ಹಾಸನ, ಜು. 6: ಕರ್ತವ್ಯ ಲೋಪ, ಮೇಲಾಧಿಕಾರಿಗಳ ಆದೇಶ ಉಲ್ಲಂಘನೆ ಹಾಗೂ ನ್ಯಾಯಾಧೀಶರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಅರಕಲಗೂಡು ಪೊಲೀಸ್ ಠಾಣೆಯ ಸಿಬ್ಬಂದಿ ಜಗದೀಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.
ಆದೇಶದ ಪ್ರಕಾರ, ಜೂನ್ 28ರಂದು ರಾತ್ರಿ ಇಆರ್ಎಸ್ಎಸ್ (ERSS) ಕರ್ತವ್ಯದಲ್ಲಿದ್ದ ಜಗದೀಶ್ ಅವರಿಗೆ ಅರಕಲಗೂಡು ಪಟ್ಟಣದ ಅನಕೃ ವೃತ್ತದ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಾಧೀಶ ಲೋಕೇಶ್ ಸೂಚಿಸಿದ್ದರು. ಆದರೆ, ನ್ಯಾಯಾಧೀಶರ ಸೂಚನೆಯನ್ನು ಪಾಲಿಸದೆ ಅವರು ಉದ್ಧಟತನದಿಂದ ವರ್ತಿಸಿದ್ದಾಗಿ ಆರೋಪಿಸಲಾಗಿದೆ.
ಇದೇ ವೇಳೆ ನಡೆದ ವಾಗ್ವಾದದ ಸಂದರ್ಭದಲ್ಲಿ ಜಗದೀಶ್ ಅವರು ನ್ಯಾಯಾಧೀಶರ ಮೊಬೈಲ್ ಫೋನ್ ಕಸಿದುಕೊಳ್ಳಲು ಯತ್ನಿಸಿದ್ದರೆಂದು ವರದಿಯಾಗಿದೆ. ಸ್ಥಳದಲ್ಲಿದ್ದ ನ್ಯಾಯಾಲಯದ ಸಿಬ್ಬಂದಿ ಹಾಗೂ ಸಾರ್ವಜನಿಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ, ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಬದಲು ಜಗದೀಶ್ ಸಮರ್ಥನೆಗೆ ಮುಂದಾಗಿದ್ದರು ಎಂದು ತಿಳಿದುಬಂದಿದೆ.
ನ್ಯಾಯಾಂಗದ ಪ್ರತಿನಿಧಿಯಾದ ನ್ಯಾಯಾಧೀಶರೊಂದಿಗೆ ಅಸಭ್ಯವಾಗಿ ವರ್ತಿಸಿ ಇಲಾಖೆಯ ಗೌರವಕ್ಕೆ ಧಕ್ಕೆ ತಂದಿರುವುದು, ಕರ್ತವ್ಯದ ವೇಳೆಯಲ್ಲಿ ಇಆರ್ಎಸ್ಎಸ್ ವಾಹನವನ್ನು ಬಳಸದೇ ಖಾಸಗಿ ವಾಹನದಲ್ಲಿ ತೆರಳಿರುವುದು ಹಾಗೂ ವೃತ್ತಿಪರ ಮೌಲ್ಯಗಳನ್ನು ಉಲ್ಲಂಘಿಸಿ ಬೇಜವಾಬ್ದಾರಿತನ ಪ್ರದರ್ಶಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ಅನ್ವಯ ಜಗದೀಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
