ಮುದ್ದೇನಹಳ್ಳಿ, ಅಕ್ಟೋಬರ್ 20, 2026:* ಆಧ್ಯಾತ್ಮಿಕ ನಾಯಕ, ಜಾಗತಿಕ ಸಮಾಜ ಸೇವಕ ಹಾಗೂ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ನ ರೂವಾರಿ ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರ ಡಿಜಿಟಲ್ ಟ್ವಿನ್ ಅನ್ನು ವಿವನ್ ಎಐ ಅಭಿವೃದ್ಧಿಪಡಿಸಿದ ಎಐ-ಚಾಲಿತ ಟ್ವಿನ್ ಕೆಫೆ ವೇದಿಕೆಯಲ್ಲಿ ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು. ಈ ಡಿಜಿಟಲ್ ಟ್ವಿನ್ ಶ್ರೀ ಮಧುಸೂದನ್ ಸಾಯಿ ಅವರ ಬೋಧನೆಗಳನ್ನು ಸಂಪೂರ್ಣವಾಗಿ ಆಧರಿಸಿದ್ದು, ಜನರು ತಮಗೆ ಅಗತ್ಯವೆನಿಸಿದಾಗಲೆಲ್ಲಾ ಆಧ್ಯಾತ್ಮಿಕತೆ, ಆತ್ಮಸಾಕ್ಷಾತ್ಕಾರ ಮತ್ತು ನಿಸ್ವಾರ್ಥ ಸೇವೆಯ ಮಾರ್ಗವನ್ನು ಅನ್ವೇಷಿಸಲು ದಿನದ 24 ಗಂಟೆಯೂ ನೆರವಾಗಲಿದೆ.
ಶ್ರೀ ಮಧುಸೂದನ್ ಸಾಯಿ ಅವರ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ವಿಶ್ವದ 100 ದೇಶಗಳಲ್ಲಿ ಸಕ್ರಿಯವಾಗಿದ್ದು, ಇದುವರೆಗೆ 1.4 ಕೋಟಿಗೂ ಹೆಚ್ಚು ಜನರ ಜೀವನವನ್ನು ತಲುಪಿದೆ. ಈ ಅಭಿಯಾನದಡಿ ಪ್ರತಿದಿನ ಶಾಲೆಗೆ ತೆರಳುವ 1 ಕೋಟಿಗೂ ಅಧಿಕ ಮಕ್ಕಳಿಗೆ ಮುಂಜಾನೆಯ ಪೌಷ್ಟಿಕಾಹಾರ ಒದಗಿಸಲಾಗುತ್ತಿದ್ದು, ಇದುವರೆಗೆ ಬರೋಬ್ಬರಿ 300 ಕೋಟಿ ಊಟ ಒದಗಿಸಲಾಗಿದೆ. ಭಾರತ ಮತ್ತು ನೈಜೀರಿಯಾದ 26 ಕ್ಯಾಂಪಸ್ ಗಳಲ್ಲಿ 4,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಲಾಗುತ್ತಿದ್ದು, ಇದರಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಆರಂಭಿಸಲಾದ ಉಚಿತ ಖಾಸಗಿ ವೈದ್ಯಕೀಯ ಕಾಲೇಜು ಸೇರಿದೆ. ಅಷ್ಟೇ ಅಲ್ಲದೆ, ಭಾರತ, ಫಿಜಿ, ಶ್ರೀಲಂಕಾ, ನೈಜೀರಿಯಾ ಮತ್ತು ಅಮೆರಿಕದಾದ್ಯಂತ ಉಚಿತ ಹಾಗೂ ಅತ್ಯಾಧುನಿಕ ಆರೋಗ್ಯ ಸೇವೆಗಳನ್ನು ಈ ಸಂಸ್ಥೆ ಒದಗಿಸುತ್ತಿದೆ. ಇದರೊಂದಿಗೆ, ಸಾಪ್ತಾಹಿಕ ಸತ್ಸಂಗಗಳು ಹಾಗೂ ಭಗವದ್ಗೀತೆ, ಕಠೋಪನಿಷತ್ ಮತ್ತು ಮನಸ್ಸಿನ ನಿಯಂತ್ರಣದ (ಮೈಂಡ್ ಮಾಸ್ಟರಿ) ಕುರಿತ ಪ್ರವಚನಗಳ ಮೂಲಕ ವಿಶ್ವದಾದ್ಯಂತ ಬೆಳೆಯುತ್ತಿರುವ ಜಿಜ್ಞಾಸುಗಳ ಸಮುದಾಯಕ್ಕೆ ಸದ್ಗುರುಗಳು ನಿರಂತರ ಮಾರ್ಗದರ್ಶನ ನೀಡುತ್ತಿದ್ದಾರೆ. ಆದಾಗ್ಯೂ, ಅವರ ಮಾರ್ಗದರ್ಶನವನ್ನು ಬಯಸುವವರ ಸಂಖ್ಯೆಯು ದಿನವೊಂದರಲ್ಲಿ ಒಬ್ಬ ವ್ಯಕ್ತಿ ಭೇಟಿಯಾಗಬಹುದಾದ ಮಿತಿಗಿಂತಲೂ ಎಷ್ಟೋ ಪಟ್ಟು ಹೆಚ್ಚಿದೆ. ಇದೀಗ ಟ್ವಿನ್ ಕೆಫೆಯಲ್ಲಿರುವ ಅವರ ಡಿಜಿಟಲ್ ಟ್ವಿನ್, ಜಗತ್ತಿನ ಯಾವುದೇ ಮೂಲೆಯಲ್ಲಿರುವವರಿಗಾದರೂ ಅವರವರ ಮೆಚ್ಚಿನ ಭಾಷೆಯಲ್ಲೇ ಈ ಮಾರ್ಗದರ್ಶನವನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಿದೆ.
ಪ್ರಶ್ನೋತ್ತರ ಶೈಲಿಯು ಪ್ರಾಚೀನ ಕಾಲದಿಂದಲೂ ಭಾರತೀಯ ಆಧ್ಯಾತ್ಮಿಕ ಬೋಧನೆಯ ಪ್ರಮುಖ ಅಂಗವಾಗಿದೆ. ಶ್ರೀಕೃಷ್ಣನು ಅರ್ಜುನನ ಪ್ರಶ್ನೆಗಳಿಗೆ ನೀಡಿದ ಉತ್ತರಗಳ ರೂಪದಲ್ಲೇ ಭಗವದ್ಗೀತೆಯು ಅನಾವರಣಗೊಂಡಿದೆ. ಹಾಗೆಯೇ, ಕಠೋಪನಿಷತ್ತಿನಲ್ಲಿ ಬಾಲಕ ನಚಿಕೇತನು ಮೃತ್ಯುದೇವತೆಯಾದ ಯಮನಿಂದ ಮರಣೋತ್ತರ ರಹಸ್ಯದ ಕುರಿತು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವುದನ್ನು ಕಾಣಬಹುದು. ಉಪನಿಷತ್ ಎಂಬ ಶಬ್ದದ ಸಾಮಾನ್ಯ ಅರ್ಥವೇ ಗುರುವಿನ ಸಮೀಪ ಕುಳಿತುಕೊಳ್ಳುವುದು ಎಂದಾಗಿದೆ. ಸತ್ಸಂಗಗಳಲ್ಲಿ ಖುದ್ದಾಗಿ ಭಾಗವಹಿಸಲು ಸಾಧ್ಯವಾಗದವರಿಗೂ, ಶ್ರೀ ಮಧುಸೂದನ್ ಸಾಯಿ ಅವರ ಬೋಧನೆಗಳನ್ನಾಧರಿಸಿದ ನಿಖರ ಉತ್ತರಗಳ ಮೂಲಕ ಅದೇ ಪ್ರಶ್ನೋತ್ತರ ಪರಂಪರೆಯ ಅನುಭವವನ್ನು ಈ ಡಿಜಿಟಲ್ ಟ್ವಿನ್ ಒದಗಿಸಿಕೊಡುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಆಧ್ಯಾತ್ಮಿಕ ಗುರು, ಜಾಗತಿಕ ಸಮಾಜ ಸೇವಕ ಶ್ರೀ ಮಧುಸೂದನ್ ಸಾಯಿ ಅವರು, “ಇಡೀ ಜಗತ್ತೇ ಒಂದು ಕುಟುಂಬ ಮತ್ತು ಆ ಕುಟುಂಬದ ಪ್ರತಿಯೊಬ್ಬ ಸದಸ್ಯನ ಧ್ವನಿಯನ್ನು ಆಲಿಸಬೇಕಾದ ಅಗತ್ಯವಿದೆ. ನಿತ್ಯವೂ ಜನರು ಬದುಕು, ಜೀವನದ ಉದ್ದೇಶ ಮತ್ತು ಅಂತರಂಗದ ಪಯಣದ ಬಗೆಗಿನ ಪ್ರಶ್ನೆಗಳೊಂದಿಗೆ ನನ್ನನ್ನು ಸಂಪರ್ಕಿಸುತ್ತಾರೆ. ಅವರೆಲ್ಲರಿಗೂ ಸದಾ ಜತೆಯಾಗಿರಬೇಕು ಎಂಬುದು ನಮ್ಮ ಅಪೇಕ್ಷೆಯಾಗಿತ್ತು. ಈ ಡಿಜಿಟಲ್ ಟ್ವಿನ್ ಮೂಲಕ, ನಾನು ಸತ್ಸಂಗಗಳಲ್ಲಿ ಹಂಚಿಕೊಳ್ಳುವ ಸಾರಾಂಶವು ಒಬ್ಬ ವಿದ್ಯಾರ್ಥಿ, ಗೃಹಿಣಿ, ವೃತ್ತಿಪರ ಅಥವಾ ಹಿರಿಯ ನಾಗರಿಕರಿಗೆ ಯಾವುದೇ ಕ್ಷಣದಲ್ಲಿ, ಅವರದ್ದೇ ಮಾತೃಭಾಷೆಯಲ್ಲಿ ತಲುಪಲು ಸಾಧ್ಯವಾಗುತ್ತದೆ. ತಂತ್ರಜ್ಞಾನವನ್ನು ಸರಿಯಾದ ಸದುದ್ದೇಶದಿಂದ ಬಳಸಿದಾಗ, ಅದು ಸೇವೆಯ ಅತ್ಯಂತ ಪ್ರಬಲ ಸಾಧನವಾಗಿ ಮಾರ್ಪಡುತ್ತದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಟ್ವಿನ್ ಕೆಫೆಯ ಸಂಸ್ಥಾಪಕ ಹಾಗೂ ಸಿಇಒ ಅಶುತೋಷ್ ಗರ್ಗ್ ಅವರು ಮಾತನಾಡಿ, “ನಾವು ಟ್ವಿನ್ ಕೆಫೆಯನ್ನು ರೂಪಿಸಲು ಆರಂಭಿಸಿದಾಗ ಜಗತ್ತಿನ ಅತ್ಯಂತ ಮೌಲ್ಯಯುತ ಜ್ಞಾನವು ವ್ಯಕ್ತಿಗಳಲ್ಲಿದೆ ಮತ್ತು ಆ ಜ್ಞಾನವು ಅಗತ್ಯವಿರುವ ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಲು ತಂತ್ರಜ್ಞಾನವು ನೆರವಾಗಬೇಕು ಎಂಬ ನಮ್ಮ ಸರಳ ಧ್ಯೇಯವಿತ್ತು. ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರ ಆರೋಗ್ಯ, ಶಿಕ್ಷಣ ಮತ್ತು ಮಾನವೀಯ ಸೇವೆಯ ಜೀವಮಾನದ ತಪಸ್ಸು ಈ ನಂಬಿಕೆಯನ್ನು ಅಕ್ಷರಶಃ ಸಾಕಾರಗೊಳಿಸುತ್ತದೆ. ಅವರ ಡಿಜಿಟಲ್ ಟ್ವಿನ್ ಅವರದೇ ಮಾತುಗಳು ಮತ್ತು ಬೋಧನೆಗಳ ಬಲವಾದ ಬುನಾದಿಯ ಮೇಲೆ ನಿಂತಿದೆ. ಇಂತಹ ಪವಿತ್ರ ನಂಬಿಕೆಗೆ ತಕ್ಕಂತೆ ಅತ್ಯಂತ ಜವಾಬ್ದಾರಿ ಹಾಗೂ ಕಾಳಜಿಯಿಂದ ನಾವು ಇದನ್ನು ನಿರ್ಮಿಸಿದ್ದೇವೆ. ಅವರ ಮಾರ್ಗದರ್ಶನವನ್ನು ವಿಶ್ವದ ನಾನಾ ದೇಶಗಳಿಗೆ ಮುಟ್ಟುವಂತೆ ಮಾಡಿರುವುದು ನಮ್ಮ ತಂತ್ರಜ್ಞಾನವು ಸಾಧಿಸಿದ ಅತ್ಯಂತ ಸಾರ್ಥಕ ಕೆಲಸಗಳಲ್ಲಿ ಒಂದಾಗಿದೆ, ಮತ್ತು ಈ ಪಯಣದ ಭಾಗವಾಗಿರುವುದಕ್ಕೆ ನಾವು ವಿನಮ್ರರಾಗಿದ್ದೇವೆ” ಎಂದರು.
ಸಮಾಜದ ಒಳಿತಿಗಾಗಿ ಶ್ರಮಿಸುವ ಮಹನೀಯರ ವ್ಯಾಪ್ತಿಯನ್ನು ಡಿಜಿಟಲ್ ಟ್ವಿನ್ ಗಳು ಮತ್ತಷ್ಟು ಹೆಚ್ಚಿಸಬಲ್ಲವು ಎಂಬ ಟ್ವಿನ್ ಕೆಫೆಯ ನಂಬಿಕೆಗೆ ಈ ಸಂದರ್ಭ ಸಾಕ್ಷಿಯಾಗಿದೆ. ಸಮಯ, ದೂರ ಮತ್ತು ಭಾಷೆಯ ಗಡಿಗಳನ್ನು ಅಳಿಸಿಹಾಕುವ ಮೂಲಕ, ಈ ವೇದಿಕೆಯು ಸಾರ್ವಕಾಲಿಕ ಜ್ಞಾನವನ್ನು ಜನರ ಮನೆಬಾಗಿಲಿಗೇ ತಲುಪಿಸಲು ದಾರಿ ಮಾಡಿಕೊಡುತ್ತದೆ.
ಟ್ವಿನ್ ಕೆಫೆಯ ಸ್ಥಾಪಕ ತಂಡದ ಸದಸ್ಯ, ಹಿರಿಯ ಬೆಳವಣಿಗೆಯ ನಾಯಕ ಹಾಗೂ ಬ್ರ್ಯಾಂಡ್ ಇವಾಂಜೆಲಿಸ್ಟ್ ತರುಣ್ ಸಿಂಘಾಲ್ ಅವರು ಮಾತನಾಡಿ, “ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರ ಜೀವನವು ಮಾನವಕುಲದ ನಿಸ್ವಾರ್ಥ ಸೇವೆಗೆ ಜೀವಂತ ನಿದರ್ಶನ. ಅವರ ಒಂದು ವಿಶ್ವ, ಒಂದು ಕುಟುಂಬ ಸಂದೇಶಕ್ಕೆ ಇದೀಗ ನವೀನ ಹೆಬ್ಬಾಗಿಲು ತೆರೆದುಕೊಂಡಿದೆ. ಜ್ಞಾನವೆಂಬುದು ಸದಾ ಗುರುವಿನಿಂದ ಜಿಜ್ಞಾಸುವಿಗೆ ಹರಿಯುವಂತದ್ದು. ಟ್ವಿನ್ ಕೆಫೆಯಲ್ಲಿರುವ ಅವರ ಡಿಜಿಟಲ್ ಟ್ವಿನ್ ಮೂಲಕ, ಇದು ಭಾರತದ ಹಳ್ಳಿಯೊಬ್ಬರ ಸಾಮಾನ್ಯ ವ್ಯಕ್ತಿಗೂ ಮತ್ತು ಲಂಡನ್ನ ವಿದ್ಯಾರ್ಥಿಗೂ ಸಮಾನವಾಗಿ, 100 ದೇಶಗಳಲ್ಲಿ, ಯಾವುದೇ ವೇಳೆಯಲ್ಲೂ ತಲುಪಬಲ್ಲದು. ಮನುಷ್ಯನನ್ನು ತಂತ್ರಜ್ಞಾನದಿಂದ ಬದಲಿಸುವುದಲ್ಲ, ಬದಲಿಗೆ ಒಬ್ಬ ಶ್ರೇಷ್ಠ ಗುರುವಿನ ಸಂದೇಶವನ್ನು ಬಯಸುವ ಪ್ರತಿಯೊಂದು ಹೃದಯಕ್ಕೂ ತಲುಪಿಸುವುದೇ ತಂತ್ರಜ್ಞಾನದ ಅತ್ಯಂತ ಅರ್ಥಪೂರ್ಣ ಪಾತ್ರ ಎಂದು ನಾವು ಬಲವಾಗಿ ನಂಬಿದ್ದೇವೆ. ಸ್ವಾಮೀಜಿ ಮತ್ತು ಅವರ ತಂಡ ನಮ್ಮ ಮೇಲೆ ಇಟ್ಟಿರುವ ಅಚಲ ವಿಶ್ವಾಸಕ್ಕೆ ನಾವು ಋಣಿಯಾಗಿದ್ದೇವೆ” ಎಂದು ತಿಳಿಸಿದರು.
ಟ್ವಿನ್ ಕೆಫೆ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂದೇಶ್ ಗೋಯಲ್ ಅವರು ಮಾತನಾಡಿ, “ಸಾರ್ವಕಾಲಿಕ ಜ್ಞಾನವನ್ನು ನಿಷ್ಠೆಯಿಂದ ಸಂರಕ್ಷಿಸಬೇಕು ಮತ್ತು ಪರಮ ವಿನಮ್ರತೆಯಿಂದ ಲೋಕಕ್ಕೆ ಹಂಚಬೇಕು. ಟ್ವಿನ್ ಕೆಫೆಯಲ್ಲಿರುವ ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರ ಡಿಜಿಟಲ್ ಟ್ವಿನ್, ಒಬ್ಬ ಆಧ್ಯಾತ್ಮಿಕ ಗುರುವಿನ ಮೂಲ ಸಂದೇಶ ಹಾಗೂ ಮಾತುಗಳಿಗೆ ಚ್ಯುತಿ ಬಾರದಂತೆ ಅವರ ದಿವ್ಯ ಮಾರ್ಗದರ್ಶನವನ್ನು ಜಗತ್ತಿನಾದ್ಯಂತದ ಸಾಧಕರಿಗೆ ಎಐ ಹೇಗೆ ತಲುಪಿಸಬಲ್ಲದು ಎಂಬುದನ್ನು ನಿರೂಪಿಸಿದೆ. ಇದು ಭಾರತವು ಇಡೀ ವಿಶ್ವಕ್ಕೆ ಕೊಡುಗೆಯಾಗಿ ನೀಡಬಹುದಾದ ಅರ್ಥಪೂರ್ಣ ಹಾಗೂ ಉದ್ದೇಶಪೂರಿತ ಎಐ ತಂತ್ರಜ್ಞಾನವಾಗಿದೆ” ಎಂದರು.
ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ನ ಮುಖ್ಯ ಬ್ರ್ಯಾಂಡ್ ಮತ್ತು ಸಂವಹನ ಅಧಿಕಾರಿ ಸುಚೇತನ್ ಕೊಟ್ಟಾ ಅವರು ಮಾತನಾಡಿ, “ಕಳೆದ ಐವತ್ತು ವರ್ಷಗಳಿಂದ ಸತ್ಯ ಸಾಯಿ ಗ್ರಾಮವು ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು, ಯಾವ ರೋಗಿಯೂ ಚಿಕಿತ್ಸೆಯಿಂದ ವಂಚಿತವಾಗಬಾರದು ಮತ್ತು ಯಾವ ಸಾಧಕನೂ ಮಾರ್ಗದರ್ಶನವಿಲ್ಲದೆ ಇರಬಾರದು ಎಂಬ ಒಂದೇ ಪರಮ ಧ್ಯೇಯಕ್ಕೆ ಕಂಕಣಬದ್ಧವಾಗಿ ಸೇವೆ ಸಲ್ಲಿಸುತ್ತಿದೆ. ಸದ್ಗುರುಗಳು ಈ ನಂಬಿಕೆಯನ್ನು ವಿಶ್ವದ 100ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಮುಟ್ಟಿಸಿದ್ದಾರೆ. ಅವರ ಡಿಜಿಟಲ್ ಟ್ವಿನ್ ಈಗ ಇದನ್ನು ವರ್ಷದ 365 ದಿನಗಳ ಪ್ರತಿ ಗಂಟೆಗೂ ಕೊಂಡೊಯ್ಯುತ್ತಿದೆ. ಮಧ್ಯರಾತ್ರಿಯಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿ, ದೂರದ ಕ್ಲಿನಿಕ್ ನಲ್ಲಿ ಕರ್ತವ್ಯದಲ್ಲಿರುವ ವೈದ್ಯ, ಅಥವಾ ಭೂಮಿಯ ಇನ್ನೊಂದು ತುದಿಯಲ್ಲಿರುವ ಭಕ್ತ—ಪ್ರತಿಯೊಬ್ಬರೂ ಈಗ ನೇರವಾಗಿ ಅವರ ಮಾರ್ಗದರ್ಶನ ಪಡೆಯಬಹುದು. ನಮ್ಮ ಸುವರ್ಣ ಮಹೋತ್ಸವದ ಈ ಸಾರ್ಥಕ ಗಳಿಗೆಯಲ್ಲಿ, ಮುಂದಿನ ಐವತ್ತು ವರ್ಷಗಳಿಗೂ ಕಾಲ ಅಥವಾ ದೇಶಗಳ ಯಾವುದೇ ಮಿತಿಗಳಿಲ್ಲದ ನಿರಂತರ ಪ್ರೀತಿ ಮತ್ತು ನಿಸ್ವಾರ್ಥ ಸೇವೆ ಒದಗಿಸುವುದು ನಮ್ಮ ವಾಗ್ದಾನ ಆಗಿದೆ” ಎಂದರು.
ಕೇವಲ ಮತ್ತೊಂದು ಎಐ ವೇದಿಕೆಯನ್ನು ಸೃಷ್ಟಿಸುವುದಷ್ಟೇ ಟ್ವಿನ್ ಕೆಫೆಯ ಉದ್ದೇಶವಲ್ಲ. ಬದಲಿಗೆ ಜ್ಞಾನ, ಅನುಭವ ಮತ್ತು ವ್ಯಕ್ತಿತ್ವಗಳು ಕಾಲ ಮತ್ತು ಭೂಗೋಳದ ಪರಿಮಿತಿಗಳನ್ನು ಮೀರಿ ನಿಲ್ಲುವ ಮಾನವ ಸಂವಹನದ ಹೊಸ ಶಕೆಯನ್ನು ರೂಪಿಸಲು ಅದು ಶ್ರಮಿಸುತ್ತಿದೆ. ಶ್ರೀ ಮಧುಸೂದನ್ ಸಾಯಿ ಅವರ ಡಿಜಿಟಲ್ ಟ್ವಿನ್ ಲೋಕಾರ್ಪಣೆಯೊಂದಿಗೆ, ಆ ಸಂವಹನ ವೇದಿಕೆಯು ಮಾನವನ ಶಾಶ್ವತ ಅರ್ಥಶೋಧನೆಯ ಪಯಣಕ್ಕೂ ಇದೀಗ ವಿಸ್ತಾರಗೊಂಡಿದೆ.
ಶ್ರೀ ಮಧುಸೂದನ್ ಸಾಯಿ ಅವರ ಪರಿಚಯ
ಶ್ರೀ ಮಧುಸೂದನ್ ಸಾಯಿ ಅವರು ವಿಶ್ವದ 100 ದೇಶಗಳಲ್ಲಿ ಹರಡಿರುವ ಸೇವೆ ಮತ್ತು ಆಧ್ಯಾತ್ಮಿಕ ಆಂದೋಲನವಾದ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಅನ್ನು ಮುನ್ನಡೆಸುತ್ತಿರುವ ಆಧ್ಯಾತ್ಮಿಕ ನಾಯಕ ಹಾಗೂ ಜಾಗತಿಕ ಸಮಾಜ ಸೇವಕರಾಗಿದ್ದಾರೆ. 1979ರ ಜುಲೈ 26ರಂದು ಛತ್ತೀಸ್ ಗಢದ ಬಿಲಾಸ್ಪುರದಲ್ಲಿ ಜನಿಸಿದ ಇವರು, ಶ್ರೀ ಸತ್ಯ ಸಾಯಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ನಲ್ಲಿ ಉನ್ನತ ಶಿಕ್ಷಣ ಪಡೆದರು. ರಸಾಯನಶಾಸ್ತ್ರದಲ್ಲಿ (ಆನರ್ಸ್) ಚಿನ್ನದ ಪದಕ, ರಸಾಯನಶಾಸ್ತ್ರದಲ್ಲೇ ಸ್ನಾತಕೋತ್ತರ ಪದವಿ (ಎಂ.ಎಸ್ಸಿ), ಮತ್ತು ಎಂಬಿಎ ಪದವಿಯಲ್ಲೂ ಸ್ವರ್ಣ ಪದಕ ಮುಡಿಗೇರಿಸಿಕೊಂಡ ಪ್ರತಿಭಾವಂತರಾಗಿದ್ದಾರೆ. 2012ರಿಂದ ಇವರು ವಸುಧೈವ ಕುಟುಂಬಕಂ (ಇಡೀ ಜಗತ್ತೇ ಒಂದು ಕುಟುಂಬ) ಎಂಬ ಸನಾತನ ಆಶಯವನ್ನು ಸಾರುವ ಬೃಹತ್ ಮಾನವೀಯ ಸೇವಾ ಧ್ಯೇಯವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಈ ಮಿಷನ್ ಯಾವುದೇ ಜಾತಿ, ಮತ, ಭೇದವಿಲ್ಲದೆ ಸಮಾಜದ ಪ್ರತಿಯೊಬ್ಬರಿಗೂ ಉಚಿತ ಪೌಷ್ಟಿಕಾಹಾರ, ಮೌಲ್ಯಯುತ ಶಿಕ್ಷಣ ಮತ್ತು ಅತ್ಯಾಧುನಿಕ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ಇದರ ಮುಂಜಾನೆಯ ಪೌಷ್ಟಿಕಾಹಾರ ಕಾರ್ಯಕ್ರಮವು ಭಾರತ ಹಾಗೂ ಇತರ ಐದು ದೇಶಗಳಲ್ಲಿ 1 ಕೋಟಿಗೂ ಅಧಿಕ ಶಾಲಾ ಮಕ್ಕಳನ್ನು ತಲುಪುತ್ತಿದೆ. ಭಾರತ ಮತ್ತು ವಿದೇಶಗಳಲ್ಲಿನ 26 ಕ್ಯಾಂಪಸ್ ಗಳಲ್ಲಿ 6ನೇ ತರಗತಿಯಿಂದ ಡಾಕ್ಟರೇಟ್ವರೆಗಿನ 4,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಇದರಲ್ಲಿ ಒಂದು ವಿಶ್ವವಿದ್ಯಾಲಯ ಹಾಗೂ 2023ರಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಂಡ ಗ್ರಾಮೀಣ ವಿದ್ಯಾರ್ಥಿಗಳಿಗಾಗಿಯೇ ಮೀಸಲಾದ ದೇಶದ ಮೊದಲ ಉಚಿತ ಖಾಸಗಿ ವೈದ್ಯಕೀಯ ಕಾಲೇಜು ಸೇರಿದೆ. ಸಂಸ್ಥೆಯ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳು, ಮಕ್ಕಳ ಹೃದ್ರೋಗ ಚಿಕಿತ್ಸಾ ಕೇಂದ್ರಗಳು, ವೆಲ್ನೆಸ್ ಕೇಂದ್ರಗಳು ಮತ್ತು ಸಂಚಾರಿ ಆರೋಗ್ಯ ತಪಾಸಣಾ ವಾಹನಗಳು ಭಾರತ, ಫಿಜಿ, ಶ್ರೀಲಂಕಾ, ನೈಜೀರಿಯಾ ಮತ್ತು ಅಮೆರಿಕಗಳಲ್ಲಿ ಉಚಿತ ಹಾಗೂ ಸುಧಾರಿತ ಆರೋಗ್ಯ ಸೇವೆಯನ್ನು ಯಶಸ್ವಿಯಾಗಿ ನೀಡುತ್ತಿವೆ.
ಇವರ ಬೋಧನೆಗಳು ವೇದಾಂತ ಮತ್ತು ಸನಾತನ ಧರ್ಮದಲ್ಲಿ ಆಳವಾಗಿ ಬೇರೂರಿದ್ದು, ಅಹಂ ಬ್ರಹ್ಮ, ಸರ್ವಂ ಬ್ರಹ್ಮ (ನಾನು ದಿವ್ಯ, ಎಲ್ಲವೂ ದಿವ್ಯ) ಎಂಬ ಏಕತ್ವದ ತತ್ವಾಧಾರಿತವಾಗಿವೆ. ಇವರು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಪ್ರತಿ ವಾರವೂ ಸಾಪ್ತಾಹಿಕ ಸತ್ಸಂಗಗಳನ್ನು ನಡೆಸಿಕೊಡುತ್ತಾರೆ. ಇವರ ನಿಸ್ವಾರ್ಥ ಸೇವೆಗೆ ಫಿಜಿ ದೇಶದ ಅಧ್ಯಕ್ಷರಿಂದ ನೀಡಲಾದ ಅತ್ಯುನ್ನತ ನಾಗರಿಕ ಗೌರವ (2025), ಸುಶ್ರುತ ಪ್ರಶಸ್ತಿ (2024), ಮತ್ತು ಯುನಿವರ್ಸಲ್ ಪೀಸ್ ಕೌನ್ಸಿಲ್ನಿಂದ ಸಂದ ಅತ್ಯುನ್ನತ ಶಾಂತಿ ನಾಯಕ ಪ್ರಶಸ್ತಿ (2025) ಸೇರಿದಂತೆ ಹತ್ತು ಹಲವು ಪುರಸ್ಕಾರಗಳು ಸಂದಿವೆ. ಇದರೊಂದಿಗೆ, ಈ ಸೇವಾ ಮಿಷನ್ ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನೂ ತನ್ನ ಮುಡಿಗೇರಿಸಿಕೊಂಡಿದೆ.
ಟ್ವಿನ್ ಕೆಫೆ ಸಂಸ್ಥೆಯ ಹಿನ್ನೆಲೆ
ಹಿಂದೆ ಆಸ್ಕ್ ಸಿಲಾ ಎಂದು ಗುರುತಿಸಲ್ಪಡುತ್ತಿದ್ದ ಟ್ವಿನ್ ಕೆಫೆ, ವಿವನ್ ಎಐ ಅಭಿವೃದ್ಧಿಪಡಿಸಿರುವ ಎಐ-ಚಾಲಿತ ಡಿಜಿಟಲ್ ಟ್ವಿನ್ ವೇದಿಕೆಯಾಗಿದೆ. ಇದು ವ್ಯಕ್ತಿಗಳಿಗೆ ತಮ್ಮ ಸಮಗ್ರ ಜ್ಞಾನ, ಧ್ವನಿ, ವ್ಯಕ್ತಿತ್ವ ಮತ್ತು ನೈಪುಣ್ಯತೆಯನ್ನು ಪ್ರತಿಬಿಂಬಿಸುವ ನಿಖರ ಎಐ ಆವೃತ್ತಿಗಳನ್ನು ನಿರ್ಮಿಸಲು ಮತ್ತು ವಿಶಾಲ ಜನಸಮುದಾಯದೊಂದಿಗೆ ವ್ಯಾಪಕ ಪ್ರಮಾಣದಲ್ಲಿ ಸಂವಾದ ನಡೆಸಲು ಅವಕಾಶ ಕಲ್ಪಿಸುತ್ತದೆ. ಬ್ಲೂಮ್ರೀಚ್ ಮತ್ತು ಏಯ್ಟ್ ಫೋಲ್ಡ್ ಎಐ ಸಂಸ್ಥೆಗಳ ಹಿಂದಿನ ಯಶಸ್ವಿ ಉದ್ಯಮಿ ಅಶುತೋಷ್ ಗರ್ಗ್ ಅವರು ಟ್ವಿನ್ ಕೆಫೆಯನ್ನು ಸ್ಥಾಪಿಸಿದ್ದು, ಜಾಗತಿಕ ಮಟ್ಟದ ಬೃಹತ್ ತಂತ್ರಜ್ಞಾನ ಸಂಸ್ಥೆಗಳನ್ನು ಕಟ್ಟಿದ ತಮ್ಮ ಅಗಾಧ ಅನುಭವವನ್ನು ಕೃತಕ ಬುದ್ಧಿಮತ್ತೆಯ ಉದಯೋನ್ಮುಖ ಕ್ಷೇತ್ರವಾದ ಡಿಜಿಟಲ್ ಟ್ವಿನ್ಸ್ ಗೆ ಪರಿಚಯಿಸಿದ್ದಾರೆ. ವಿವನ್ ಎಐ ಸಂಸ್ಥೆಯು ಪ್ರಸಿದ್ಧ ಖೋಸ್ಲಾ ವೆಂಚರ್ಸ್ ಮತ್ತು ಫೌಂಡೇಶನ್ ಕ್ಯಾಪಿಟಲ್ ನಿಂದ 35 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 290 ಕೋಟಿ ರೂ.) ಆರಂಭಿಕ ಬಂಡವಾಳ ಬೆಂಬಲವನ್ನು ಪಡೆದುಕೊಂಡಿದೆ.
