ಚನ್ನರಾಯಪಟ್ಟಣ: ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಹಾಸನ ಜಿಲ್ಲಾ ಶಾಖೆಯ 2025–26ನೇ ಸಾಲಿನ ವಾರ್ಷಿಕ ಮಹಾಸಭೆ ಚನ್ನರಾಯಪಟ್ಟಣದಲ್ಲಿ ನಡೆಯಿತು. ಜಿಲ್ಲಾಧಿಕಾರಿ ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಹಾಸನ ಜಿಲ್ಲಾ ಘಟಕದ ಅಧ್ಯಕ್ಷೆ ಲತಾ ಕುಮಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಶುಭಂ ಶುಕ್ಲಾ ಕಾರ್ಯಕ್ರಮ ಉದ್ಘಾಟಿಸಿದರು. ಮಾತನಾಡಿದ ಅವರು, ಭಾರತೀಯ ರೆಡ್ಕ್ರಾಸ್ ಸಂಸ್ಥೆ 180 ದೇಶಗಳಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದೆ. ಹಾಸನ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಘಟಕಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.

ಈ ಬಾರಿ ಚನ್ನರಾಯಪಟ್ಟಣ ತಾಲ್ಲೂಕು ರೆಡ್ಕ್ರಾಸ್ ಘಟಕವು ಜಿಲ್ಲೆಯಲ್ಲಿ ಅತ್ಯುತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜಸೇವೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಸಂತಸದ ಸಂಗತಿ ಎಂದು ಹೇಳಿದರು. ಸಂಸ್ಥೆಯ ಸೇವೆಯಿಂದ ಅನೇಕ ಕುಟುಂಬಗಳು, ರೋಗಿಗಳು ಹಾಗೂ ಸಮಾಜ ಮತ್ತು ಪರಿಸರ ಕ್ಷೇತ್ರಗಳಿಗೆ ನೆರವಾಗಿದೆ ಎಂದರು.
ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ಸಭಾಪತಿ ಎಚ್.ಪಿ. ಮೋಹನ್ ಮಾತನಾಡಿ, ವಾರ್ಷಿಕ ಮಹಾಸಭೆಯಲ್ಲಿ ಜಿಲ್ಲೆಯಾದ್ಯಂತ ನಡೆದ ವಿವಿಧ ಕಾರ್ಯಕ್ರಮಗಳ ವರದಿ ಮಂಡನೆ, ಮುಂದಿನ ಚಟುವಟಿಕೆಗಳ ಕುರಿತು ಚರ್ಚೆ ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿದ ತಾಲ್ಲೂಕು ಘಟಕಗಳನ್ನು ಗುರುತಿಸಿ ಗೌರವಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಚನ್ನರಾಯಪಟ್ಟಣ ತಾಲ್ಲೂಕು ಘಟಕವು 13 ಸಾವಿರಕ್ಕೂ ಅಧಿಕ ಜನರಿಗೆ ಆರೋಗ್ಯ, ಕಣ್ಣು, ಹೃದಯ ಹಾಗೂ ಕ್ಯಾನ್ಸರ್ ತಪಾಸಣೆ, ರಸ್ತೆ ಸುರಕ್ಷತೆ, ಅಂಗಾಂಗ ದಾನ ಜಾಗೃತಿ, ಕಾನೂನು ಅರಿವು, ಮಾದಕ ದ್ರವ್ಯ ನಿಷೇಧ, ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿದೆ. ಕ್ಯಾನ್ಸರ್ ರೋಗಿಗಳಿಗೆ ಪೌಷ್ಟಿಕ ಆಹಾರ ವಿತರಣೆ ಹಾಗೂ ಅಂಗವಿಕಲರಿಗೆ ನಾಲ್ಕು ವೀಲ್ಚೇರ್ಗಳನ್ನು ಉಚಿತವಾಗಿ ನೀಡಿದೆ ಎಂದು ತಿಳಿಸಿದರು.
ತಾಲ್ಲೂಕು ಘಟಕದ ಸಭಾಪತಿ ಭರತ್ ಕುಮಾರ್ ಎಚ್.ಜಿ. ನೇತೃತ್ವದಲ್ಲಿ ಹಾಗೂ ಸರ್ವ ಸದಸ್ಯರ ಸಹಕಾರದಲ್ಲಿ ನಡೆದ ಸಮಾಜಮುಖಿ ಕಾರ್ಯಗಳನ್ನು ಪರಿಗಣಿಸಿ ಚನ್ನರಾಯಪಟ್ಟಣ ತಾಲ್ಲೂಕು ರೆಡ್ಕ್ರಾಸ್ ಘಟಕಕ್ಕೆ ‘ಅತ್ಯುತ್ತಮ ಶ್ರೇಷ್ಠತೆ ಪ್ರಶಸ್ತಿ’ ನೀಡಲಾಯಿತು.

ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಶುಭಂ ಶುಕ್ಲಾ ಅವರು ತಾಲ್ಲೂಕು ಘಟಕದ ಸಭಾಪತಿ ಭರತ್ ಕುಮಾರ್ ಎಚ್.ಜಿ., ಕಾರ್ಯದರ್ಶಿ ಜಬಿವುಲ್ಲಾ ಬೇಗ್ ಸಿ.ಎನ್. ಹಾಗೂ ಖಜಾಂಚಿ ಕಿಶೋರ್ ಕುಮಾರ್ ಸಿ.ಎಸ್. ಅವರಿಗೆ ಪ್ರಶಸ್ತಿ ಹಾಗೂ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದರು.
ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ನಿರ್ದೇಶಕ ಉದಯ್ ಕುಮಾರ್ ಮಾತನಾಡಿ, ಚನ್ನರಾಯಪಟ್ಟಣ ಘಟಕದ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ಇತರೆ ತಾಲ್ಲೂಕು ಘಟಕಗಳೂ ಇದೇ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ವಿವಿಧ ತಾಲ್ಲೂಕು ಘಟಕಗಳ ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರು, ಸಂಯೋಜಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
- ಮಂಜುನಾಥ್ ಐ.ಕೆ.
