ಚನ್ನರಾಯಪಟ್ಟಣ, ಜು. 6: ವಿಶ್ವ ಪರಿಸರ ದಿನದ ಅಂಗವಾಗಿ ಜನನಿ ಸೇವಾ ಫೌಂಡೇಶನ್ ವತಿಯಿಂದ ತಾಲೂಕಿನ ಕಸಬಾ ಹೋಬಳಿಯ ಕುರುವಂಕ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಜಾತಿಯ ಗಿಡಗಳು, ನೋಟ್ಬುಕ್, ಪೆನ್, ಪೆನ್ಸಿಲ್ ಹಾಗೂ ಸಿಹಿ ವಿತರಿಸುವ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜನನಿ ಸೇವಾ ಫೌಂಡೇಶನ್ ಅಧ್ಯಕ್ಷ ಮಂಜುನಾಥ್ ಆರ್. ಕುರುವಂಕ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದರು. ಸರ್ಕಾರಿ ಶಾಲೆಗಳು ಶೈಕ್ಷಣಿಕವಾಗಿ ಮತ್ತಷ್ಟು ಅಭಿವೃದ್ಧಿ ಹೊಂದಿ ಉಳಿಯಬೇಕು. ಸರ್ಕಾರಿ ಶಾಲೆಗಳ ಉಳಿವು ಬಡ ಮಕ್ಕಳ ಶಿಕ್ಷಣಕ್ಕೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಫೌಂಡೇಶನ್ ಉಪಾಧ್ಯಕ್ಷ ರುದ್ರೇಶ್ ಬಾಲಚಂದ್ರ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಜೆ., ಕಾರ್ಯದರ್ಶಿ ರಮೇಶ್ ಬಿ.ಎಂ., ಖಜಾಂಚಿ ವಿನೋದ್ ಪ್ರಸಾದ್ ಎಚ್.ಎಂ. ಉಪಸ್ಥಿತರಿದ್ದರು.

ಶಾಲೆಯ ಮುಖ್ಯ ಶಿಕ್ಷಕಿ ಕಮಲಮ್ಮ, ಎಸ್ಡಿಎಂಸಿ ಅಧ್ಯಕ್ಷೆ ಧನಲಕ್ಷ್ಮಿ, ಗ್ರಾಮದ ಮುಖಂಡರಾದ ಗಂಗಾಧರ್ ಹಾಗೂ ಸಿದ್ದೇಗೌಡ, ವಿದ್ಯಾರ್ಥಿಗಳ ಪೋಷಕರು, ಗ್ರಾಮಸ್ಥರು ಮತ್ತು ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
– ಮಂಜುನಾಥ್ ಐ.ಕೆ
