ಚನ್ನರಾಯಪಟ್ಟಣ: ನಗರದ ಗಾಂಧಿವೃತ್ತದಲ್ಲಿರುವ ಶ್ರೀ ರಾಯರ ರಂಗಮಂದಿರದ ವತಿಯಿಂದ ಆಯೋಜಿಸಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಎರಡನೇ ದಿನವಾದ ಭಾನುವಾರ ಮಧ್ಯಾರಾಧನೆ ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಹಾಗೂ ವೈಭವದಿಂದ ನೆರವೇರಿತು.
ಬೆಳಗ್ಗಿನಿಂದಲೇ ಶ್ರೀ ರಾಯರ ರಂಗಮಂದಿರದಲ್ಲಿ ವಿಶೇಷ ಪೂಜೆ, ಅಭಿಷೇಕ, ಹೂವಿನ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾರಾಧನೆ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಧನ್ಯರಾದರು.
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಪರಾಜಿತ ಅಭ್ಯರ್ಥಿ ಸಿ.ಆರ್. ಚಿದಾನಂದ ಅವರು ಶ್ರೀ ರಾಯರ ರಂಗಮಂದಿರಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಆಶೀರ್ವಾದ ಪಡೆದರು.
ಮಧ್ಯಾರಾಧನೆಯ ಅಂಗವಾಗಿ ಬೆಳಗ್ಗಿನಿಂದ ಸಂಜೆವರೆಗೆ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಹಾಗೂ ಸಾರ್ವಜನಿಕರು ಶ್ರೀ ರಾಯರ ಅನ್ನಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸಿದರು.
ಶ್ರೀ ರಾಯರ ರಂಗಮಂದಿರದಲ್ಲಿ ನಡೆದ ಮಧ್ಯಾರಾಧನೆ ಮಹೋತ್ಸವದಲ್ಲಿ ರಾಯರ ದರ್ಶನಕ್ಕಾಗಿ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಭಕ್ತರ ಅಪಾರ ಸಂಖ್ಯೆಯಿಂದ ರಂಗಮಂದಿರದ ಆವರಣವು ಭಕ್ತಿಸಾಗರವಾಗಿ ಮಾರ್ಪಟ್ಟಿತ್ತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ, ರಾಯರ ಸೇವಕರಾದ ಎಂ. ಹೊನ್ನೇನಹಳ್ಳಿ ಜಗದೀಶ್, ಜಯಂತ್, ಶ್ರೀ ರಾಯರ ರಂಗಮಂದಿರದ ಅಧ್ಯಕ್ಷೆ ಕೆ.ಆರ್. ಅನಿತಾ ಪ್ರಕಾಶ್, ಕಾರ್ಯದರ್ಶಿ ಸ್ವಾತಿ ಪಿ. ಚಿನ್ಮಯ್, ರಂಗಮಂದಿರದ ಮುಖ್ಯಸ್ಥ ಎಂ.ಕೆ. ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ಐ ಕೆ ಮಂಜುನಾಥ್
