ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ ಐತಿಹಾಸಿಕ ಕಲ್ಯಾಣಿ, ಬೆಟ್ಟದ ತಪ್ಪಲು ಹಾಗೂ ನೀರಿನ ಒರತೆ ಸ್ವಚ್ಛಗೊಳಿಸಿದ ತ್ರಿಗೋಷ್ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಮೂರ್ತಿ ಯಂಜಲಗೆರೆ ಯುವಕರ ತಂಡ
ಧಾರ್ಮಿಕ, ಐತಿಹಾಸಿಕ ಹಾಗೂ ಪ್ರಕೃತಿ ಸೌಂದರ್ಯದಿಂದ ತನ್ನದೇ ಆದ ವಿಶೇಷತೆ ಹೊಂದಿರುವ ಸಿದ್ದರಬೆಟ್ಟದಲ್ಲಿ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಸ್ವಚ್ಛತಾ ಅಭಿಯಾನ ನಡೆಯಿತು. ಸಿದ್ದರಬೆಟ್ಟವನ್ನು ಸಂಜೀವಿನಿ ಕ್ಷೇತ್ರವೆಂದು ಭಕ್ತರು ನಂಬಿದ್ದು, ಇಲ್ಲಿನ ಬೆಟ್ಟ, ಗುಹೆಗಳು, ಕಲ್ಯಾಣಿ ಹಾಗೂ ವರ್ಷ ಪೂರ್ತಿ ನೀರು ಹರಿಯುವ ಬೆಟ್ಟದ ಮೇಲಿನ ನೈಸರ್ಗಿಕ ನೀರಿನ ಒರತೆಗಳು ಈ ಪ್ರದೇಶದ ಪ್ರಮುಖ ಆಕರ್ಷಣೆಗಳಾಗಿವೆ.
ಪ್ರವಾಸಿಗರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸಿದ್ದರಬೆಟ್ಟದ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇದೇ ಉದ್ದೇಶದಿಂದ ಮೂರ್ತಿ ಯಂಜಲಗೆರೆ ಅಭಿಮಾನಿ ಬಳಗದ ವತಿಯಿಂದ ವಿಶೇಷ ಸ್ವಚ್ಛತಾ ಅಭಿಯಾನ ಆಯೋಜಿಸಲಾಗಿತ್ತು. ಅಭಿಯಾನದ ಸಂದರ್ಭದಲ್ಲಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕಲ್ಯಾಣಿ, ಮೇಲಿನ ಬೆಟ್ಟದ ತಪ್ಪಲು ಹಾಗೂ ನೀರಿನ ಒರತೆ ಸೇರಿದಂತೆ ಹಲವು ಸ್ಥಳಗಳನ್ನು ಸ್ವಚ್ಛಗೊಳಿಸಲಾಯಿತು.
ಸ್ವಚ್ಛತಾ ಕಾರ್ಯದ ಜೊತೆಗೆ ಸಿದ್ದರಬೆಟ್ಟದ ಪ್ರಕೃತಿ ಸಂಪತ್ತು ಹಾಗೂ ಐತಿಹಾಸಿಕ ಸ್ಥಳಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಪ್ರವಾಸಿಗರು ಹಾಗೂ ಭಕ್ತರು ತಾವು ತರುವ ಪ್ಲಾಸ್ಟಿಕ್, ಬಾಟಲಿ ಹಾಗೂ ಇತರ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ, ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡುವಂತೆ ಮನವಿ ಮಾಡಲಾಯಿತು.

ಜನಪದ ಗೀತೆಯೊಂದಿಗೆ ಉತ್ಸಾಹ:
ಅಭಿಯಾನದಲ್ಲಿ ಜಾನಪದ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬುಡಕಟ್ಟು ಹಾಡುಗಾರ ಮೋಹನ್ ಕುಮಾರ್ ಅವರು ಜನಪದ ಹಾಡುಗಳನ್ನು ಹಾಡುತ್ತಾ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದವರಿಗೆ ಹೆಜ್ಜೆ ಹೆಜ್ಜೆಗೂ ಉತ್ಸಾಹ ತುಂಬಿದರು. ಸ್ವಚ್ಛತಾ ಕಾರ್ಯದ ನಡುವೆ ಸೋಶಿಯಲ್ ಮೀಡಿಯಾ ಸ್ಟಾರ್ ಚಾರ್ಲಿ ವೆಂಕಿ ಅವರ ಹಾಸ್ಯಮಯ ಡೈಲಾಗ್ಗಳು ಭಾಗವಹಿಸಿದ್ದವರಲ್ಲಿ ನಗೆಯುಕ್ಕಿಸಿ, ಕಾರ್ಯಕ್ರಮಕ್ಕೆ ಮತ್ತಷ್ಟು ಉತ್ಸಾಹ ತುಂಬಿದವು.
ಹಲವು ಸಂಘಟನೆಗಳ ಸಹಕಾರ:
ಈ ಸ್ವಚ್ಛತಾ ಅಭಿಯಾನವನ್ನು ಮೂರ್ತಿ ಯಂಜಲಗೆರೆ ಅಭಿಮಾನಿ ಬಳಗ ಆಯೋಜಿಸಿದ್ದು, ತ್ರಿಗೋಷ್ ಚಾರಿಟೇಬಲ್ ಟ್ರಸ್ಟ್, ಮಾಸ್ಟರ್ ನ್ಯೂಸ್ ಕನ್ನಡ, ಕರ್ನಾಟಕ ಕಾಡುಗೊಲ್ಲ ಸಾಂಸ್ಕೃತಿಕ ಟ್ರಸ್ಟ್ ಹಾಗೂ sn ನೂತನ್ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಸ್ಥಳದಲ್ಲಿ ಹಾಜರುದ್ದು ಸಹಕಾರ ನೀಡಿದರು.
ಕಾರ್ಯಕ್ರಮದಲ್ಲಿ ಮೂರ್ತಿ ಯಂಜಲಗೆರೆ, ಮೋಹನ್ ಕುಮಾರ್, ವೀರು ಪಾಟೀಲ್, ಚೇತನ್ ಕುಮಾರ್, ಹರೀಶ್, ತ್ರಿಗೋಷ್ ಚಾರಿಟೇಬಲ್ ಟ್ರಸ್ಟ್ನ ಗಿರಿ ಗೌಡ್ರು ಹಾಗೂ ಪದಾಧಿಕಾರಿಗಳು, ಕಾಂತರಾಜು, ಚಿದಾನಂದ್, ಮಾಸ್ಟರ್ ಮಂಜು, ಶಶಿ, ಶಿವರಾಜು, ನವೀನ್ ಜಿಕೆ ಸೇರಿದಂತೆ ಹಲವರು ಭಾಗವಹಿಸಿ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.
ವರದಿ ನರಸಿಂಹಯೃ ಹೊಸಕೋಟೆ
