ಚನ್ನರಾಯಪಟ್ಟಣ: ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟ 1964 (ರಿ) ದಕ್ಷಿಣ ಮಧ್ಯವಲಯದ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ವಡ್ಡರಹಳ್ಳಿ ಗ್ರಾಮದ ವಿ.ಜಿ. ಅಶೋಕ್ ಅವರನ್ನು ಪಟ್ಟಣದ ಕೃಷ್ಣರಾಜೇಂದ್ರ (ಕೆ.ಆರ್.) ವೃತ್ತದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಚನ್ನರಾಯಪಟ್ಟಣ ತಾಲೂಕು ಶಾಖೆಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ವತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಲಾಯಿತು. ಬಳಿಕ ವಿ.ಜಿ. ಅಶೋಕ್ ಅವರಿಗೆ ಮೈಸೂರು ಪೇಟ ತೊಡಿಸಿ, ಬೃಹತ್ ಹೂವಿನ ಹಾರ ಹಾಕಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಲ್ಐಸಿ ಏಜೆಂಟ್ ಎಸ್.ಕೆ. ಶಿವಾನಂದ, “ನಮ್ಮ ತಾಲೂಕಿನ ಹೆಮ್ಮೆಯ ಸುಪುತ್ರರಾದ ವಿ.ಜಿ. ಅಶೋಕ್ ಅವರು ಮೂರು ರಾಜ್ಯಗಳ ಮಧ್ಯವಲಯದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದು ಸಂತಸದ ಸಂಗತಿ. ಅವರು ನಮ್ಮ ಚನ್ನರಾಯಪಟ್ಟಣ ಶಾಖೆಯ ವಿಮಾ ಪ್ರತಿನಿಧಿಯಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸ್ಥಾನಗಳನ್ನು ಅಲಂಕರಿಸಿ, ಜೀವ ವಿಮಾ ಪ್ರತಿನಿಧಿಗಳ ಹಿತ ಕಾಪಾಡುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲಿ” ಎಂದು ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿ.ಜಿ. ಅಶೋಕ್, “ನನ್ನನ್ನು ಮೈಸೂರು ವಿಭಾಗ ಮಟ್ಟದ ಅಧ್ಯಕ್ಷರನ್ನಾಗಿ ಮೂರು ಬಾರಿ ಆಯ್ಕೆ ಮಾಡಿದ ಎಲ್ಲ ಜೀವ ವಿಮಾ ಪ್ರತಿನಿಧಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ನಾನು ಅಧ್ಯಕ್ಷನಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರಾಷ್ಟ್ರೀಯ ನಾಯಕರು ಮೂರು ರಾಜ್ಯಗಳ ಪ್ರತಿನಿಧಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುವುದು ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ನನ್ನ ಅವಧಿಯಲ್ಲಿ ಜೀವ ವಿಮಾ ಪ್ರತಿನಿಧಿಗಳ ಹಕ್ಕುಗಳು ಹಾಗೂ ಹಿತಾಸಕ್ತಿಗಳನ್ನು ಕಾಪಾಡಲು ಸದಾ ಬದ್ಧನಾಗಿರುತ್ತೇನೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಡ್ಡರಹಳ್ಳಿ ಅಶೋಕ್, ಶೆಟ್ಟಿಹಳ್ಳಿ ಅಶೋಕ್, ಅರಳಾಪುರ ನಾಗೇಶ್, ಬೆಕ್ಕಚೋಳನಹಳ್ಳಿ ಜಗದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
