ಬೆಂಗಳೂರು, ಜೂನ್ 6: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ನಿರೀಕ್ಷಿಸಿದ್ದ ಸಿಇಟಿ-2026 (KCET) ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಇಂದು ಪ್ರಕಟಿಸಿದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಬಿಡುಗಡೆಗೊಂಡಿದ್ದು, ಮಧ್ಯಾಹ್ನ 2 ಗಂಟೆಯ ಬಳಿಕ ವಿದ್ಯಾರ್ಥಿಗಳಿಗೆ ಆನ್ಲೈನ್ನಲ್ಲಿ ಫಲಿತಾಂಶ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಬಾರಿ ಏಪ್ರಿಲ್ 22ರಿಂದ ಮೂರು ದಿನಗಳ ಕಾಲ ನಡೆದ ಸಿಇಟಿ ಪರೀಕ್ಷೆಯಲ್ಲಿ ರಾಜ್ಯದಾದ್ಯಂತ 3,09,014 ವಿದ್ಯಾರ್ಥಿಗಳು ಭಾಗವಹಿಸಿದ್ದರು. 745 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ 15,265 ಸಿಸಿಟಿವಿ ಕ್ಯಾಮೆರಾಗಳು, ವೆಬ್ಕಾಸ್ಟಿಂಗ್ ಹಾಗೂ ಫೇಸ್ ರೆಕಗ್ನಿಷನ್ ವ್ಯವಸ್ಥೆ ಅಳವಡಿಸಲಾಗಿತ್ತು.
ಇಂಜಿನಿಯರಿಂಗ್ ವಿಭಾಗದ ಟಾಪರ್ಸ್
ಇಂಜಿನಿಯರಿಂಗ್ ವಿಭಾಗದಲ್ಲಿ ಜಯನಗರದ ಆರ್ವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ತನಿಷಾ ಕಾರ್ತಿಕ್ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಬೆಳ್ತಂಗಡಿಯ ಸರ್ ಎಂ.ವಿ. ಪಿಯು ಕಾಲೇಜಿನ ಸೃಜನ್ ದ್ವಿತೀಯ ಸ್ಥಾನ ಪಡೆದಿದ್ದು, ಆರ್ವಿ ಪಿಯು ಕಾಲೇಜಿನ ನಿನಾದ್ ವಸಿಷ್ಠ ತೃತೀಯ ರ್ಯಾಂಕ್ ಪಡೆದಿದ್ದಾರೆ.
ಇಂಜಿನಿಯರಿಂಗ್ ವಿಭಾಗದ ಅಗ್ರಸ್ಥಾನಿಗಳು:
- 1ನೇ ರ್ಯಾಂಕ್ – ತನಿಷಾ ಕಾರ್ತಿಕ್
- 2ನೇ ರ್ಯಾಂಕ್ – ಸೃಜನ್
- 3ನೇ ರ್ಯಾಂಕ್ – ನಿನಾದ್ ವಸಿಷ್ಠ
ಇತರೆ ವಿಭಾಗಗಳ ಫಲಿತಾಂಶ
ವೆಟರ್ನರಿ, ಬಿಎಸ್ಸಿ ನರ್ಸಿಂಗ್, ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮಾ ಹಾಗೂ ಡಿ-ಫಾರ್ಮಾ ವಿಭಾಗಗಳಲ್ಲಿ ನಾಯನ ಗೋಪಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಮೂಲ್ಯ ದ್ವಿತೀಯ ಸ್ಥಾನ ಗಳಿಸಿದ್ದು, ವಿವಿಧ ವಿಭಾಗಗಳಲ್ಲಿ ರಿತ್ವಿಕ್ ಕುಮಾರ್ ಮತ್ತು ಸುಚಿತ್ರ ಮೂರನೇ ಸ್ಥಾನ ಪಡೆದಿದ್ದಾರೆ.
ಬಿಎಸ್ಸಿ ಅಗ್ರಿಕಲ್ಚರ್ ವಿಭಾಗದ ಟಾಪರ್ಸ್
- 1ನೇ ರ್ಯಾಂಕ್ – ನಿನಾದ್ ವಸಿಷ್ಠ
- 2ನೇ ರ್ಯಾಂಕ್ – ಅನ್ಮೋಲ್ ಪ್ರಭು
- 3ನೇ ರ್ಯಾಂಕ್ – ಸಮಯ್ಯ
2.92 ಲಕ್ಷ ವಿದ್ಯಾರ್ಥಿಗಳಿಗೆ ಅರ್ಹತೆ
ಫಲಿತಾಂಶ ಪ್ರಕಟಿಸಿದ ಬಳಿಕ ಮಾತನಾಡಿದ ಸಚಿವ ಶರಣ ಪ್ರಕಾಶ್ ಪಾಟೀಲ್, ಒಟ್ಟು 2,92,782 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ತಿಳಿಸಿದರು. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಲ್ಲಿ ತಲಾ ಒಂದು ಪ್ರಶ್ನೆಗೆ ಕೃಪಾಂಕ ನೀಡಲಾಗಿದೆ ಎಂದರು.
ವಿವಾದಗಳ ನಡುವೆಯೂ ಫಲಿತಾಂಶ ಪ್ರಕಟ
ಈ ಬಾರಿಯ ಸಿಇಟಿ ಪರೀಕ್ಷೆ ಕೆಲವು ವಿವಾದಗಳಿಗೂ ಕಾರಣವಾಗಿತ್ತು. ಕೆಲ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಯಿಸಿದ ಘಟನೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಕೆಲವು ವಿದ್ಯಾರ್ಥಿಗಳಿಗೆ ಮರುಪರೀಕ್ಷೆಯನ್ನೂ ನಡೆಸಲಾಗಿತ್ತು.
ಮೇ ತಿಂಗಳ ಕೊನೆಯ ವಾರದಲ್ಲೇ ಫಲಿತಾಂಶ ಪ್ರಕಟವಾಗಬೇಕಿದ್ದರೂ, ಆಡಳಿತಾತ್ಮಕ ಕಾರಣಗಳಿಂದ ವಿಳಂಬವಾಗಿತ್ತು. ಇದೀಗ ಫಲಿತಾಂಶ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಗಮನ ಕೌನ್ಸೆಲಿಂಗ್ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆಯತ್ತ ನೆಟ್ಟಿದೆ.
