ಬೆಂಗಳೂರು: ಬರಹಗಾರರು ಎಂದಾಕ್ಷಣ ಸಮಾಜದಲ್ಲಿ ಗೌರವದ ಭಾವನೆ ಮೂಡುತ್ತದೆ. ಕನ್ನಡ ಬರಹಗಾರರು ಅಧ್ಯಯನಶೀಲರು, ಸೃಜನಶೀಲರು ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಗಳಾಗಿರುತ್ತಾರೆ ಎಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ. ಸೋಮಶೇಖರ್ ತಿಳಿಸಿದರು.

ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ), ಹೂವಿನ ಹಡಗಲಿ ಹಾಗೂ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ನವೆಂಬರ್ 15ರ ಭಾನುವಾರ ಬೆಂಗಳೂರಿನ ಯಶವಂತಪುರದ ಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ‘ಕರ್ನಾಟಕ ವೈಭವ-2026’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಲೇಖಕನೂ ತನ್ನ ವಿಶಿಷ್ಟ ಬರಹದ ಮೂಲಕ ತನ್ನದೇ ಆದ ಪ್ರಭಾವ ವಲಯವನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿರುತ್ತಾನೆ. ಲೇಖನಿ ಕತ್ತಿಗಿಂತ ಹರಿತ ಎಂಬ ಮಾತು ಇದಕ್ಕೆ ಸಾಕ್ಷಿ. ಬರಹಗಾರರು ಸಮಾಜದಲ್ಲಿ ನೀತಿ ಮತ್ತು ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ ಕನ್ನಡ ನಾಡು-ನುಡಿಯ ವೈಭವವನ್ನು ಎತ್ತಿಹಿಡಿಯುವ ಮಹತ್ವದ ಜವಾಬ್ದಾರಿ ಹೊಂದಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಅಂತರ್ಜಾಲದ ಮೂಲಕ ಆರಂಭವಾದ ಕರ್ನಾಟಕ ರಾಜ್ಯ ಬರಹಗಾರರ ಸಂಘ ಇಂದು ಇಡೀ ಕನ್ನಡ ನಾಡಿನಾದ್ಯಂತ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಂಡು ಜೀವಂತ ಸಾಹಿತ್ಯ ವೇದಿಕೆಯಾಗಿ ಬೆಳೆದಿದೆ. ಸಾಹಿತ್ಯದ ವಿವಿಧ ಪ್ರಕಾರಗಳ ಜೊತೆಗೆ ಎಲ್ಲ ಕಲಾಪ್ರಕಾರಗಳ ಕಲಾವಿದರನ್ನು, ಸಾಮಾನ್ಯ ಬರಹಗಾರರಿಂದ ಹಿಡಿದು ಹಿರಿಯ ಸಾಹಿತಿಗಳವರೆಗೆ ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಆರ್. ವಿಜಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಡವ-ಬಲ್ಲಿದ, ಜಾತಿ-ಧರ್ಮ ಹಾಗೂ ಪ್ರಾದೇಶಿಕ ಭೇದಭಾವಗಳನ್ನು ಮೀರಿ
ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ನಡೆಸುವುದು ಸಂಘದ ಮುಖ್ಯ ಉದ್ದೇಶವಾಗಿದೆ. ಸಂಘದ ವಿವಿಧ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಆನಂದಕುಮಾರ್ ಯಾದವ್, ವಿಜಯಲಕ್ಷ್ಮೀ ಮೈಸೂರು, ರಾಜಣ್ಣ ರಾಶಿ, ಜಮುನ ಗೊರೂರು ಹಾಗೂ ಮಧುನಾಯ್ಕ ಲಂಬಾಣಿ ಅವರ ಸಾಹಿತ್ಯ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಲೇಖಕ ಚಂದ್ರಶೇಖರ್ ಹಡಪದ, ಒತ್ತಡದ ಬದುಕಿನಲ್ಲಿ ಬರಹ ಎನ್ನುವುದು ಒಂದು ಧ್ಯಾನದಂತೆ. ಒಳ್ಳೆಯ ಪುಸ್ತಕದ ಓದು ಶ್ರೇಷ್ಠ ವ್ಯಕ್ತಿತ್ವದೊಂದಿಗಿನ ಸಂಭಾಷಣೆಯಿದ್ದಂತೆ. ಪ್ರತಿಯೊಂದು ಪುಸ್ತಕದ ರಚನೆಯ ಹಿಂದೆ ಲೇಖಕನ ತಪಸ್ಸು, ಆಲೋಚನೆ, ಶ್ರಮ ಮತ್ತು ಶ್ರದ್ಧೆ ಅಡಗಿರುತ್ತದೆ ಎಂದರು. ಕೃತಿಕಾರರಿಗೆ ಶುಭ ಹಾರೈಸಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇನ್ನಷ್ಟು ಉತ್ತಮ ಕೃತಿಗಳು ಕೊಡುಗೆಯಾಗಿ ಬರಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಮಧುನಾಯ್ಕ ಲಂಬಾಣಿ ಮಾತನಾಡಿ, ಬೆಂಗಳೂರಿನಂತಹ ಮಹಾನಗರದಲ್ಲಿ ಕರ್ನಾಟಕ ನುಡಿವೈಭವ ಕಾರ್ಯಕ್ರಮ ಆಯೋಜಿಸುವುದು ಸವಾಲಿನ ಕೆಲಸ. ಆದರೂ ಸಂಘವು ಪ್ರತಿವರ್ಷ ವಿವಿಧ ಸ್ಥಳಗಳಲ್ಲಿ ವಿನೂತನ ರೀತಿಯಲ್ಲಿ ಕನ್ನಡ ನುಡಿ ಸೇವೆ ಸಲ್ಲಿಸುತ್ತಿದೆ. ‘ಕರುನಾಡ ಕೋಗಿಲೆ’, ‘ಕರ್ನಾಟಕ ಕಲಾರತ್ನ’, ‘ಕುಂಚ ಕೇಸರಿ’, ‘ನೃತ್ಯಶ್ರೀ’, ‘ಅನ್ನದಾತ’, ‘ರಂಗ ಕಲಾರತ್ನ’ ಸೇರಿದಂತೆ ವಿವಿಧ ಗೌರವಗಳ ಮೂಲಕ ಕನ್ನಡ ಸಾಂಸ್ಕೃತಿಕ ಲೋಕದ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ ಎಂದರು.
ಎಸ್.ಆರ್.ಎಸ್. ವಿದ್ಯಾಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಎಸ್. ಉರ್ಮಿಳಾ ರಂಗನಾಥ್ ಮಾತನಾಡಿ, ತಮ್ಮ ಕಾಲೇಜಿನಲ್ಲಿ ಕನ್ನಡ ನಾಡು-ನುಡಿಯ ವೈಭವ ಸಾರುವ ಇಂತಹ ಉತ್ತಮ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷದ ಸಂಗತಿ ಎಂದರು.

ಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್. ಮಂಜುನಾಥ್, ಬೆಂಗಳೂರು ಜಿಲ್ಲಾಧ್ಯಕ್ಷ ಆನಂದಕುಮಾರ್ ಯಾದವ್, ತುಮಕೂರು ಜಿಲ್ಲಾಧ್ಯಕ್ಷ ಹನುಮಂತೋಜಿರಾವ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷೆ ಭಾಗ್ಯ ನಾಗರಾಜ್ ಉಪಸ್ಥಿತರಿದ್ದರು.
ಸಂಘದ ಸಹ ಕಾರ್ಯದರ್ಶಿ ಪ್ರಶಾಂತ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಕೃಷ್ಣ ಸಂಧಾನ ನಾಟಕ ಹಾಗೂ ಸುಗಮ ಸಂಗೀತ ಕಾರ್ಯಕ್ರಮಗಳು ಜರುಗಿದವು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
