ಆಲೂರು : ಜಗತ್ತಿನ ಸಕಲ ಜೀವಿಗಳೆಲ್ಲಾ ಜೀವಿಸುತ್ತಿರುವುದೇ ವಾತಾವರಣದಲ್ಲಿನ ಪ್ರಾಣವಾಯುವಾದ ಆಮ್ಲಜನಕದಿಂದ. ಈ ಪ್ರಾಣವಾಯುವನ್ನು ನಮಗೆಲ್ಲಾ ತಯಾರಿಸಿ ಕೊಡುವುದೇ ಸಸ್ಯ ಸಂಕುಲ. ಅರಣ್ಯನಾಶದಿಂದ ಜಾಗತಿಕ ತಾಪಮಾನ ತೀವ್ರಗೊಂಡು ಋತುಮಾನಗಳೇ ವ್ಯತ್ಯಯಗೊಳ್ಳುತ್ತಿವೆ. ಜಾಗತಿಕ ತಾಪಮಾನವನ್ನು ಕಡಿಮೆಗೊಳಿಸಲು ಅರಣ್ಯೀಕರಣದ ಅನಿವಾರ್ಯತೆಯಿದೆ ಎಂದು ತಾಲ್ಲೂಕು ಶಿಕ್ಷಣಾಧಿಕಾರಿ ಎ.ಜೆ. ಕೃಷ್ಣೇಗೌಡ ಅಭಿಪ್ರಾಯಪಟ್ಟರು.
ಅವರು ಆಲೂರು ತಾಲ್ಲೂಕು ಭಾರತ್ ಸ್ಕೌಟ್ಸ್ ಗೈಡ್ಸ್ ವತಿಯಿಂದ ಬೈರಾಪುರ ಎಸ್.ವಿ.ಪಬ್ಲಿಕ್ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಪರಿಸರ ಎಂದರೆ ಕೇವಲ ಗಿಡಮರಗಳಲ್ಲ, ನಮ್ಮ ಸುತ್ತಮುತ್ತ ಕಾಣುವ ಪ್ರತಿಯೊಂದು ಅಂಶವೂ ಪರಿಸರವೇ. ಪರಿಸರ ಜೈವಿಕ ಮತ್ತು ಅಜೈವಿಕ ಅಂಶಗಳನ್ನು ಹೊಂದಿದೆ. ಹೆತೇಚ್ಛವಾಗಿ ಪ್ಲಾಸ್ಟಿಕ್ ಬಳಕೆ ಮಾಡುವುದರಿಂದಲೂ ಪರಿಸರಕ್ಕೆ ಮಾರಕ ಮಾಡುತ್ತಿದ್ದೇವೆ. ವಾಯು ಮಾಲಿನ್ಯ, ಜಲ ಮಾಲಿನ್ಯ, ಭೂ ಮಾಲಿನ್ಯ ಎಲ್ಲಾ ರೀತಿಯಿಂದಲೂ ಭೂಮಿಯನ್ನು ಕಲುಷಿತಗೊಳಿಸುತ್ತಿದ್ದೇವೆ. ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಗಿಡಮರಗಳು ದ್ವಿತಿ ಸಂಶ್ಲೇಷಣೆ ಪ್ರಕ್ರಿಯೆಯಿಂದ ಗಾಳಿಯಲ್ಲಿನ ಇಂಗಾಲದ ಡೈಆಕ್ಸೆöÊಡನ್ನು ಬಳಸಿಕೊಂಡು ವಾತಾವರಣಕ್ಕೆ ಆಮ್ಲಜನಕವನ್ನು ಬಿಡುಗಡೆಗೊಳಿಸುತ್ತವೆ. ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರಿಗೆ ವೈಜ್ಞಾನಿಕ ಪರಿಕಲ್ಪನೆ ಇದ್ದಿದ್ದರಿಂದಲೇ ಪ್ರತಿ ಹಳ್ಳಿಯಲ್ಲಿಯೂ ಅರಳಿಕಟ್ಟೆ ಇರುತ್ತಿತ್ತು. ಹಳ್ಳಿ ಪಂಚಾಯಿತಿಗಳು ಈ ಅರಳಿಕಟ್ಟೆ ಕೆಳಗಡೆ ಮಾಡುತ್ತಿದ್ದರು. ಏಕೆಂದರೆ ಅರಳಿಮರ ಅತಿ ಹೆಚ್ಚು ಆಮ್ಲಜನಕವನ್ನು ಉತ್ಪಾದನೆ ಮಾಡುವ ಶಕ್ತಿಹೊಂದಿದೆ. ಪ್ರತಿ ವಿದ್ಯಾರ್ಥಿಗಳೂ ವರ್ಷಕ್ಕೊಂದು ಗಿಡನೆಟ್ಟು ಬೆಳೆಸಿದರೂ ನಮ್ಮ ಸುತ್ತಮುತ್ತ ಹಸಿರು ನಿರ್ಮಾಣವಾಗುತ್ತದೆ. ಪರಿಸರ ದಿನಕ್ಕೋಸ್ಕರ ಸಸಿಗಳನ್ನು ನೆಟ್ಟರೆ ಮಾತ್ರ ಸಾಲದು ಅವುಗಳನ್ನು ಪೋಷಣೆ ಮಾಡುವ ಜವಬ್ದಾರಿಯೂ ನಮ್ಮದಾಗಬೇಕು. ಈ ನಿಟ್ಟಿನಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.

ಎಸ್.ವಿ.ಪಬ್ಲಿಕ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಿ.ಜಿ. ಗಿರೀಶ್ ಮಾತನಾಡಿ ನಾವೆಲ್ಲಾ ನಿತ್ಯ ನೆಮ್ಮದಿಯಿಂದ ಉಸಿರಾಡುತ್ತಿರುವುದೇ ಗಿಡಮರಗಳಿಂದ. ನಮ್ಮ ಪರಿಸರವನ್ನು ವೃದ್ಧಿಸಿ, ಪೋಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪರಿಸರ ಕಾಳಜಿ ಕೇವಲ ಶಾಲೆ, ಕಾಲೇಜುಗಳಿಗೆ ಮಾತ್ರ ಸೀಮಿತವಾಗದೇ ಸಾಮುದಾಯಿಕ ಪ್ರಜ್ಞೆಯಾಗಬೇಕು. ಸ್ಕೌಟ್ಸ್ ಗೈಡ್ಸ್ ಶಿಸ್ತು ಮತ್ತು ಸೇವೆಗೆ ಪ್ರಸಿದ್ಧಿ. ನಮ್ಮ ಶಾಲೆಯ ಎಲ್ಲಾ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಪರಿಸರ ಕಾಳಜಿಯ ಜೊತೆಗೆ ಪ್ಲಾಸ್ಟಿಕ್ ಬಳಕೆಯ ನಿಯಂತ್ರಣ ಮಾಡಬೇಕು. ಬಟ್ಟೆ ಚೀಲಗಳನ್ನು ಬಳಸುವ ಮೂಲಕ ಪ್ಲಾಸ್ಟಿಕ್ ಬ್ಯಾಗ್ ಬಳಕೆಯನ್ನು ನಿಷೇಧಿಸಬೇಕು. ವಾತಾರಣದಲ್ಲಿ ಋತುಮಾನಗಳ ಏರುಪೇರುಗಳಾಗುತ್ತಿರುವುದೇ ಅರಣ್ಯ ನಾಶ ಹಾಗೂ ಜಾಗತಿಕ ತಾಪಮಾನಗಳ ವ್ಯತ್ಯಯದಿಂದ. ನಾವೆಲ್ಲಾ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಕೆಲವೇ ವರ್ಷಗಳಲ್ಲಿ ಮಲೆನಾಡು ಭಾಗದಲ್ಲೇ ತಾಪಮಾನ ೫೦ಕ್ಕೂ ಅಧಿಕವಾಗುವ ಸಂಭವವಿದೆ ಎಂದು ಎಚ್ಚರಿಸಿದರು.
ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ. ಪ್ರಿಯಾಂಕ ಮಾತನಾಡಿ, ನಮ್ಮ ಪ್ರತಿಯೊಬ್ಬ ಸ್ಕೌಟ್ ಹಾಗೂ ಗೈಡ್ ಪರಿಸರ ಪ್ರೇಮಿ ಹಾಗೂ ಪ್ರಾಣಿ ಪ್ರಿಯರು. ಆದ್ದರಿಂದ ಪರಿಸರ ಜಾಗೃತಿಗೆ ನಮ್ಮ ಕೈಲಾದಷ್ಟು ಸಹಕಾರ ನೀಡುವುದು ನಮ್ಮೆಲ್ಲರ ಕರ್ತವ್ಯ. ಈಗ ಹಣ್ಣಿನ ಋತುಮಾನವಾದ್ದರಿಂದ ನಾವು ನಿತ್ಯ ಮಾವಿನ ಹಣ್ಣು, ಹಲಸಿನ ಹಣ್ಣು, ನೇರಳೆ ಹಣ್ಣು ಮುಂತಾದವುಗಳನ್ನು ಸೇವಿಸಿದ ನಂತರ ಅವುಗಳ ಬೀಜಗಳನ್ನು ಮಣ್ಣಿನ ಉಂಡೆ ಮಾಡಿ ಅದರೊಳಗೆ ಬೀಜಗಳನ್ನಿಟ್ಟು ಬೀಜದುಂಡೆ ಮಾಡಿ ತಂದು ಶಿಕ್ಷಕರಿಗೆ ತಲುಪಿಸಿ. ತಾಲ್ಲೂಕು ಹಂತದಲ್ಲಿ ನಮ್ಮ ಸಂಸ್ಥೆ ಅಗತ್ಯವಿರುವ ಕಡೆ ಬೀಜದುಂಡೆಗಳ ನಾಟಿ ಮಾಡುತ್ತಾರೆ. ಈ ದಿಸೆಯಲ್ಲಿ ಪ್ರತಿ ವಿದ್ಯಾರ್ಥಿಯೂ ಕನಿಷ್ಠ ಐದೈದು ಬೀಜದುಂಡೆಗಳನ್ನು ಮಾಡಿಕೊಂಡು ಬರಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ, ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್, ಶಾಲಾ ಮುಖ್ಯ ಶಿಕ್ಷಕಿ ಎಸ್.ಎನ್. ನಳಿನಗಿರೀಶ್, ಆಡಳಿತಾಧಿಕಾರಿ ಎಂ.ಎನ್. ಸುನಿಲ್ ಮುಂತಾದವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡು ಯಶಸ್ವೀಗೊಳಿಸಿದ ಮಕ್ಕಳಿಗೆ ರಾಜ್ಯ ಸಂಸ್ಥೆ ನೀಡಿದ ಪ್ರಮಾಣ ಪತ್ರಗಳನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಜೆ.ಕೃಷ್ಣೇಗೌಡರವರು ಮುಖ್ಯ ಶಿಕ್ಷಕರಾದ ಎಸ್.ಎನ್.ನಳಿನ ಗಿರೀಶ್ರವರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಕಬ್ ಮಾಸ್ಟರ್ ದೇವರಾಜು ಹಾಗೂ ಲೇಡಿ ಸ್ಕೌಟ್ ಮಾಸ್ಟರ್ ರೋಸ್ ಮೇರಿ ಧ್ವಜಾರೋಣ ನಡೆಸಿಕೊಟ್ಟರು. ಸ್ಕೌಟ್ ಮಾಸ್ಟರ್ ಸತೀಶ್ ಕಾರ್ಯಕ್ರಮ ನಿರೂಪಿಸಿದರು, ಲೇಡಿ ಸ್ಕೌಟ್ ಮಾಸ್ಟರ್ ಹರ್ಷಿತಾ ಸ್ವಾಗತಿಸಿದರು, ರಾಜ್ಯ ಪುರಸ್ಕಾರ್ ಗೈಡ್ ಚಲನ ವಂದಿಸಿದರು. ಈ ಸಂದರ್ಭದಲ್ಲಿ ಬೈರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೈಡ್ ನಾಯಕಿ ಅಶ್ವಿನಿ, ಎಸ್.ವಿ.ಪಬ್ಲಿಕ್ ಶಾಲೆಯ ಗೈಡ್ ಶಿಕ್ಷಕಿ ಚೈತ್ರ, ಲೇಡಿ ಸ್ಕೌಟ್ ಮಾಸ್ಟರ್ ನವ್ಯಶ್ರೀ ಸೇರಿದಂತೆ ಎಸ್.ವಿ.ಪಬ್ಲಿಕ್ ಶಾಲೆ ಹಾಗೂ ಬೈರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ಸ್ ಗೈಡ್ಸ್, ಕಬ್ಸ್ ಬುಲ್ಬುಲ್ಸ್ ಮಕ್ಕಳು ಭಾಗವಹಿಸಿದ್ದರು.
