ಕೆ.ಆರ್.ಪೇಟೆ: ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಉದ್ದಿನಮಲ್ಲನ ಹೊಸೂರು (ತುಳಸಿ ಗೇಟ್) ಬಳಿ ಗಂಗೆನಹಳ್ಳಿ ಗ್ರಾಮದ ವಿಶ್ವನಾಥ್ ಅವರ ಮಾಲೀಕತ್ವದ ನೂತನ ವಿಶ್ವ ವಿಕಾಸ್ ಸ್ಕೂಲ್ ಅನ್ನು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ರವರು ಉದ್ಘಾಟಿಸುವ ಮೂಲಕ ನೂತನ ಶಾಲೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರು, ಇಂದು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕಾಗಿದೆ. ಒಬ್ಬ ವ್ಯಕ್ತಿ ವಿದ್ಯಾವಂತನಾದರೆ ಒಂದು ಕುಟುಂಬ ಉದ್ಧಾರವಾಗುತ್ತದೆ. ಈ ನಿಟ್ಟಿನಲ್ಲಿ ಗಂಗೆನಹಳ್ಳಿ ವಿಶ್ವನಾಥ್ ಅವರು ಗ್ರಾಮೀಣ ಭಾಗದಲ್ಲಿ ಇಂತಹ ಸುಸಜ್ಜಿತ ಶಾಲೆಯನ್ನು ಆರಂಭಿಸಿರುವುದು ಅಭಿನಂದನೀಯ ಕಾರ್ಯ.ನೂತನ ಶಾಲೆಯು ಉತ್ತಮ ಸಮಾಜ ನಿರ್ಮಾಣಕ್ಕೆ ಹಾಗೂ ಗ್ರಾಮೀಣ ಬಡ ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಿ, ಮುಂದಿನ ದಿನಗಳಲ್ಲಿ ಒಂದು ದೊಡ್ಡ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಲಿ ಎಂದ ಅವರು ಹಿಂದೆ ಹಳ್ಳಿಯ ಮಕ್ಕಳು ಉತ್ತಮ ಶಿಕ್ಷಣಕ್ಕಾಗಿ ಮಂಡ್ಯ, ಮೈಸೂರಿಗೆ ಹೋಗಬೇಕಿತ್ತು. ಬಡ ರೈತರಿಗೆ ಅದು ಹೊರೆಯಾಗುತ್ತಿತ್ತು. ಆದರೆ ಇಂದು ಇದೇ ಊರಿನಲ್ಲಿ ಕಡಿಮೆ ಶುಲ್ಕದಲ್ಲಿ ಇಂಗ್ಲಿಷ್ ಮಾಧ್ಯಮ, ಕಂಪ್ಯೂಟರ್ ಶಿಕ್ಷಣ, ಸಂಸ್ಕಾರಯುತ ಶಿಕ್ಷಣ ಸಿಗುತ್ತಿರುವುದು ಈ ಭಾಗದ ಜನರಿಗೆ ವರದಾನವಾಗಿದೆ. ಈ ಶಾಲೆಯಲ್ಲಿ ಕಲಿತ ಮಕ್ಕಳು ಮುಂದೆ ದೊಡ್ಡ ಹುದ್ದೆಗಳಿಗೆ ಹೋಗಿ ನಮ್ಮ ಊರಿನ ಹೆಸರು ಬೆಳಗಿಸಬೇಕು. ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ಗೀಳಿನಿಂದ ದೂರವಿಟ್ಟು ಶಿಕ್ಷಣದ ಕಡೆ ಗಮನ ಹರಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡ ಎಲ್ ಪಿ ನಂಜಪ್ಪ,ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರುಕ್ಮಂಗದ, ಐಕನಹಳ್ಳಿ ಗ್ರಾ. ಪಂ ಮಾಜಿ ಅಧ್ಯಕ್ಷ ಉದಯ್ ಕುಮಾರ್,ವಿಶ್ವ ವಿಕಾಸ್ ಸ್ಕೂಲ್ ವ್ಯವಸ್ಥಪಾಕ ವಿಶ್ವನಾಥ್,ಗ್ರಾ. ಪಂ ಮಾಜಿ ಅಧ್ಯಕ್ಷ ರಾಘು (ಗುಂಡ),ಗ್ರಾ.ಪಂ.ಮಾಜಿ ಅಧ್ಯಕ್ಷ ಅಶೋಕ್,ಮುಖಂಡ ಮನು, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
