ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಧ್ಯಾಹ್ನ 3 ಗಂಟೆಗೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಲೋಕಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ನೀಡಲಿದ್ದು, ರಾಜ್ಯಪಾಲರು ಲಭ್ಯವಿಲ್ಲದಿದ್ದರೆ ಅವರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಅಧಿಕೃತ ನಿವಾಸ ಕಾವೇರಿಯಲ್ಲಿ ಸಚಿವರಿಗೆ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಮಾತನಾಡಿದ ಸಿದ್ದರಾಮಯ್ಯ, “ನಾನು ಮಾಡಿರುವ ಕೆಲಸಗಳ ಬಗ್ಗೆ ನನಗೆ ಸಮಾಧಾನ ಇದೆ. ಸರ್ಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ಮುಂದೆ ಕೂಡ ಜನಪರ ಕೆಲಸಗಳನ್ನು ಮುಂದುವರಿಸಿ” ಎಂದು ಭಾವನಾತ್ಮಕವಾಗಿ ಹೇಳಿದರು. ಈ ವೇಳೆ ಅವರು ಕಣ್ಣೀರು ಹಾಕಿದ ಘಟನೆ ಸಚಿವರು ಹಾಗೂ ಕಾರ್ಯಕರ್ತರಲ್ಲಿ ಭಾವುಕ ವಾತಾವರಣ ನಿರ್ಮಿಸಿತು.

ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯಿಂದ ಎಚ್ಚರಿಕೆಯಿಂದ ಇರಬೇಕು ಎಂದು ಸಚಿವರಿಗೆ ಸಲಹೆ ನೀಡಿದರು. ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ನಿರಂತರವಾಗಿ ಮಾಡಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಮುಂದಿನ ಮುಖ್ಯಮಂತ್ರಿ ಆಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿಯನ್ನು ಸಿದ್ದರಾಮಯ್ಯ ತಿಳಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ನಾಯಕತ್ವ ಬದಲಾವಣೆಗೆ ಅಂತಿಮ ಮುದ್ರೆ ಹಾಕುವ ಹಂತದಲ್ಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ.
ಈ ರಾಜಕೀಯ ಬೆಳವಣಿಗೆಯ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ “ಅಂದು, ಇಂದು, ಎಂದೆಂದಿಗೂ ಒಗ್ಗಟ್ಟೇ ನಮ್ಮ ಶಕ್ತಿ, ಜನಸೇವೆಯೇ ನಮ್ಮ ಬದ್ಧತೆ” ಎಂಬ ಸಂದೇಶ ಪೋಸ್ಟ್ ಮಾಡಲಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷ ಒಗ್ಗಟ್ಟಿನ ಸಂದೇಶ ನೀಡಲು ಮುಂದಾಗಿದೆ.
ಇದೀಗ ರಾಜ್ಯ ರಾಜಕೀಯದ ಗಮನ ಡಿಕೆ ಶಿವಕುಮಾರ್ ಪ್ರಮಾಣವಚನ, ಹೊಸ ಸಚಿವ ಸಂಪುಟ ರಚನೆ ಹಾಗೂ ಮುಂದಿನ ರಾಜಕೀಯ ಬೆಳವಣಿಗೆಗಳತ್ತ ಕೇಂದ್ರೀಕೃತವಾಗಿದೆ.
