ಶ್ಲೋಕ – 23
ರೂಪಂ ಮಹತ್ ತೇ ಬಹುವಕ್ತ್ರನೇತ್ರಂ ಮಹಾಬಾಹೋ ಬಹುಬಾಹೂರುಪಾದಮ್ ।
ಬಹೂದರಂ ಬಹುದಂಷ್ಟ್ರಾಕರಾಳಂ ದೃಷ್ಟ್ವಾ ಲೋಕಾಃ ಪ್ರವ್ಯಥಿತಾಸ್ತಥಾಹಮ್ ॥೨೩॥
ರೂಪಮ್ ಮಹತ್ ತೇ ಬಹು ವಕ್ತ್ರ ನೇತ್ರಮ್ ಮಹಾಬಾಹೋ ಬಹುಬಾಹು ಊರು ಪಾದಮ್ ।
ಬಹು ಉದರಮ್ ಬಹುದಂಷ್ಟ್ರಾಕರಾಳಮ್ ದೃಷ್ಟ್ವಾ ಲೋಕಾಃ ಪ್ರವ್ಯಥಿತಾಃ ತಥಾ ಅಹಮ್ – ಓ ಮಹಾಬಾಹೂ, ಹಬ್ಬಿ ನಿಂತ ನಿನ್ನ ರೂಪಕ್ಕೆ ಹಲವು ಬಾಯಿ ಕಣ್ಣುಗಳು. ಹಲವು ತೊಡೆ ಕಾಲುಗಳು, ಹಲವು ಹೊಟ್ಟೆಗಳು. ಹಲವು ದಾಡೆಗಳಿಂದ ಅಬ್ಬರಗೊಂಡ ಈ ರೂಪವನ್ನು ಕಂಡು ಲೋಕದ ಮಂದಿ ಬೆಚ್ಚಿಬಿದ್ದಿದ್ದಾರೆ; ನಾನು ಕೂಡ.
ಭಗವಂತನ ಅಂಗಾಂಗಗಳಲ್ಲಿ ಹೇಗೆ ಸೃಷ್ಟಿ ಕ್ರಿಯೆ ನಡೆಯುತ್ತಿದೆ ಎನ್ನುವುದನ್ನು ಅರ್ಜುನ ಕಾಣುತ್ತಿದ್ದಾನೆ. ಪುರುಷ ಸೂಕ್ತದಲ್ಲಿ ಹೇಳುವಂತೆ :
ಬ್ರಾಹ್ಮಣೋಸ್ಯ ಮುಖಮಾಸೀತ್ | ಬಾಹೂ ರಾಜನ್ಯಃ ಕೃತಃ |ಊರೂ ತದಸ್ಯ ಯದ್ವೈಶ್ಯಃ | ಪದ್ಭ್ಯಾಗ್ಂ ಶೂದ್ರೋ ಅಜಾಯತ ||೧೩||
ಅಂದರೆ ಭಗವಂತನ ಮುಖದಿಂದ ಜ್ಞಾನಿಗಳ(Wisdom) ಸೃಷ್ಟಿ, ಬಾಹುವಿನಿಂದ ಕ್ಷತ್ರಿಯರ(Protection) ಸೃಷ್ಟಿ, ಸೊಂಟ ಅಥವಾ ತೊಡೆಯಿಂದ ವೈಶ್ಯರ(Production) ಸೃಷ್ಟಿ ಮತ್ತು ಪವಿತ್ರವಾದ ಪಾದದಿಂದ ಶೂದ್ರರ(Service) ಸೃಷ್ಟಿ. ಈ ನಾಲ್ಕು ವರ್ಗ ಈ ಸಮಾಜದ ನಾಲ್ಕು ಆಧಾರ ಸ್ಥಂಭಗಳು. ಅರ್ಜುನನಿಗೆ ಈ ನಾಲ್ಕು ವರ್ಗದ ಸೃಷ್ಟಿ ಭಗವಂತನ ದೇಹದಲ್ಲಾಗುತ್ತಿರುವುದು ಕಾಣಿಸುತ್ತಿದೆ. ಅದರ ಜೊತೆಗೆ ಆತ ಅಲ್ಲಿ ಎಲ್ಲರನ್ನು ಕಬಳಿಸುವ (ಸಂಹಾರ ಕ್ರಿಯೆ) ಹಲವು ದಾಡೆಗಳಿಂದ ತುಂಬಿದ ರೂಪವನ್ನು ಕಾಣುತ್ತಾನೆ. ಭಗವಂತನ ಈ ರೂಪವನ್ನು ಕಂಡು ಎಲ್ಲರೂ ವಿಸ್ಮಯರಾಗಿದ್ದಾರೆ. “ನಾನೂ ಕೂಡ ಗಾಬರಿಗೊಳಗಾಗಿದ್ದೇನೆ” ಎನ್ನುತ್ತಾನೆ ಅರ್ಜುನ.
