ಅರಕಲಗೂಡು : ವೀರಶೈವ ಲಿಂಗಾಯತ ಸಮಾಜದ ಸಂಘಟನೆಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಗೌರವಾಧ್ಯಕ್ಷರು ಹಾಗೂ ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಕರೆ ನೀಡಿದರು.
ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸೂಕ್ತ ಸ್ಥಾನಮಾನ ಪಡೆಯಲು ವೀರಶೈವ ಲಿಂಗಾಯತ ಸಮುದಾಯ ಒಗ್ಗಟ್ಟಿನಿಂದ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ ಎಂದರು.

ಜಿಲ್ಲೆಯಲ್ಲಿ ಒಬ್ಬ ಶಾಸಕರನ್ನೂ ಆಯ್ಕೆ ಮಾಡಿಸಿಕೊಳ್ಳಲು ಸಾಧ್ಯವಾಗದಿರುವುದು ಸಮುದಾಯದ ಸಂಘಟನಾ ಕೊರತೆಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಬಗರ್ ಹುಕುಂ ಸಾಗುವಳಿ ಜಮೀನು ಹಂಚಿಕೆ ವಿಚಾರದಲ್ಲಿ ಅಧಿಕಾರಿಗಳ ಪಾತ್ರವಿದ್ದು, ಯಾರೋ ದೂರು ನೀಡಿದ್ದಾರೆ ಎಂಬ ಕಾರಣಕ್ಕೆ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿರುವುದು ಸರಿಯಲ್ಲ ಎಂದು ಹೇಳಿದರು.
ಜಿಲ್ಲೆಯ ಬಹುಸಂಖ್ಯಾತ ಸಮುದಾಯಕ್ಕೆ ರಕ್ಷಣೆ ಇಲ್ಲದಂತಾಗಿರುವುದು ದುರದೃಷ್ಟಕರ ಸಂಗತಿಯಾಗಿದ್ದು, ಈ ಕ್ರಮವನ್ನು ಮಹಾಸಭೆ ಒಕ್ಕೊರಲಿನಿಂದ ಖಂಡಿಸುತ್ತದೆ ಎಂದು ತಿಳಿಸಿದರು.

ಮಹಾಸಭೆಯ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಬಿ.ಕೆ. ಚಂದ್ರಕಲಾ ಮಾತನಾಡಿ, ಸಂಘಟನೆಗೆ ರಾಜಕೀಯ ಸೋಂಕು ತಟ್ಟದಂತೆ ನೋಡಿಕೊಳ್ಳಬೇಕು. ವೀರಶೈವ ಲಿಂಗಾಯತ ಮಹಾಸಭೆ ದೊಡ್ಡ ಸಂಘಟನೆಯಾಗಿದ್ದು, ಅದರ ಘನತೆಗೆ ಕಪ್ಪು ಚುಕ್ಕೆ ಬಾರದಂತೆ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಜಿಲ್ಲಾ ಉಪಾಧ್ಯಕ್ಷ ಎ.ಬಿ. ಗುರುಸಿದ್ದೇಶ್, ಸುರೇಶ್, ಬೋರೆಹಳ್ಳಿ ಸೋಮಶೇಖರ್, ಪುನೀತ್ ಪಟೇಲ್, ಹಾಸನ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ವಿವಿಧ ತಾಲೂಕುಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಅರಸೀಕೆರೆ ಘಟಕದ ಅಧ್ಯಕ್ಷ ಶೇಖರ್ ಸಂಕೋಡನಹಳ್ಳಿ, ಸಕಲೇಶಪುರದ ದಿನೇಶ್, ಹೊಳೆನರಸೀಪುರದ ರಾಜಶೇಖರ್, ಎಸ್.ಎಂ.ಎಸ್. ಕುಮಾರ್, ಅಜ್ಜನಹಳ್ಳಿ ಚಂದ್ರಶೇಖರ್, ಅನಿಲ್ ಕುಮಾರ್, ಜಗದೀಶ್ ಸೇರಿದಂತೆ ಹಲವು ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
– ಶಿವಕುಮಾರ್ ಕಟ್ಟಾಯ
