ಕೆ.ಆರ್.ಪೇಟೆ,ಜು.08: ರೇವತಿ ನಕ್ಷತ್ರದ ಶುಭ ದಿನವಾದ ಇಂದು ಭೂವರಹನಾಥಸ್ವಾಮಿ ಪುಣ್ಯಕ್ಷೇತ್ರ ಕೆ.ಆರ್.ಪೇಟೆ ತಾಲ್ಲೂಕಿನ ವರಹನಾಥಜಕಲ್ಲಹಳ್ಳಿ ಗ್ರಾಮದಲ್ಲಿ ಭೂದೇವಿ ಸಮೇತ ನೆಲೆಸಿರುವ ಶ್ರೀ ಭೂವರಹನಾಥ ಸ್ವಾಮಿಯ ಶ್ರೀಕ್ಷೇತ್ರಕ್ಕೆ ಭಕ್ತರ ಪ್ರವಾಹವೇ ಹರಿದು ಬಂದಿತ್ತು.
ಕನ್ನಡ ಚಲನಚಿತ್ರ ರಂಗದ ಪ್ರಖ್ಯಾತ ನಾಯಕನಟ ಶರಣ್ ದಂಪತಿಗಳು, ಮಾಜಿ ಸಚಿವರಾದ ಸಿ.ಎಸ್ ಪುಟ್ಟರಾಜು ದಂಪತಿಗಳು, ರಾಜ್ಯ ವಿಧಾನ ಸಭೆಯ ಮಾಜಿ ಅಧ್ಯಕ್ಷ ಕೆ.ಆರ್.ಪೇಟೆ ಕೃಷ್ಣ ಅವರ ಧರ್ಮಪತ್ನಿ ಶ್ರೀಮತಿ ಇಂದ್ರಮ್ಮ ಕೃಷ್ಣ ಕುಟುಂಬ ವರ್ಗದವರು ಹಾಗೂ ಆಂಧ್ರಪ್ರದೇಶದ ಧರ್ಮಾವರಂ ಕ್ಷೇತ್ರದ ಶಾಸಕ ಸತ್ಯಕುಮಾರ್ ಯಾದವ್, ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಭೂವರಹನಾಥ ಸ್ವಾಮಿಯವರ ಕ್ಷೇತ್ರಕ್ಕೆ ಆಗಮಿಸಿ ರೇವತಿ ನಕ್ಷತ್ರದ ಶುಭ ದಿನವಾದ ಇಂದು ನಡೆದ ಸ್ವಾಮಿಯ ಅಭಿಷೇಕ, ಪುಷ್ಪಭಿಷೇಕ, ಪಟ್ಟಾಭಿಷೇಕ, ವರಾಹ ಹೋಮ ಹಾಗೂ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವರ ಕೃಫೆಗೆ ಪಾತ್ರರಾದರು.

ಒಂದು ಸಾವಿರ ಲೀಟರ್ ಹಾಲು, 300ಲೀಟರ್ ಎಳನೀರು, 300 ಲೀಟರ್ ಕಬ್ಬಿನ, ಹಾಲು ಮೊಸರು ಜೇನುತುಪ್ಪ, ಹಸುವಿನ ತುಪ್ಪ, ಸುಗಂಧದ ದ್ರವ್ಯಗಳು ಗಂಗಾಜಲ ಅರಿಶಿಣ ಶ್ರೀಗಂಧದಿಂದ ಅಭಿಷೇಕ ಮಾಡಲಾಯಿತು. ಮಲ್ಲಿಗೆ, ಜಾಜಿ, ಸಂಪಿಗೆ, ಸುಗಂಧ ರಾಜ, ಸೇವಂತಿಗೆ, ಕಮಲ, ತುಳಸಿ, ಧವನ, ಪವಿತ್ರ ಪತ್ರೆಗಳು ಸೇರಿದಂತೆ 58 ಬಗೆಯ ಪುಷ್ಪಗಳಿಂದ ಪುಷ್ಪಭಿಷೇಕ ಮಾಡಲಾಯಿತು.
ಪಟ್ಟಾಭಿಷೇಕ ನಡೆಸಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಶ್ರೀ ಭೂವರಹನಾಥ ಕಲ್ಲಹಳ್ಳಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸಂಚಾಲಕ ಡಾ.ಶ್ರೀನಿವಾಸ ರಾಘವನ್ ಮಾತನಾಡಿ ದುಷ್ಟ ಹಿರಣ್ಯಾಕ್ಷನನ್ನು ಸಂಹರಿಸಿ ಭೂದೇವಿಯನ್ನು ಸಂರಕ್ಷಣೆ ಮಾಡಿ ರಸ ತಳದಿಂದ ತಂದು ಸ್ವಸ್ಥಾನಕ್ಕೆ ತಂದು ನಿಲ್ಲಿಸಿದ ಮಹೂರ್ತವು ರೇವತಿ ನಕ್ಷತ್ರವಾದ್ದರಿಂದ ರೇವತಿ ನಕ್ಷತ್ರದ ಶುಭದಿನವಾದ ಇಂದು ಈ ಹಿಂದೆ ದೇವಾನು ದೇವತೆಗಳು ಸಂಭ್ರಮಿಸಿದ ಕ್ಷಣವನ್ನು ಭಕ್ತರ ಸಮಕ್ಷಮದಲ್ಲಿ ವಿಶ್ವದಲ್ಲಿಯೇ ಅಪರೂಪ ದ್ದಾಗಿರುವ 17ಅಡಿ ಎತ್ತರದ ಸಾಲಿಗ್ರಾಮ ಶ್ರೀ ಕೃಷ್ಣ ಶಿಲೆಯ ಮೂರ್ತಿಗೆ ಅಭಿಷೇಕ ಮಾಡಿ ಪಟ್ಟಾಭಿಷೇಕ ಮಾಡಿ ಲೋಕಲ್ಯಾಣಾರ್ಥವಾಗಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಗುತ್ತಿದೆ ಬೇಡಿ ಬಂದ ಭಕ್ತರ ಆಸೆ-ಆಕಾಂಕ್ಷೆಗಳು ಹಾಗೂ ಅಭಿಷ್ಟಗಳನ್ನು ಈಡೇರಿಸಿ ಕರುಣಿಸಿ ಆಶೀರ್ವದಿಸುತ್ತಿರುವುದರಿಂದ ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಭೂವರಹನಾಥ ಕ್ಷೇತ್ರವನ್ನು ತಿರುಮಲ ತಿರುಪತಿಯ ಮಾದರಿಯಲ್ಲಿ ಸಮಗ್ರವಾಗಿ ಅಭಿವೃದ್ದಿ ಪಡಿಸಲು ಮೈಸೂರಿನ ಪರಕಾಲ ಮಠದ ಪರಕಾಲ ಸ್ವಾಮಿಗಳು ಸಂಕಲ್ಪ ಮಾಡಿದ್ದು ಹೊಯ್ಸಳ ವಾಸ್ತು ಶಿಲ್ಪಕಲಾ ವೈಭವದ ಮಾದರಿಯಲ್ಲಿ ದೇವಾಲಯವನ್ನು ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಾಣ ಮಾಡಲಾಗುತ್ತಿದೆ.
ದೇವಾಲಯದ ಸುತ್ತಲೂ ನಾಲ್ಕು ದಿಕ್ಕುಗಳಲ್ಲಿ 56 ಅಡಿ ಎತ್ತರದ ರಾಜಗೋಪುರಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು ಮೂರನೇ ಪ್ರಕಾರದಲ್ಲಿ 176 ಕಾಲುಗಳ ಬೃಹತ್ ಮುಖ ಮಂಟಪ ಹಾಗೂ 186 ಅಡಿ ಎತ್ತರದ ಬೃಹತ್ ರಾಜಗೋಪುರವನ್ನು ನಿರ್ಮಾಣ ಮಾಡಲಾಗುತ್ತಿದೆ. ಶ್ರೀಕ್ಷೇತ್ರದಲ್ಲಿ ವೇದ ಪಾಠಶಾಲೆ ಶೀಘ್ರದಲ್ಲಿ ಆರಂಭವಾಗುತ್ತಿದ್ದು ಪ್ರಸ್ತುತ ಗೋಶಾಲೆ ಹಾಗೂ ಬೆಳಿಗ್ಗೆ ಒಂಭತ್ತು ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನ್ನಪ್ರಸಾದವನ್ನು ವಿತರಿಸಲಾಗುತ್ತಿದೆ.
ದೇವಾಲಯವನ್ನು ಸಂಪೂರ್ಣವಾಗಿ ಗ್ರಾನೈಟ್ ಕಲ್ಲಿನಿಂದ ನಿರ್ಮಾಣ ಮಾಡಲಾಗುತ್ತಿದೆ. ಚೈನಾ ತಂತ್ರಜ್ಞಾನದ ಮಾದರಿಯಲ್ಲಿ ಕಲ್ಲನ್ನು ಕತ್ತರಿಸುವ ಹಾಗೂ ಕಲ್ಲನ್ನು ಕೆತ್ತನೆ ಮಾಡುವ ಯಂತ್ರೋಪಕರಣಗಳನ್ನು ಅಳವಡಿಸಿ ದೇವಾಲಯದ ನಿರ್ಮಾಣಕ್ಕೆ ತಾಂತ್ರಿಕ ಸ್ಪರ್ಶವನ್ನು ನೀಡಲಾಗಿದೆ. ಇನ್ನು ಮರ್ನಾಲ್ಕು ವರ್ಷಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಪರಕಾಲ ಸ್ವಾಮಿಗಳು ಸಂಕಲ್ಪ ಮಾಡಿದ್ದಾರೆ. ಭಕ್ತಾದಿಗಳು ನೀಡುವ ಕಾಣಿಕೆ ಹಣದಿಂದಲೇ ಸಂಪೂರ್ಣವಾಗಿ ದೇವಾಲಯವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಶ್ರೀನಿವಾಸ ರಾಘವನ್ ವಿವರಿಸಿದರು.
ರೇವತಿ ನಕ್ಷತ್ರದ ಪೂಜಾ ಮಹೋತ್ಸವದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ.ತಮಿಳುನಾಡು ಹಾಗೂ ಮೇಘಾಲಯ ರಾಜ್ಯ ಸೇರಿದಂತೆ ಹೊರ ದೇಶಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಭೂವರಹನಾಥಸ್ವಾಮಿಯ ಕೃಫೆಗೆ ಪಾತ್ರರಾದರು.
– ಶ್ರೀನಿವಾಸ್ ಆರ್.
