ಶ್ಲೋಕ – 13
ಅಪ್ರಕಾಶೋSಪ್ರವೃತ್ತಿಶ್ಚ ಪ್ರಮಾದೋ ಮೋಹ ಏವ ಚ ।
ತಮಸ್ಯೇತಾನಿ ಜಾಯಂತೇ ವಿವೃದ್ಧೇ ಕುರುನಂದನ ॥೧೩॥
ಅಪ್ರಕಾಶಃ ಅಪ್ರವೃತ್ತಿಃ ಚ ಪ್ರಮಾದಃ ಮೋಹಃ ಏವ ಚ ।
ತಮಸಿ ಏತಾನಿ ಜಾಯಂತೇ ವಿವೃದ್ಧೇ ಕುರುನಂದನ – ಓ ಕುರುನಂದನ, ತಮಸ್ಸು ಬಲಗೊಂಡಾಗ ಕಂಡುಬರುವ ಅಂಶಗಳು ಇವು: ಅಂಧಕಾರ, ಹುರುಪುಗೇಡು, ಎಚ್ಚರಗೇಡು ಮತ್ತು ತಪ್ಪರಿವು.
ತಮೋಗುಣ ಜಾಗೃತವಾದಾಗ ಒಳಗೂ ಹೊರಗೂ ಎಲ್ಲವೂ ಕತ್ತಲು. ಯಾವಾಗಲೂ ನಿದ್ದೆ ಮಾಡುವುದು, ತಪ್ಪು ಮಾಡುವುದು, ಅಜ್ಞಾನದಲ್ಲಿ ಬದುಕುವುದು- ತಮೋಗುಣದ ಪ್ರಭಾವದಿಂದ. ಮುಂಜಾನೆ ಸೂರ್ಯ ಮೂಡುವ ಮುಂಚೆ ಏಳಲು ತಮೋಗುಣ ಬಿಡುವುದಿಲ್ಲ. ಸದಾ ನಿದ್ದೆಮಾಡುವಂತೆ ಈ ಗುಣ ನಮ್ಮನ್ನು ಪ್ರೇರೇಪಿಸುತ್ತದೆ. ಈ ಗುಣ ಸದಾ ಕತ್ತಲೆಯನ್ನು ಬಯಸುವಂತೆ ಮಾಡುತ್ತದೆ. ಇದರ ಪ್ರಭಾವದಿಂದ ಪಾರಾಗಲು ನಾವು ಕುರುನಂದನರಾಗಬೇಕು. ನಮ್ಮನ್ನು ನಾವು ಯಾವುದೋ ಒಂದು ಕೆಲಸದಲ್ಲಿ ತೊಡಗಿಸಿಕೊಂಡು ಅದನ್ನು ರೂಢಿ ಮಾಡಿಕೊಳ್ಳಬೇಕು. ಉದಾಹರಣೆಗೆ: ಮುಂಜಾನೆ ಸೂರ್ಯೋದಯವಾಗುವ ಮುಂಚೆ ಏಳುವ ಅಭ್ಯಾಸ ಮಾಡಿಕೊಳ್ಳುವುದು. ಹೀಗೆ ರೂಢಿ ಮಾಡಿಕೊಂಡಾಗ ಮನಸ್ಸು ಅದನ್ನು ಬಿಡಲು ಕೇಳುವುದಿಲ್ಲ.
ನಮ್ಮಲ್ಲಿ ಕೆಲವರು ಹೇಳುವುದಿದೆ. “ಅಧ್ಯಾತ್ಮ ಚಿಂತನೆ ಮಾಡಲು ನನಲ್ಲಿ ಸಮಯವಿಲ್ಲ” ಎಂದು. ಆದರೆ ಇವರು ತಮ್ಮ ರಜಾ ದಿನಗಳಲ್ಲಿ ಮುಂಜಾನೆಯಿಂದ ಸಂಜೆಯತನಕ ಸೋಮಾರಿಯಾಗಿ ನಿದ್ದೆ ಮಾಡುತ್ತಾ ಕಾಲಹರಣ ಮಾಡುತ್ತಿರುತ್ತಾರೆ. ಹೀಗೆ ನಮಗರಿವಿಲ್ಲದಂತೆ ನಮ್ಮನ್ನು ತಮೋಗುಣ ಆಕ್ರಮಿಸಿ ನಿಯಂತ್ರಿಸುತ್ತಿರುತ್ತದೆ. ನಾವು ಸೋಮಾರಿಯಾಗದೆ ಯಾವುದಾದರೂ ಕರ್ತವ್ಯದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದರಿಂದ ತಮೋಗುಣದ ಪ್ರಭಾವದಿಂದ ಪಾರಾಗಬಹುದು.
