ಶ್ಲೋಕ – 32
ಅಧರ್ಮಂ ಧರ್ಮಮಿತಿ ಯಾ ಮನ್ಯತೇ ತಮಸಾSSವೃತಾ ।
ಸರ್ವಾರ್ಥಾನ್ ವಿಪರೀತಾಂಶ್ಚ ಬುದ್ಧಿಃ ಸಾ ಪಾರ್ಥ ತಾಮಸೀ ॥೩೨॥
ಅಧರ್ಮಮ್ ಧರ್ಮಮ್ ಇತಿ ಯಾ ಮನ್ಯತೇ ತಮಸಾ ಆವೃತಾ ।
ಸರ್ವ ಅರ್ಥಾನ್ ವಿಪರೀತಾನ್ ಚ ಬುದ್ಧಿಃ ಸಾ ಪಾರ್ಥ ತಾಮಸೀ –ಪಾರ್ಥ, ಅಧರ್ಮವನ್ನೆ ಧರ್ಮವೆಂದು ಗ್ರಹಿಸುವ, ಹೀಗೆ ಎಲ್ಲ ಸಂಗತಿಯನ್ನು ವಿಪರೀತವಾಗಿಯೆ ಗ್ರಹಿಸುವ, ಕತ್ತಲು ಕವಿದ ಬುದ್ಧಿ ತಾಮಸ ಬುದ್ಧಿ.
ಇರುವ ವಿಷಯವನ್ನು ಯಥಾವತ್ತಾಗಿ ಗ್ರಹಿಸದೆ, ವ್ಯತಿರಿಕ್ತವಾಗಿಯೇ ಗ್ರಹಿಸುವ ಬುದ್ಧಿ ತಾಮಸ. ಇವರು ದುಃಖವನ್ನು ದುಃಖವೆಂದು ಗ್ರಹಿಸದೆ ಸುಖವೆಂದು ಗ್ರಹಿಸುತ್ತಾರೆ. ಉದಾಹರಣೆಗೆ ಮದ್ಯಪಾನ ಮಾಡುವುದು ಆನಂದ ಎಂದು ಭ್ರಮಿಸಿ ಮದ್ಯಪಾನ ವ್ಯಸನಿಗಳಾಗುವುದು. ಜ್ಞಾನವನ್ನೇ ಅಜ್ಞಾನವೆಂದು ತಿಳಿದು, ತಮ್ಮ ವಿಪರೀತ ಜ್ಞಾನವನ್ನೇ ಸರ್ವಸ್ವವಾಗಿರಿಸಿಕೊಂಡು, ಇನ್ನೊಬ್ಬರ ಮಾತಿಗೆ ಕಿವಿಗೊಡದಂತೆ ಮಾಡುವ ಬುದ್ಧಿ ತಾಮಸ ಬುದ್ಧಿ.
ಯಾರಿಗೆ ಒಳ್ಳೆಯ ಬುದ್ಧಿ ಇದೆ ಅವರಿಗೆ ಧೃತಿ ಇರುತ್ತದೆ. ಅಜ್ಞಾನದಿಂದ-ಭಯ, ಅರಿವಿನಿಂದ-ಅಭಯ. ವೇದಾಂತವಿರುವುದೇ ಅಭಯಕ್ಕಾಗಿ, ಮನಸ್ಸಿಗೆ ಧೈರ್ಯ ತುಂಬಿ ಮನುಷ್ಯನನ್ನು ನಿರ್ಭಯನನ್ನಾಗಿ ಮಾಡುವುದಕ್ಕೋಸ್ಕರ.
‘ಧೃತಿ’ ಎನ್ನುವುದರ ಮೇಲ್ನೋಟದ ಅರ್ಥ -ಧೈರ್ಯ, ಆತ್ಮವಿಶ್ವಾಸ(Confidence), ಎದೆಗಾರಿಗೆ(courage) ಇತ್ಯಾದಿ. ಇದರ ಪೂರ್ಣ ಪ್ರಮಾಣದ ಅರ್ಥ ಇನ್ನೂ ವಿಶಾಲ. ಅಷ್ಟಾಂಗಜಪದಲ್ಲಿ(ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ ಮತ್ತು ಸಮಾಧಿ) ಹೇಳುವ ‘ಧಾರಣ’-ಧೃತಿ. ಒಂದು ವಿಷಯವನ್ನು ಗ್ರಹಿಸಿ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಧೃತಿ. ಇಂಥಹ ಧೃತಿಯಲ್ಲೂ ಮೂರು ವಿಧ-ಸಾತ್ವಿಕ, ರಾಜಸ ಮತ್ತು ತಾಮಸ. ಇದರ ಸುಂದರ ವಿವರಣೆಯನ್ನು ಮುಂದಿನ ಮೂರು ಶ್ಲೋಕಗಳಲ್ಲಿ ಕಾಣಬಹುದು.
