ಕೆ.ಆರ್.ಪೇಟೆ – ತಾಲೂಕಿನ ಹಾಲು ಉತ್ಪಾದಕಾರ ಸಹಕಾರ ಸಂಘಗಳ ಆಡಳಿತದಲ್ಲಿ ಹಸ್ತ ಕ್ಷೇಪ ಮಾಡುತ್ತಾ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವ ಶಾಸಕರು ಹಾಲು ಒಕ್ಕೂಟದ ನಿರ್ದೇಶಕರಾದ ತಮ್ಮ ವಿರುದ್ದ ಇಲ್ಲಸಲ್ಲದ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಿ ತಮ್ಮ ಕಾರ್ಯವೈಖರಿಯನ್ನು ಬದಲಿಸಿಕೊಂಡು ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವುದನ್ನು ರೂಡಿಸಿಕೊಳ್ಳದಿದ್ದರೆ ತಾಲೂಕಿನ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕರಾದ ಡಾಲುರವಿ ಮತ್ತು ಎಂ.ಬಿ.ಹರೀಶ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಇತ್ತೀಚೆಗೆ ನಡೆದ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಯಲ್ಲಿ ತಮ್ಮ ವಿರುದ್ದ ಸ್ಪರ್ಧೆ ಮಾಡಿ ಹೀನಾಯವಾಗಿ ಸೋಲೊಪ್ಪಿಕೊಂಡ ಶಾಸಕರು ಹತಾಶರಾಗಿ ನಾನು ಶಾಸಕ ಏನು ಬೇಕಾದರೂ ಮಾಡಬಹುದು ಎಂದು ನಮ್ಮ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ಮುಖಭಂಗಕ್ಕೆ ಒಳಗಾಗಿ ನಮ್ಮ ವಿರುದ್ದ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಾ ನಗೆಪಾಟಲಿಗೆ ಒಳಗಾಗಿದ್ದಾರೆ ಎಂದು ಲೇವಡಿ ಮಾಡಿದರು.
ಕಾಶಿ ಮುರುಕನಹಳ್ಳಿ ಹಾಲು ಉತ್ಪಾದಕಾರ ಮಹಿಳಾ ಸಹಕಾರ ಸಂಘಕ್ಕೆ ಸಹಾಯಕರು ಮತ್ತು ಹಾಲು ಪರೀಕ್ಷಕರನ್ನು ಪುರುಷರನ್ನು ಆಯ್ಕೆ ಮಾಡಿ ಮಹಿಳಾ ನಿರ್ದೇಶಕರ ಹಕ್ಕಿಗೆ ಹಾಗೂ ಆಡಳಿತ ಮಂಡಳಿಯ ಘನತೆಗೆ ಚ್ಯುತಿ ತಂದಿದ್ದಾರೆ. ಕಬ್ಬಲಗೆರೆಪುರ ಸೇರಿದಂತೆ ಕೆಲವು ಸಂಘಗಳಲ್ಲಿ ಕಾರ್ಯದರ್ಶಿ ಹುದ್ದೆಗೆ ತಮ್ಮ ಹಿಂಬಾಲಕರಿಗೆ ಬಹಿರಂಗವಾಗಿ ಲಕ್ಷಗಟ್ಟಲೆ ಹಣ ವಸೂಲಿ ಮಾಡಿಕೊಟ್ಟಿದ್ದಾರೆ. ಇದನ್ನು ಖಂಡಿಸಿ ಪ್ರಶ್ನಿಸಿದ ನಾವು ಶಾಸಕರ ಕಣ್ಣಿಗೆ ಕೆಟ್ಟವರಂತೆ ಕಾಣುತ್ತಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಮನೆಯ ಬಾಗಿಲಿಗೆ ಬಂದು ನಮ್ಮ ಸಹಾಯ ಪಡೆದು ಗೆದ್ದು ಶಾಸರಾಗಿ ಆಯ್ಕೆಯಾಗಿರುವ ಮಹಾನುಭಾವರು ಈಗ ನಮ್ಮ ವಿರುದ್ಧವೇ ಕತ್ತಿ ಮಸೆಯುತ್ತಿದ್ದಾರೆ. ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಯಲ್ಲಿ ನಮ್ಮ ವಿರುದ್ಧವೆ ಅಭ್ಯರ್ಥಿಗಳನ್ನು ಹಾಕಿ ಹೀನಾಯವಾಗಿ ಸೋಲೊಪ್ಪಿಕೊಂಡರು ಬುದ್ಧಿ ಕಲಿಯದ ಶಾಸಕರು ಕೆಡಿಪಿ ಸಭೆಯ ನೆಪದಲ್ಲಿ ನಮಗೆ ಸಹಾಯ ಮಾಡಿರುವ ಹಾಲಿನ ಡೈರಿಗಳ ಕಾರ್ಯದರ್ಶಿಗಳಿಗೆ ಶೋಕಾಸ್ ನೋಟಿಸ್ ಕೊಡಿಸುತ್ತಿದ್ದಾರೆ. ಹಾಲು ಉತ್ಪಾದಕಾರ ಸಹಕಾರ ಸಂಘಗಳಿಗೆ ಅಧ್ಯಕ್ಷರೇ ಸುಪ್ರೀಂ, ಅಧ್ಯಕ್ಷರ ಆದೇಶವಿಲ್ಲದೆ ಕಾರ್ಯದರ್ಶಿಗಳು ಯಾವುದೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಆದ್ದರಿಂದ ಶಾಸಕರು ಹಾಲಿನಡೈರಿಗಳಲ್ಲಿ ಅನಗತ್ಯ ವಾಗಿ ಹಸ್ತಕ್ಷೇಪ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಡಾಲು ರವಿ ಆಗ್ರಹಿಸಿದರು.
ಈ ಹಿಂದೆ ಕ್ಷೇತ್ರದ ಶಾಸಕರಾಗಿದ್ದ ರಾಜ್ಯದ ಮಾಜಿ ಸಚಿವ ನಾರಾಯಣಗೌಡ ಅವರು ಬಿಡುಗಡೆ ಮಾಡಿಸಿ ತಂದಿರುವ ಅನುದಾನಗಳ ಕಾಮಗಾರಿಗಳು ಹಾಗೂ ಅಭಿವೃದ್ಧಿ ಕೆಲಸಗಳಿಗೆ ಭೂಮಿ ಪೂಜೆ ಮಾಡುತ್ತಿರುವ ಶಾಸಕರು ಸೌಜನ್ಯಕ್ಕಾದರೂ ಮಾಜಿ ಸಚಿವರನ್ನು ಭೂಮಿ ಪೂಜೆಗೆ ಕರೆಯದೆ ಸರ್ವಾಧಿಕಾರಿಯಂತೆ ವರ್ತಿಸಿ ಹುಂಬತನ ಪ್ರದರ್ಶನ ಮಾಡುತ್ತಿದ್ದಾರೆ. ಮಂಡ್ಯ ಹಾಲು ಒಕ್ಕೂಟದಿಂದ ಒಂದು ಲಕ್ಷ ರೂ ಅನುದಾನವನ್ನು ಕೋಟೆ ಭೈರವೇಶ್ವರ ದೇವಾಲಯಕ್ಕೆ ಪಡೆದುಕೊಂಡಿರುವ ಶಾಸಕರು ಒಕ್ಕೂಟದ ನಿರ್ದೇಶಕರಾದ ನಮ್ಮನ್ನು ಕಾರ್ಯಕ್ರಮಕ್ಕೆ ಕರೆಯದೇ ವಿಕೃತಿ ಮೆರೆದಿದ್ದಾರೆ ಎಂದು ಹರೀಶ್ ಗಂಭೀರ ಆರೋಪ ಮಾಡಿದರು.
ನಾವಿಬ್ಬರು ವಯಸ್ಸಿನಲ್ಲಿ ಶಾಸಕರಿಗಿಂತ ಹಿರಿಯರಾಗಿದ್ದರೂ ಶಾಸಕ ಸ್ಥಾನದ ಘನತೆಯಿಂದಾಗಿ ಶಾಸಕ ಮಂಜು ಅವರನ್ನು ಗೌರವದಿಂದ ಸಂಭೋಧನೆ ಮಾಡುತ್ತಿದ್ದೆವು. ಶಾಸಕರ ವಿಕೃತಿಯ ಪದ ಪ್ರಯೋಗವನ್ನು ಕ್ಷೇತ್ರದ ಜನತೆ ಗಂಭೀರವಾಗಿ ಗಮನಿಸುತ್ತಿದ್ದಾರೆ. ಗೌರವಾನ್ವಿತ ಶಾಸಕರು ಇನ್ನು ಮುಂದಾದರೂ ತಮ್ಮ ಕಾರ್ಯ ವೈಖರಿಯನ್ನು ಬದಲಾಯಿಸಿಕೊಂಡು ಜನತೆ ನೀಡಿರುವ ಅಧಿಕಾರವನ್ನು ಜನತೆಯ ಕಲ್ಯಾಣಕ್ಕೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಬಳಸಬೇಕು. ವಿಪಕ್ಷದ ಶಾಸಕರಾಗಿರುವ ಮಂಜು ಅವರು ಸರ್ಕಾರದ ವಿರುದ್ದ ಕ್ಷುಲ್ಲಕ ಆರೋಪ ಮಾಡದೇ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮನ್ವಯತೆ ಸಾಧಿಸಿ ಕೆಲಸ ಮಾಡಬೇಕು. ಏಕಾದರೂ ನಾನು ಶಾಸಕನಾದೆ ಅಭಿವೃದ್ಧಿಗೆ ಅನುದಾನ ದೊರೆಯುತ್ತಿಲ್ಲ ಎಂಬ ಹತಾಷ ಮನೋಭಾವನೆ ಯನ್ನು ಮೊದಲು ಬಿಟ್ಟು ಕೆಲಸ ಮಾಡಬೇಕು ಎಂದು ಹರೀಶ್ ಕಿವಿಮಾತು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮುಖಂಡರಾದ ಹಾದನೂರು ಪರಮೇಶ್, ಕೈಗೋನಹಳ್ಳಿ ಜಯರಾಮು, ಜಾಗಿನಕೆರೆ ಅಂಬರೀಶ್, ಸೋಮಶೇಖರ್, ರಘು, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
