ಚನ್ನರಾಯಪಟ್ಟಣ: ಪಟ್ಟಣದ ಗೂರಮಾರನಹಳ್ಳಿ ನಿವಾಸಿ ಹಾಗೂ ಪದವಿ ವಿದ್ಯಾರ್ಥಿನಿ ಕುಮಾರಿ ರಕ್ಷಿತಾ ಇತ್ತೀಚೆಗೆ ಕೊಲೆಯಾದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಮಡಿವಾಳ ಮಾಚೀದೇವ ಸಮಾಜದ ಬಸವ ಮಾಚಿದೇವ ಮಹಾಸ್ವಾಮೀಜಿ ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಗೌರವಧನ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವೇ ಬೆಚ್ಚಿಬೀಳಿಸುವ ರೀತಿಯಲ್ಲಿ ವಿದ್ಯಾರ್ಥಿನಿಯ ಹತ್ಯೆಯಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯುವತಿ ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ಯುವಕನೊಬ್ಬ ಹಲ್ಲೆ ನಡೆಸಿ ನೇಣು ಹಾಕಿದ್ದು, ಪ್ರಕರಣವನ್ನು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ನಡೆದಿತ್ತು ಎಂದು ಆರೋಪಿಸಿದರು.
ಪ್ರಕರಣವನ್ನು ಮುಚ್ಚಿಹಾಕಲು ಕಾಣದ ಪ್ರಭಾವಿಗಳು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸಿ.ಜಿ. ರವಿ ಹಾಗೂ ಅವರ ಸಂಗಡಿಗರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಯುವಕನ ವಿರುದ್ಧ ತಕ್ಷಣ ಕೊಲೆ ಪ್ರಕರಣ ದಾಖಲಿಸಿ ಬಂಧಿಸುವಂತೆ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಮೃತ ಕುಟುಂಬದ ಪರವಾಗಿ ನಿಂತು ನ್ಯಾಯಕ್ಕಾಗಿ ಹೋರಾಟ ನಡೆಸಿದ ರೈತ ಸಂಘದ ಮುಖಂಡರಿಗೆ ರಾಜ್ಯ ಮಡಿವಾಳ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.

ಇಂತಹ ಕೃತ್ಯಗಳು ಮರುಕಳಿಸದಂತೆ ಕಠಿಣ ಕಾನೂನು ಜಾರಿಗೊಳಿಸಬೇಕು. ಪ್ರಕರಣವನ್ನು ವಿಧಾನಮಂಡಲದಲ್ಲಿ ಚರ್ಚಿಸಿ ಸರ್ಕಾರ ಕೂಡಲೇ ಮೃತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಸರ್ಕಾರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಸವ ಮಾಚಿದೇವ ಮಹಾಸ್ವಾಮೀಜಿ ಎಚ್ಚರಿಸಿದರು.

ಮೈಸೂರು ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಹಾಗೂ ಹಿರಿಯ ವಕೀಲ ಕುಮಾರ್ ಮಾತನಾಡಿ, ತಾಲೂಕಿನ ಶಾಸಕರು ಸೇರಿದಂತೆ ಯಾವುದೇ ಪಕ್ಷದ ಮುಖಂಡರು ಮೃತರ ಕುಟುಂಬದ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳದಿರುವುದು ಬೇಸರದ ಸಂಗತಿ ಎಂದರು. ಕನಿಷ್ಠ ವಾರ್ಡ್ ಸದಸ್ಯರೂ ಭೇಟಿ ನೀಡದಿರುವುದು ಹಾಗೂ ಸೂತಕದ ಮನೆಯಲ್ಲಿ ರಾಜಕೀಯ ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಲೆ ಆರೋಪಿಯ ಪರವಾಗಿ ನಿಲ್ಲುವುದು ಇಡೀ ಮನುಕುಲವೇ ತಲೆತಗ್ಗಿಸುವಂತಹ ವಿಚಾರ. ಮುಂದಿನ ಚುನಾವಣೆಯಲ್ಲಿ ಜನರು ಇದಕ್ಕೆ ತಕ್ಕ ಉತ್ತರ ನೀಡಬೇಕು. ಪ್ರಕರಣದ ಕುರಿತು ರಾಜ್ಯದ ಮಡಿವಾಳ ಸಮಾಜದ ಪರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಡಿವಾಳ ಸಂಘದ ರಾಜ್ಯಾಧ್ಯಕ್ಷ ಸತ್ಯನಾರಾಯಣ್, ಮುಖಂಡರಾದ ಚಂದ್ರಶೇಖರ್, ಸಾಲಿಗಾಮೆ ಮಡಿವಾಳ ಸಂಘದ ಅಧ್ಯಕ್ಷ ರವಿ, ಮುಖಂಡರಾದ ಮಂಜು, ರೋಹಿತ್ಕೋಟೆ, ಸಿ.ವಿ. ನವೀನ್, ಮೆಕಾನಿಕ್ ನವೀನ್, ತಾಲೂಕು ರೈತ ಸಂಘದ ಅಧ್ಯಕ್ಷ ಸಿ.ಜಿ. ರವಿ, ಶಂಕರ್ ಬರಗೂರು, ಗಿರೀಶ್, ಸುನಿಲ್, ಆನಂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
-ಮಂಜುನಾಥ್ ಐ.ಕೆ.
