ಚನ್ನರಾಯಪಟ್ಟಣ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಹಾಸನ ಜಿಲ್ಲಾ ಶಾಖೆಯ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಹಾಸನದ ರೆಡ್ ಕ್ರಾಸ್ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಹಾಸನ ಜಿಲ್ಲಾಧಿಕಾರಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಸನ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ಲತಾ ಕುಮಾರಿ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷರಾದ ಶುಭಂ ಶುಕ್ಲ ಹಾಗೂ ವೇದಿಕೆಯ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶುಭಂ ಶುಕ್ಲ ಅವರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ವಿಶ್ವದ 180 ದೇಶಗಳಲ್ಲಿ ಸಮಾಜಮುಖಿ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಹಾಸನ ಜಿಲ್ಲೆಯಲ್ಲಿಯೂ ಎಲ್ಲಾ ತಾಲೂಕುಗಳಲ್ಲಿ ರೆಡ್ ಕ್ರಾಸ್ ಘಟಕಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ವಿವಿಧ ರೀತಿಯ ಸೇವೆಗಳನ್ನು ನೀಡುತ್ತಿರುವುದು ಗಮನಾರ್ಹವಾಗಿದೆ ಎಂದರು.

ಈ ಬಾರಿ ಚನ್ನರಾಯಪಟ್ಟಣ ತಾಲೂಕು ರೆಡ್ ಕ್ರಾಸ್ ಘಟಕವು ಜಿಲ್ಲೆಯಾದ್ಯಂತ ಅತ್ಯುತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜ ಸೇವೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಸಂತೋಷದ ವಿಷಯವಾಗಿದೆ. ಸಂಸ್ಥೆಯ ಸೇವೆಯಿಂದ ಅನೇಕ ಕುಟುಂಬಗಳು, ರೋಗಿಗಳು ಹಾಗೂ ಸಾರ್ವಜನಿಕರಿಗೆ ನೆರವಾಗಿದ್ದು, ಆರೋಗ್ಯ, ಪರಿಸರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲಾಗುತ್ತಿದೆ. ಇಂತಹ ಸಂಸ್ಥೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವುದು ನನಗೆ ಆತ್ಮತೃಪ್ತಿ ಹಾಗೂ ಸಂತೋಷವನ್ನು ನೀಡಿದೆ ಎಂದು ಹೇಳಿದರು

ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಹೆಚ್.ಪಿ. ಮೋಹನ್ ಮಾತನಾಡಿ, ವಾರ್ಷಿಕ ಮಹಾಸಭೆಯಲ್ಲಿ ಜಿಲ್ಲೆಯಾದ್ಯಂತ ವರ್ಷವಿಡೀ ನಡೆದ ವಿವಿಧ ಕಾರ್ಯಕ್ರಮಗಳ ವರದಿ ಮಂಡನೆ, ಮುಂದಿನ ಚಟುವಟಿಕೆಗಳ ಕುರಿತು ಚರ್ಚೆ ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿದ ತಾಲೂಕು ಘಟಕಗಳನ್ನು ಗುರುತಿಸಿ ಗೌರವಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಹಾಸನ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಘಟಕಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಬಾರಿ ಚನ್ನರಾಯಪಟ್ಟಣ ತಾಲೂಕು ಘಟಕವು ವಿಶೇಷವಾಗಿ ಗಮನ ಸೆಳೆದಿದೆ. ಘಟಕದ ವತಿಯಿಂದ 13 ಸಾವಿರಕ್ಕೂ ಅಧಿಕ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ, ಹೃದಯ ತಪಾಸಣೆ ಹಾಗೂ ಕ್ಯಾನ್ಸರ್ ತಪಾಸಣಾ ಶಿಬಿರಗಳನ್ನು ನಡೆಸಲಾಗಿದೆ. ರಸ್ತೆ ಸುರಕ್ಷತೆ, ಅಂಗಾಂಗ ದಾನ ಅರಿವು, ಭೂ ವಿವಾದ ಮತ್ತು ಕಾನೂನು ಅರಿವು, ಮಾದಕ ದ್ರವ್ಯ ನಿಷೇಧ, ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕ್ಯಾನ್ಸರ್ ರೋಗಿಗಳಿಗೆ ಪೌಷ್ಟಿಕ ಆಹಾರ ವಿತರಣೆ ಹಾಗೂ ತಾಲೂಕಿನಲ್ಲಿ ಅಂಗವಿಕಲರಿಗೆ ನಾಲ್ಕು ವೀಲ್ಚೇರ್ಗಳನ್ನು ಉಚಿತವಾಗಿ ನೀಡುವಂತಹ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ತಾಲೂಕು ರೆಡ್ ಕ್ರಾಸ್ ಘಟಕದ ಸಭಾಪತಿ ಭರತ್ ಕುಮಾರ್ ಹೆಚ್.ಜಿ. ಅವರ ನೇತೃತ್ವದಲ್ಲಿ ಹಾಗೂ ಘಟಕದ ಸರ್ವ ಸದಸ್ಯರ ಸಹಕಾರದಿಂದ ಈ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ಈ ಹಿನ್ನೆಲೆಯಲ್ಲಿ 2025-26ನೇ ಸಾಲಿನಲ್ಲಿ ಚನ್ನರಾಯಪಟ್ಟಣ ತಾಲೂಕು ರೆಡ್ ಕ್ರಾಸ್ ಘಟಕಕ್ಕೆ ಜಿಲ್ಲಾ ಮಟ್ಟದ ಅತ್ಯುತ್ತಮ ಶ್ರೇಷ್ಠತೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದು ಹೆಚ್.ಪಿ. ಮೋಹನ್ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷರಾದ ಶುಭಂ ಶುಕ್ಲ ಅವರು ಚನ್ನರಾಯಪಟ್ಟಣ ತಾಲೂಕು ಘಟಕದ ಸಭಾಪತಿ ಭರತ್ ಕುಮಾರ್ ಹೆಚ್.ಜಿ., ಕಾರ್ಯದರ್ಶಿ ಜಬಿವುಲ್ಲಾ ಬೇಗ್ ಸಿ.ಎನ್. ಹಾಗೂ ಖಜಾಂಚಿ ಕಿಶೋರ್ ಕುಮಾರ್ ಸಿ.ಎಸ್. ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ, ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದರು.
ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಉದಯ್ ಕುಮಾರ್ ಮಾತನಾಡಿ, ಚನ್ನರಾಯಪಟ್ಟಣ ತಾಲೂಕು ಘಟಕವು ಸಮಾಜ ಸೇವೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಈ ಸಾಧನೆಗೆ ಸಹಕರಿಸಿದ ಘಟಕದ ಸರ್ವ ಸದಸ್ಯರು ಹಾಗೂ ನಿರ್ದೇಶಕರಿಗೆ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಜಿಲ್ಲೆಯ ಇತರೆ ತಾಲೂಕು ಘಟಕಗಳೂ ಚನ್ನರಾಯಪಟ್ಟಣ ಘಟಕದ ಮಾದರಿಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ಹೆಚ್ಚಿನ ಸೇವೆ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿ ಡಾ. ವೈ.ಎಸ್. ವೀರಭದ್ರಪ್ಪ, ಕಾರ್ಯದರ್ಶಿ ಶಬೀರ್ ಅಹಮದ್, ಖಜಾಂಚಿ ಹೆಚ್.ಡಿ. ಜಯಂದ್ರ ಕುಮಾರ್, ನಿರ್ದೇಶಕರಾದ ಹೆಚ್.ಡಿ. ಕುಮಾರ್, ಅಮ್ಜದ್ ಖಾನ್, ಎಸ್.ಎಸ್. ಪಾಷಾ, ಕೆ.ಟಿ. ಜಯಶ್ರೀ, ಡಾ. ಅಬ್ದುಲ್ ಬಶೀರ್ ವಿ.ಕೆ., ಡಾ. ಭಾರತಿ ರಾಜಶೇಖರ್, ಡಾ. ಪ್ರಸನ್ನ ಎನ್. ರಾವ್, ಡಾ. ಎ. ಸಾವಿತ್ರಿ, ಸುಬ್ಬ ಸ್ವಾಮಿ, ಬಿ.ಆರ್. ಉದಯ್ ಕುಮಾರ್, ಜಯಪ್ರಕಾಶ್, ಡಾ. ತೇಜಸ್ವಿ, ಗಿರೀಶ್, ಗಿರಿ ಗೌಡ, ಭೀಮರಾಜ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಅರಕಲಗೂಡು ತಾಲೂಕು ಸಭಾಪತಿ ವಿ.ಎ. ನಂಜುಂಡಸ್ವಾಮಿ, ಹೊಳೆನರಸೀಪುರ ತಾಲೂಕು ಸಭಾಪತಿ ಆರ್.ಬಿ. ಪುಟ್ಟೇಗೌಡ, ಬೇಲೂರು ತಾಲೂಕು ಸಭಾಪತಿ ವೈ.ಎಸ್. ಸಿದ್ದೇಗೌಡ, ಆಲೂರು ತಾಲೂಕು ಸಭಾಪತಿ ಕಾಂತರಾಜು, ಸಕಲೇಶಪುರ ತಾಲೂಕು ಸಭಾಪತಿ ಶಾರದ ಗುರುಮೂರ್ತಿ, ಹಾಸನ ತಾಲೂಕು ಸಭಾಪತಿ ಸುರೇಶ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳು, ರೆಡ್ ಕ್ರಾಸ್ ಸಂಯೋಜಕರಾದ ಅವಿನಾಶ್, ಚಂದನ್, ಹರ್ಷಿತ್, ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
