ರಾಮನಾಥಪುರದ ಶ್ರೀ ಸುಬ್ರಹ್ಮಣ್ಯಸ್ವಾಮಿ ಜಾತ್ರೆಯ ಸಂದರ್ಭದಲ್ಲಿ ನಡೆಯುತ್ತಿದ್ದ ದನಗಳ ಜಾತ್ರೆಯಲ್ಲಿ ವಿವಿಧೆಡೆಯಿಂದ ರೈತರು ರಾಸುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಉತ್ತಮ ಎತ್ತುಗಳು ಹಾಗೂ ರಾಸುಗಳು ₹1 ಲಕ್ಷದಿಂದ ₹2 ಲಕ್ಷದವರೆಗೆ ಮಾರಾಟವಾಗುತ್ತಿದ್ದವು. ಕರುಗಳು, ಹಸುಗಳು ಮತ್ತು ಎತ್ತುಗಳ ಖರೀದಿ–ಮಾರಾಟದಿಂದ ಜಾತ್ರೆಗೆ ವಿಶೇಷ ಮೆರುಗು ಬರುತ್ತಿತ್ತು.
ಜಾತ್ರೆ ನಡೆಯುತ್ತಿದ್ದ ಜಾಗದಲ್ಲಿ ಮನೆ, ತೆಂಗಿನ ತೋಟ
ಹಿಂದೆ ರಾಸುಗಳನ್ನು ಕಟ್ಟುತ್ತಿದ್ದ ಜಾಗದಲ್ಲಿ ಇದೀಗ ವಾಸದ ಮನೆಗಳು, ತೆಂಗಿನ ಮರಗಳು ಹಾಗೂ ಹೊಗೆಸೊಪ್ಪಿನ ಬ್ಯಾರನ್ಗಳು ನಿರ್ಮಾಣವಾಗಿವೆ. ಇದರಿಂದ ಜಾನುವಾರುಗಳನ್ನು ಕಟ್ಟಲು ಸೂಕ್ತ ಸ್ಥಳಾವಕಾಶದ ಕೊರತೆ ಉಂಟಾಗಿದೆ. ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ರಾಸುಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದು, ಅಂತಿಮವಾಗಿ ದನಗಳ ಜಾತ್ರೆಯೇ ಸ್ಥಗಿತಗೊಂಡಿದೆ.
ಹಂತ ಹಂತವಾಗಿ ಕಳೆದುಕೊಂಡ ವೈಭವ
ದನಗಳ ಜಾತ್ರೆಗೆ ಮೆರುಗು ತಂದುಕೊಡುತ್ತಿದ್ದ ಕಾಲುವೆ ಅಮ್ಮ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶ ಹಾಗೂ ಶಿರದನಹಳ್ಳಿ ಗ್ರಾಮದ ರೈತರ ಜಮೀನುಗಳ ಅಕ್ಕಪಕ್ಕದ ಪ್ರದೇಶಗಳನ್ನು ವಿವಿಧ ಬಳಕೆಗಳಿಗೆ ಬಳಸಿಕೊಳ್ಳಲಾಗಿದೆ. ಇದರಿಂದ ಜಾತ್ರೆಗೆ ಅಗತ್ಯವಾದ ಸ್ಥಳಾವಕಾಶ ಮತ್ತಷ್ಟು ಕುಂಠಿತವಾಗಿದೆ.
ದನಗಳ ಜಾತ್ರೆ ರಾಮನಾಥಪುರದ ಸಂಸ್ಕೃತಿಯ ಒಂದು ಭಾಗವಾಗಿತ್ತು. ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಈ ಕುರಿತು ಗಮನಹರಿಸಿ ಸೂಕ್ತ ಜಾಗ ಕಲ್ಪಿಸಿದರೆ ಜಾತ್ರೆಯನ್ನು ಮತ್ತೆ ಪುನರಾರಂಭಿಸಲು ಸಾಧ್ಯವಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ಜಾತ್ರೆಯ ಸಡಗರವೂ ಕ್ಷೀಣ
ರಾಮನಾಥಪುರದಲ್ಲಿ ಎರಡು ತಿಂಗಳ ಕಾಲ ನಡೆಯುತ್ತಿದ್ದ ಶ್ರೀ ಸುಬ್ರಹ್ಮಣ್ಯಸ್ವಾಮಿ ಜಾತ್ರೆ ಹಾಗೂ ರಥೋತ್ಸವದ ಸಂದರ್ಭಗಳಲ್ಲಿ ಜಾತ್ರಾ ಮೈದಾನದಲ್ಲಿ ಸರ್ಕಸ್, ವಸ್ತು ಪ್ರದರ್ಶನ, ನಾಟಕ ಕಂಪನಿಗಳು, ಚಿಲ್ಲರೆ ಅಂಗಡಿಗಳು, ಪುರಿ–ಸಿಹಿತಿಂಡಿ, ಖರ್ಜೂರ ಸೇರಿದಂತೆ ವಿವಿಧ ಅಂಗಡಿಗಳು ಬೀಡುಬಿಡುತ್ತಿದ್ದವು. ಇದರಿಂದ ಜಾತ್ರೆಗೆ ವಿಶೇಷ ಕಳೆ ಬರುತ್ತಿತ್ತು.
ಆದರೆ ಇತ್ತೀಚಿನ ವರ್ಷಗಳಲ್ಲಿ ಜಾತ್ರೆಯ ಸಡಗರವೂ ಕ್ರಮೇಣ ಕಡಿಮೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಸ್. ಶಂಕರ್ ದೂರಿದ್ದಾರೆ.
ರಾಸುಗಳಿಗೆ ಬಹುಮಾನ ನೀಡಿ ಜಾತ್ರೆಗೆ ಪುನಶ್ಚೇತನ: ಮೋಹನ್ ಮಲ್ಲಪ್ಪ
ರಾಮನಾಥಪುರದಲ್ಲಿ ಏಳು ವರ್ಷಗಳಿಂದ ಸ್ಥಗಿತಗೊಂಡಿರುವ ದನಗಳ ಜಾತ್ರೆಯನ್ನು ಮತ್ತೆ ಆರಂಭಿಸಬೇಕು. ಉತ್ತಮ ರಾಸುಗಳಿಗೆ ಬೆಲೆಬಾಳುವ ಬಹುಮಾನಗಳನ್ನು ಘೋಷಿಸುವ ಮೂಲಕ ರೈತರನ್ನು ಆಕರ್ಷಿಸಿದರೆ ಜಾತ್ರೆಗೆ ಮತ್ತೆ ಜೀವ ತುಂಬಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಸೇವಕ ಡಾ. ಮೋಹನ್ ಮಲ್ಲಪ್ಪ, ಕಡುವಿನಹೊಸಹಳ್ಳಿ, ಒತ್ತಾಯಿಸಿದ್ದಾರೆ.

ಒಂದು ತಿಂಗಳಲ್ಲಿ ಎರಡು ಮಹಾ ರಥೋತ್ಸವ
ಕಾವೇರಿ ನದಿ ದಂಡೆಯಲ್ಲಿರುವ ರಾಮನಾಥಪುರವು ಪುರಾಣ ಪ್ರಸಿದ್ಧ ಕ್ಷೇತ್ರವಾಗಿದ್ದು, ಶ್ರೀ ಸುಬ್ರಹ್ಮಣ್ಯಸ್ವಾಮಿ ಹಾಗೂ ಶ್ರೀ ರಾಮೇಶ್ವರಸ್ವಾಮಿ ದೇವಾಲಯಗಳ ಜತೆಗೆ ಪುಣ್ಯತೀರ್ಥಗಳಾದ ವೈಷ್ಣವ ಪುಷ್ಕರಣಿ, ಗಾಯತ್ರಿ ಶಿಲೆ, ಗೋಗರ್ಭ ಹಾಗೂ ಕುಮಾರಧಾರ ತೀರ್ಥಗಳಿಂದ ಪ್ರಸಿದ್ಧವಾಗಿದೆ.
ಇಲ್ಲಿ ಪ್ರತಿ ವರ್ಷ ಎರಡು ಪ್ರಮುಖ ರಥೋತ್ಸವಗಳು ನಡೆಯುತ್ತವೆ. ಮೊದಲ ಮಹಾ ರಥೋತ್ಸವ ಡಿಸೆಂಬರ್ 15ರಂದು ಹಾಗೂ ಎರಡನೇ ಮಹಾ ರಥೋತ್ಸವ ಜನವರಿ 14ರಂದು ನಡೆಯಲಿದೆ ಎಂದು ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ವ್ಯವಸ್ಥಾಪಕ ಶ್ರೀ ಸೋಮಶೇಖರ್ ತಿಳಿಸಿದ್ದಾರೆ.

ಜನಾಭಿಪ್ರಾಯ ಪಡೆದು ಜಾತ್ರೆ ಪುನರಾರಂಭ: ಪಿಡಿಒ
ರಾಮನಾಥಪುರ ಶ್ರೀ ಸುಬ್ರಹ್ಮಣ್ಯಸ್ವಾಮಿ ರಥೋತ್ಸವದ ಅಂಗವಾಗಿ ವಿಜೃಂಭಣೆಯಿಂದ ನಡೆಯುತ್ತಿದ್ದ ದನಗಳ ಜಾತ್ರೆ ಸ್ಥಳಾವಕಾಶದ ಕೊರತೆಯಿಂದಾಗಿ ಕೆಲವು ವರ್ಷಗಳಿಂದ ಸ್ಥಗಿತಗೊಂಡಿದೆ. ದನಗಳ ಜಾತ್ರೆಯನ್ನು ಪುನರಾರಂಭಿಸಬೇಕು ಎಂಬುದು ಜನಾಭಿಪ್ರಾಯವಾಗಿದ್ದು, ಈ ಕುರಿತು ಒತ್ತಡವೂ ಇದೆ. ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಚರ್ಚಿಸಿ, ಅವರ ಅಭಿಪ್ರಾಯ ಪಡೆದು ಜಾತ್ರೆಯನ್ನು ಪುನರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಮನಾಥಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
