದ್ದು ತಕ್ಷಣವೇ ಕೊಡಿಸಿ ಈ ಎಲ್ಲಾ ಸಮಸ್ಯೆಗಳ ಬಗ್ಗೆ ತುರ್ತಾಗಿ ಕ್ರಮ ಕೈಗೊಂಡು ಕಬ್ಬು ಬೆಳೆಗಾರ ರೈತರ ರಕ್ಷಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.
ನಿಯೋಗದಲ್ಲಿ ಮೈಸೂರು – ಚಾಮರಾಜ ನಗರ ಜಿಲ್ಲೆ ಪ್ರದಾನ ಕಾರ್ಯದರ್ಶಿ ಬರಡನಪುರ ನಾಗರಾಜ್,ದೊಡ್ಡ ಕಾಟೂರು ನಾಗೇಶ್, ಕೋಟೆ ಪುರ ಜಗದೀಶ್ ಹಾಗೂ ಬಳ್ಳಾರಿ ಪರಮೇಶ್ ಇದ್ದರು.
– ಎಂ.ನಾಗೇಂದ್ರ ಕುಮಾರ್
