ಶ್ಲೋಕ – 20
ಇತಿ ಗುಹ್ಯತಮಂ ಶಾಸ್ತ್ರಮಿದಮುಕ್ತಂ ಮಯಾSನಘ ।
ಏತದ್ ಬುದ್ಧ್ವಾ ಬುದ್ಧಿಮಾನ್ ಸ್ಯಾತ್ ಕೃತ ಕೃತ್ಯಶ್ಚ ಭಾರತ ॥೨೦॥
ಇತಿ ಗುಹ್ಯತಮಮ್ ಶಾಸ್ತ್ರಮ್ ಇದಮ್ ಉಕ್ತಮ್ ಮಯಾ ಅನಘ ।
ಏತತ್ ಬುದ್ಧ್ವಾ ಬುದ್ಧಿಮಾನ್ ಸ್ಯಾತ್ ಕೃತಕೃತ್ಯಶ್ಚ ಭಾರತ—ಓ ಅನಘ, ತುಂಬ ಮುಚ್ಚಿಡಬೇಕಾದ ಮಾತನ್ನು ನಾನು ನಿನ್ನೆದುರು ಬಿಚ್ಚಿಟ್ಟಿದ್ದೇನೆ. ಇದನ್ನರಿತವನು ಭಗವಂತನನ್ನು ಬಲ್ಲವನಾಗುತ್ತಾನೆ. ಅವನು ಮತ್ತೆ ಮಾಡಬೇಕಾದ್ದೇನೂ ಉಳಿಯುವುದಿಲ್ಲ.
ಇದು ಅಧ್ಯಾತ್ಮ ಜಿಜ್ಞಾಸುಗಳಿಗೆ ಹೇಳಬೇಕಾದ ರಹಸ್ಯಗಳಲ್ಲೇ ಸರ್ವಶ್ರೇಷ್ಠ ರಹಸ್ಯ. ಅಧ್ಯಾತ್ಮವನ್ನು ಆಸಕ್ತಿ ಉಳ್ಳವರಿಗೆ ಅವರ ಆಸಕ್ತಿಯ ಆಳವನ್ನು ತಿಳಿದು ಹೇಳಬೇಕು. ಶಾಸ್ತ್ರದ ಪ್ರಮೇಯವನ್ನು ಎಂದೂ ಬೀದಿಯಲ್ಲಿ ತೆರೆದಿಡಬಾರದು. ಏಕೆಂದರೆ ಅದು ವ್ಯರ್ಥವಾಗಬಾರದು ಮತ್ತು ಅನರ್ಥವಾಗಲೂಬಾರದು. ಯಾರಿಗೆ ಗ್ರಹಣ ಮಾಡುವ ಯೋಗ್ಯತೆ ಇದೆ, ಆಸಕ್ತಿ, ಶ್ರದ್ಧೆ, ಭಕ್ತಿ ಇದೆ, ಅವರಿಗೆ ಮಾತ್ರ ಹೇಳಬೇಕು. ಇದು ರಹಸ್ಯಗಳಲ್ಲೇ ಅತ್ಯಂತ ಗೋಪ್ಯವಾದುದು. ಕ್ಷರಪುರುಷರ ಜ್ಞಾನ, ಅಕ್ಷರಪುರುಷಳ ಜ್ಞಾನ ಮತ್ತು ಪುರುಷೋತ್ತಮನ ಜ್ಞಾನವನ್ನು ತಿಳಿದವನು ಶಾಸ್ತ್ರವನ್ನು ಬಲ್ಲವನು. ಶಾಸ್ತ್ರ ಎಂದರೆ ತಿಳಿದವರು ತಿಳಿಯದವರಿಗೆ ತಿಳಿಹೇಳಬೇಕಾದ ವಸ್ತು. “ಬಹಳ ರಹಸ್ಯವಾಗಿ, ಜೋಪಾನವಾಗಿ ಕಾಪಾಡಬೇಕಾದ ಉಪದೇಶಾರ್ಹ ವಿಷಯವಿದು. ಇದಕ್ಕಿಂತ ಶ್ರೇಷ್ಠವಾದ ಉಪದೇಶ ಇನ್ನೊಂದಿಲ್ಲ. ಅಂತಹ ಗೋಪ್ಯವಾದ ವಿಷಯವನ್ನು ನಿನಗೆ ಹೇಳಿದೆ-ಏಕೆಂದರೆ ನೀನು ‘ಅನಘ’ ಅದಕ್ಕಾಗಿ’” ಎನ್ನುತ್ತಾನೆ ಕೃಷ್ಣ. ‘ಅನಘ’ ಎಂದರೆ ಯಾವ ದೋಷವೂ ಇಲ್ಲದವ. ನಾವು ಜ್ಞಾನಕ್ಕೆ ಭಾದಕವಾಗಿರುವ ದುರಿತಗಳಿಂದ, ದೋಷಗಳಿಂದ ಮೊದಲು ಮುಕ್ತರಾಗಬೇಕು. ನಮ್ಮ ಮನಸ್ಸು ಕೆಟ್ಟ ವಿಚಾರದಿಂದ ಕಲುಷಿತವಾದರೆ ಆಗ ನಮಗೆ ಗೀತೆ ಅರ್ಥವಾಗುವುದಿಲ್ಲ. ಯಾವುದೇ ಪೂರ್ವಾಗ್ರಹ ಆವೇಶಗಳಿಲ್ಲದೆ ಪೂರ್ಣ ಭಗವಂತನಲ್ಲಿ ಶರಣಾದಾಗ ಮನಸ್ಸು ಪಾಪ ರಹಿತವಾಗಬಲ್ಲದು.
ಕೃಷ್ಣ ಹೇಳುತ್ತಾನೆ: “ಇದು ಎಲ್ಲ ತಿಳುವಳಿಕೆಗಳ ಬೇರು. ಇದನ್ನು ತಿಳಿದವನು ಕೃತಕೃತ್ಯ” ಎಂದು. ಜೀವನದಲ್ಲಿ ಭಗವಂತನನ್ನು ತಿಳಿದವನು ಸಾರ್ಥಕವಾದ ಬದುಕನ್ನು ಬದುಕಬಲ್ಲ. ಭಗವಂತನ ಅರಿನೊಂದಿಗೆ ಬದುಕುವುದೇ ಜೀವನದ ಸಾರ್ಥಕ್ಯ.
