ಶ್ಲೋಕ – 11
ಚಿಂತಾಮಪರಿಮೇಯಾಂ ಚ ಪ್ರಳಯಾಂತಾಮುಪಾಶ್ರಿತಾಃ ।
ಕಾಮೋಪಭೋಗಪರಮಾ ಏತಾವದಿತಿ ನಿಶ್ಚಿತಾಃ ॥೧೧॥
ಚಿಂತಾಮ್ ಅಪರಿಮೇಯಾಂ ಚ ಪ್ರಳಯಾಂತಾಮ್ ಉಪಾಶ್ರಿತಾಃ ।
ಕಾಮ ಉಪಭೋಗ ಪರಮಾಃ ಏತಾವತ್ ಇತಿ ನಿಶ್ಚಿತಾಃ — ಸಾವಿನ ಜೊತೆಗೆಯೆ ಅಳಿಯುವ, ಅಳೆಯಲಾಗದ ಚಿಂತೆಗೊಳಗಾದವರು. ಕಾಮದ ತೀಟೆಯೇ ಜೀವನದ ಸರ್ವಸ್ವವಾದವರು. ಜೀವನವೆಂದರೆ ಇಷ್ಟೇ ಎಂದು ನಂಬಿದವರು.
ಇವರ ಕೊರಗಿಗೆ ಕೊನೆಯೇ ಇಲ್ಲ. ಇವರು ತಮ್ಮ ಇಡೀ ಜೀವನವನ್ನು-ಇಲ್ಲದ್ದನ್ನು ಪಡೆಯುವ ಕೊರಗಿನಲ್ಲಿ ಕಳೆಯುತ್ತಾರೆ. ಇವರು ಚಿಂತೆಯ ದಾಸರಾಗುತ್ತಾರೆ. ಇವರ ಚಿಂತೆ ಪ್ರಳಯಾಂತ- ಸಾಯುವ ತನಕವೂ ಅವರ ಬೆನ್ನುಬಿಡದೆ ಕಾಡುತ್ತಿರುತ್ತದೆ. ಇವರು ಭೋಗಜೀವನದ ದಾಸರಾಗಿ, ಅದನ್ನು ಬಿಟ್ಟು ಇರಲಾರದ ಪರಾಧೀನತೆಯಲ್ಲಿ, ಜೀವನವೆಂದರೆ ಇಷ್ಟೇ ಎಂದು ತಿಳಿದು ಬದುಕುತ್ತಿರುತ್ತಾರೆ.
