ಚನ್ನರಾಯಪಟ್ಟಣ, ಜು. 6: ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಪ್ರೆಸ್ಟೀಜ್ ಗ್ಲೋಬಲ್ ಅಕಾಡೆಮಿ ಹಾಗೂ ರೆಸಿಡೆನ್ಸಿಯಲ್ @ ಡೇ ಸ್ಕಾಲರ್ ಮತ್ತು ಟ್ರಸ್ಟ್ ಪಿಯು ಕಾಲೇಜ್ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ‘ಪಿಜಿಎ ಪ್ರಾರಂಭಂ’ ಎಂಬ ವಿನೂತನ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಶ್ರೀದೇವಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ವಿಜಯಕುಮಾರ್ ಹಾಗೂ ಕಾರ್ಯದರ್ಶಿ ಶ್ರೀಮತಿ ಆಶಾ ವಿಜಯಕುಮಾರ್ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಗುರುಬಸವರಾಜ್ ಮಾತನಾಡಿ, ವಿದ್ಯಾರ್ಥಿಗಳು ಪ್ರೀತಿ-ಪ್ರೇಮದಂತಹ ಆಕರ್ಷಣೆಗಳಿಗೆ ಒಳಗಾಗದೆ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಿ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಕರೆ ನೀಡಿದರು. ಪಿಯು ಶಿಕ್ಷಣದ ಎರಡು ವರ್ಷಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಅತ್ಯಂತ ಮಹತ್ವದ ಅವಧಿಯಾಗಿದ್ದು, ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಪೋಷಕರ ತ್ಯಾಗ ಮತ್ತು ನಿರೀಕ್ಷೆಗಳನ್ನು ಮನದಲ್ಲಿಟ್ಟುಕೊಂಡು ನಿರಂತರ ಅಧ್ಯಯನದ ಮೂಲಕ ಯಶಸ್ಸು ಸಾಧಿಸಿ ಕುಟುಂಬ, ಶಿಕ್ಷಣ ಸಂಸ್ಥೆ, ರಾಜ್ಯ ಹಾಗೂ ರಾಷ್ಟ್ರಕ್ಕೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಂಸ್ಥೆಯ ಆಡಳಿತ ಮಂಡಳಿ ಮತ್ತು ಉಪನ್ಯಾಸಕರ ಪರಿಶ್ರಮಕ್ಕೆ ತಕ್ಕ ಪ್ರತಿಫಲವಾಗಿ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಗಳಿಸುವಂತೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜೀವಶಾಸ್ತ್ರ ಉಪನ್ಯಾಸಕಿ ರಂಜಿತಾ ಮಹೇಶ್ ಅತಿಥಿಗಳನ್ನು ಸ್ವಾಗತಿಸಿದರು. ಭೌತಶಾಸ್ತ್ರ ಉಪನ್ಯಾಸಕ ಗುಣ ದಿಲೀಪ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲ ದಿಲೀಪ್ ಪ್ರಸ್ತಾವಿಕವಾಗಿ ಮಾತನಾಡಿದರೆ, ಗಣಿತ ಉಪನ್ಯಾಸಕ ಸೌರಭ ದಿನೇಶ್ ವಂದಿಸಿದರು.
ಈ ಸಂದರ್ಭದಲ್ಲಿ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಎಲ್. ಕುಮಾರ್, ಸಂಸ್ಥೆಯ ಪ್ರೋತ್ಸಾಹಕರಾದ ಜೋಗಿಪುರ ಗಂಗಾಧರ್, ಪ್ರಮೋದ್ ಹಾಗೂ ಸಂಸ್ಥೆಯ ನಿರ್ದೇಶಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
