ಬೆಂಗಳೂರು, ಸೆ.11: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 30 ವರ್ಷಗಳ ಯಶಸ್ವಿ ಪಯಣ ಪೂರ್ಣಗೊಳಿಸಿರುವ ಸುಮಧುರ ಗ್ರೂಪ್, 2030ರ ವೇಳೆಗೆ ತನ್ನ ವ್ಯಾಪಾರ ವಿಸ್ತರಣೆಗೆ ಮಹತ್ವದ ಯೋಜನೆ ರೂಪಿಸಿದೆ. 2027ರಿಂದ 2030ರ ಅವಧಿಯಲ್ಲಿ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ನಗರಗಳಲ್ಲಿ ಒಟ್ಟು 45 ಮಿಲಿಯನ್ ಚದರ ಅಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಂಸ್ಥೆ ₹17,000 ಕೋಟಿ ಹೂಡಿಕೆ ಮಾಡಲು ಉದ್ದೇಶಿಸಿದೆ.
ಸಂಸ್ಥೆಯ ವಿಷನ್ 2030 ಯೋಜನೆಯಡಿ ವಸತಿ, ವಾಣಿಜ್ಯ, ಕೈಗಾರಿಕಾ ಹಾಗೂ ವೇರ್ಹೌಸಿಂಗ್ ಕ್ಷೇತ್ರಗಳಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಲು ಮುಂದಾಗಿದೆ.
ವಸತಿ ಕ್ಷೇತ್ರದಲ್ಲಿ ಸುಮಾರು ₹38,000 ಕೋಟಿ ಒಟ್ಟು ಅಭಿವೃದ್ಧಿ ಮೌಲ್ಯದೊಂದಿಗೆ 35 ಮಿಲಿಯನ್ ಚದರ ಅಡಿ ಯೋಜನೆಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಗುರಿಯನ್ನು ಸಂಸ್ಥೆ ಹೊಂದಿದೆ. ಇದರೊಂದಿಗೆ ಐಷಾರಾಮಿ ವಿಲ್ಲಾಗಳ ವಿಭಾಗಕ್ಕೂ ಪ್ರವೇಶಿಸಲು ಹಾಗೂ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನ ಪ್ರಮುಖ ಮೈಕ್ರೋ-ಮಾರುಕಟ್ಟೆಗಳಲ್ಲಿ ಭೂಸಂಗ್ರಹವನ್ನು ವಿಸ್ತರಿಸಲು ಯೋಜಿಸಿದೆ.
ವಾಣಿಜ್ಯ ವಿಭಾಗದಲ್ಲಿ 4.2 ಮಿಲಿಯನ್ ಚದರ ಅಡಿ ಗ್ರೇಡ್-ಎ ಕಚೇರಿ ಸ್ಥಳವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದು, ಇದರಿಂದ ವಾರ್ಷಿಕ ₹680 ಕೋಟಿ ಸಂಭಾವ್ಯ ಬಾಡಿಗೆ ಆದಾಯ ಗಳಿಸುವ ನಿರೀಕ್ಷೆಯಿದೆ. ಬೆಂಗಳೂರಿನ ಔಟರ್ ರಿಂಗ್ ರೋಡ್ ಉದ್ದಕ್ಕೂ ಪ್ರೀಮಿಯಂ ವಾಣಿಜ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ವಾಣಿಜ್ಯ ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಲು ಸಂಸ್ಥೆ ಮುಂದಾಗಿದೆ.
ಅದೇ ರೀತಿ, ವೇರ್ಹೌಸಿಂಗ್ ಕ್ಷೇತ್ರದಲ್ಲಿ 5.6 ಮಿಲಿಯನ್ ಚದರ ಅಡಿ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ವಾರ್ಷಿಕ ₹462 ಕೋಟಿ ಸಂಭಾವ್ಯ ಬಾಡಿಗೆ ಆದಾಯದ ಸಾಮರ್ಥ್ಯ ಹೊಂದಿದೆ. ಬೆಂಗಳೂರಿನ ಹೊಸಕೋಟೆ ಲಾಜಿಸ್ಟಿಕ್ಸ್ ಪಾರ್ಕ್ನ ಯಶಸ್ಸಿನ ಬೆನ್ನಲ್ಲೇ ಚೆನ್ನೈನ ರೆಡ್ ಹಿಲ್ಸ್ನಲ್ಲಿ 1.2 ಮಿಲಿಯನ್ ಚದರ ಅಡಿ ಗ್ರೇಡ್-ಎ ಕೈಗಾರಿಕಾ ಹಾಗೂ ಲಾಜಿಸ್ಟಿಕ್ಸ್ ಪಾರ್ಕ್ ಆರಂಭಿಸಿರುವ ಸಂಸ್ಥೆ, ಪ್ರಮುಖ ಲಾಜಿಸ್ಟಿಕ್ಸ್ ಕಾರಿಡಾರ್ಗಳಲ್ಲಿ ತನ್ನ ವಿಸ್ತರಣೆಯನ್ನು ಮುಂದುವರಿಸಲಿದೆ.
ಈ ಕುರಿತು ಮಾತನಾಡಿದ ಸುಮಧುರ ಗ್ರೂಪ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಧುಸೂದನ್ ಜಿ., “₹17,000 ಕೋಟಿ ಹೂಡಿಕೆ ಮತ್ತು 45 ಮಿಲಿಯನ್ ಚದರ ಅಡಿ ಅಭಿವೃದ್ಧಿಯ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿನ ಮೂರು ದಶಕಗಳ ಪರಂಪರೆಯನ್ನು ಮತ್ತಷ್ಟು ಮುನ್ನಡೆಸುತ್ತಿದ್ದೇವೆ. ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈಗಳಲ್ಲಿ ಬಲವಾದ ಬೇಡಿಕೆಯನ್ನು ಸದುಪಯೋಗಪಡಿಸಿಕೊಂಡು ಗ್ರಾಹಕರು ಹಾಗೂ ಪಾಲುದಾರರಿಗೆ ದೀರ್ಘಾವಧಿಯ ಮೌಲ್ಯ ಸೃಷ್ಟಿಸುವುದು ನಮ್ಮ ಗುರಿ” ಎಂದು ಹೇಳಿದರು.
ಸುಮಧುರ ಗ್ರೂಪ್ ಇದುವರೆಗೆ 17 ಮಿಲಿಯನ್ ಚದರ ಅಡಿಗೂ ಹೆಚ್ಚು ವಿಸ್ತೀರ್ಣದ 56ಕ್ಕೂ ಅಧಿಕ ಯೋಜನೆಗಳನ್ನು ಪೂರ್ಣಗೊಳಿಸಿದ್ದು, 40 ಮಿಲಿಯನ್ ಚದರ ಅಡಿಗೂ ಹೆಚ್ಚಿನ ಯೋಜನೆಗಳು ಪ್ರಗತಿಯಲ್ಲಿವೆ. ವಸತಿ ಯೋಜನೆಗಳ ಜೊತೆಗೆ ವಾಣಿಜ್ಯ, ವೇರ್ಹೌಸಿಂಗ್ ಹಾಗೂ ಕೋ-ಲಿವಿಂಗ್ ಸೇರಿದಂತೆ ವಿವಿಧ ರಿಯಲ್ ಎಸ್ಟೇಟ್ ವಿಭಾಗಗಳಲ್ಲಿಯೂ ಸಂಸ್ಥೆ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿದೆ.
