ಚನ್ನರಾಯಪಟ್ಟಣ: ಆಧುನಿಕತೆ ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಭಾರತೀಯ ಮೂಲ ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಜೀವನ ಮೌಲ್ಯಗಳು ಯುವಜನರಿಂದ ದೂರವಾಗುತ್ತಿರುವ ಇಂದಿನ ಸಂದರ್ಭದಲ್ಲಿ, ಪೌರಾಣಿಕ ನಾಟಕಗಳ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಪಟ್ಟಣದಲ್ಲಿ ಒಂಬತ್ತು ದಿನಗಳ ಪೌರಾಣಿಕ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಸರಸ್ವತಿ ಕಲಾ ಸಂಘದ ಗೌರವಾಧ್ಯಕ್ಷ ಬೆಕ್ಕ ಮಧುಸೂದನ್ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಸ್ವತಿ ಕಲಾ ಸಂಘದ ವತಿಯಿಂದ ಪಟ್ಟಣದ ಧನಲಕ್ಷ್ಮಿ ಚಿತ್ರಮಂದಿರದಲ್ಲಿ ಅಕ್ಟೋಬರ್ 24ರಿಂದ ನವೆಂಬರ್ 1ರವರೆಗೆ ನಾಟಕೋತ್ಸವ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಪ್ರತಿಭಾವಂತ ಹಾಗೂ ಅನುಭವಿ ರಂಗಕಲಾವಿದರು ಮತ್ತು ಮಹಿಳಾ ಕಲಾವಿದರು ನಾಟಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ರಾಮಾಯಣ, ಮಹಾಭಾರತ ಸೇರಿದಂತೆ ಭಾರತೀಯ ಪುರಾಣಗಳಲ್ಲಿ ಅಡಕವಾಗಿರುವ ಆದರ್ಶಗಳು, ಮಾನವೀಯ ಮೌಲ್ಯಗಳು ಮತ್ತು ಬದುಕಿನ ಸಂದೇಶಗಳನ್ನು ನಾಟಕಗಳ ಮೂಲಕ ಜನರಿಗೆ ತಲುಪಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಪೌರಾಣಿಕ ಕಥೆಗಳು ಕೇವಲ ಮನರಂಜನೆಗೆ ಸೀಮಿತವಾಗದೆ, ಬದುಕಿನ ಮೌಲ್ಯಗಳನ್ನು ಕಲಿಸುವ ಶಕ್ತಿಯನ್ನು ಹೊಂದಿವೆ. ಇಂತಹ ಕಥೆಗಳನ್ನು ರಂಗಭೂಮಿಯ ಮೂಲಕ ಪ್ರಸ್ತುತಪಡಿಸುವುದರಿಂದ ಯುವಜನರು ನಮ್ಮ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯ ಮಹತ್ವವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ರಂಗಭೂಮಿಯ ಪರಂಪರೆ ಉಳಿಸುವ ಪ್ರಯತ್ನ
ಸರಸ್ವತಿ ಕಲಾ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ರಘು ಕದಂಬ ಮಾತನಾಡಿ, ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪೌರಾಣಿಕ ನಾಟಕಗಳು ಜನಜೀವನದ ಅವಿಭಾಜ್ಯ ಅಂಗವಾಗಿದ್ದವು. ಹಬ್ಬ-ಹರಿದಿನಗಳು, ಜಾತ್ರೆಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ರಾತ್ರಿಯಿಡೀ ನಡೆಯುತ್ತಿದ್ದ ನಾಟಕಗಳನ್ನು ಜನರು ಆಸಕ್ತಿಯಿಂದ ವೀಕ್ಷಿಸುತ್ತಿದ್ದರು. ಪೌರಾಣಿಕ ಪಾತ್ರಗಳ ಮೂಲಕ ಕಲಾವಿದರು ನೀಡುತ್ತಿದ್ದ ಸಂದೇಶಗಳು ಜನರ ಮನಸ್ಸಿನಲ್ಲಿ ಆಳವಾಗಿ ನೆಲೆಸುತ್ತಿದ್ದವು ಎಂದು ಸ್ಮರಿಸಿದರು.
ಆದರೆ, ಬದಲಾದ ಜೀವನಶೈಲಿ ಹಾಗೂ ಆಧುನಿಕ ಮನರಂಜನಾ ಮಾಧ್ಯಮಗಳ ಪ್ರಭಾವದಿಂದ ಪೌರಾಣಿಕ ನಾಟಕಗಳ ಮೇಲಿನ ಆಸಕ್ತಿ ಕಡಿಮೆಯಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ರಂಗಭೂಮಿಯ ಬಗ್ಗೆ ಮತ್ತೆ ಆಸಕ್ತಿ ಮೂಡಿಸುವುದರ ಜತೆಗೆ ಪಾರಂಪರಿಕ ಕಲಾಪ್ರಕಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬಹುದು ಎಂದು ಅಭಿಪ್ರಾಯಪಟ್ಟರು.

ಕಲಾವಿದರಿಗೆ ವೇದಿಕೆ ಕಲ್ಪಿಸುವ ಉದ್ದೇಶ
ಸರಸ್ವತಿ ಕಲಾ ಸಂಘದ ತಾಲೂಕು ಅಧ್ಯಕ್ಷ ದ್ವಾರಕೀಶ್ ಬದ್ದಿಕೆರೆ ಮಾತನಾಡಿ, ಪೌರಾಣಿಕ ನಾಟಕಗಳ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜತೆಗೆ ರಂಗಭೂಮಿಯನ್ನೇ ಬದುಕಾಗಿಸಿಕೊಂಡಿರುವ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ನಾಟಕೋತ್ಸವದ ಉದ್ದೇಶವಾಗಿದೆ ಎಂದು ತಿಳಿಸಿದರು.
ಒಂಬತ್ತು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಚನ್ನರಾಯಪಟ್ಟಣ ತಾಲೂಕು ಮಾತ್ರವಲ್ಲದೆ ಜಿಲ್ಲೆಯ ವಿವಿಧ ಭಾಗಗಳಿಂದಲೂ ಕಲಾಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ. ಸಾರ್ವಜನಿಕರು ಕುಟುಂಬ ಸಮೇತರಾಗಿ ನಾಟಕೋತ್ಸವದಲ್ಲಿ ಭಾಗವಹಿಸಿ ನಾಟಕಗಳನ್ನು ವೀಕ್ಷಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಪೌರಾಣಿಕ ನಾಟಕಗಳು ನಮ್ಮ ಸಾಂಸ್ಕೃತಿಕ ಬೇರುಗಳನ್ನು ನೆನಪಿಸುವುದರ ಜತೆಗೆ ಕುಟುಂಬದ ಎಲ್ಲ ವಯೋಮಾನದವರಿಗೂ ಉತ್ತಮ ಸಂದೇಶ ನೀಡಬಲ್ಲವು. ಆದ್ದರಿಂದ ಸಂಘಟಕರು ಹಮ್ಮಿಕೊಂಡಿರುವ ಈ ಸಾಂಸ್ಕೃತಿಕ ಪ್ರಯತ್ನಕ್ಕೆ ಸಾರ್ವಜನಿಕರು ಸಹಕಾರ ನೀಡುವ ಮೂಲಕ ನಾಟಕೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸರಸ್ವತಿ ಕಲಾ ಸಂಘದ ಪ್ರಧಾನ ಕಾರ್ಯದರ್ಶಿ ದೀಪು ಸೋಸಲಗೆರೆ, ಕಾರ್ಯದರ್ಶಿ ವಿ.ಕೆ. ಮಂಜುನಾಥ್, ಸಹ ಕಾರ್ಯದರ್ಶಿ ದಿನೇಶ್, ಬನವಾಸೆ ಕರಿಯಪ್ಪ ಹಾಗೂ ಸುವರ್ಣ ಕರ್ನಾಟಕ ಸಂಘದ ಅಧ್ಯಕ್ಷ ಪ್ರದೀಪ್ ಬಡಕನಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
