ತುಮಕೂರು:ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಆಗಿರುವ ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಜೂನ್ 06ರ ಶನಿವಾರ ತುಮಕೂರು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಸ್ವಾಗತಕ್ಕಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ ಜಿ.ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಪೂರ್ವ ಭಾವಿ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ್ಗೌಡ, ನಮ್ಮ ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕಾಗಿತ್ತು.ಸ್ವಲ್ಪದರಲ್ಲಿಯೇ ಕೈತಪ್ಪಿ ಉಪಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ.ಸಜ್ಜನರು,ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿರುವ ಡಾ.ಜಿ.ಪರಮೇಶ್ವರ್ ಅವರು ಜೂನ್.06ರ ಬೆಳಗ್ಗೆ 9:30ಕ್ಕೆ ಮಾಜಿ ಸಹಕಾರ ಸಚಿವರು, ಮಧುಗಿರಿ ಕ್ಷೇತ್ರದ ಶಾಸಕರು,ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆಗಿರುವ ಕೆ.ಎನ್.ರಾಜಣ್ಣ ಅವರ ಮನೆಗೆ ಆಗಮಿಸಲಿದ್ದು, ಉಪಹಾರದ ನಂತರ ಅವರು ಬಟವಾಡಿಯ ಅಂಜನೇಯಸ್ವಾಮಿ ದೇವಾಲಯದ ಬಳಿ ಆಗಮಿಸಲಿದ್ದು,ಅಲ್ಲಿ ಅಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ, ತದ ನಂತರ ತೆರದ ಜೀಪಿನಲ್ಲಿ ತಮಟೆ,ಕಹಳೆಯೊಂದಿಗೆ,ಯುವ ಕಾಂಗ್ರೆಸ್ ಬೈಕ್ ರ್ಯಾಲಿಯ ಮೂಲಕ ಮರವಣಿಗೆಯಲ್ಲಿ ಟೌನ್ಹಾಲ್ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಬಳಿಗೆ ಕರೆತರಲಾಗುವುದು.
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ,ಅಲ್ಲಿಯೇ ಸಿದ್ದಪಡಿಸಿರುವ ವೇದಿಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ, ಡಾ.ಜಿ.ಪರಮೇಶ್ವರ್, ಶಾಸಕರಾದ ಕೆ.ಎನ್.ರಾಜಣ್ಣ, ಎಂ.ಎಲ್.ಸಿ. ಆರ್.ರಾಜೇಂದ್ರ, ಎಲ್ಲಾ ಶಾಸಕರುಗಳು, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರುಗಳು ಮಾತನಾಡಲಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಇಕ್ಬಾಲ್ಅಹಮದ್ ಮಾತನಾಡಿ,ಡಾ.ಜಿ.ಪರಮೇಶ್ವರ್ ಓರ್ವ ಸಜ್ಜನರಾಜಕಾರಣಿ,ಅವರಿಗೆ ಸಿ.ಎಂ ಪದವಿ ದೊರೆಯಬೇಕು ಎಂಬುದು ನಮ್ಮೆಲ್ಲರ ಆಶಯವಾಗಿತ್ತು.ಪಕ್ಷ ಅವರನ್ನು ಉಪಮುಖ್ಯಮಂತ್ರಿ ಜೊತೆಗೆ, ಕಂದಾಯ ಇಲಾಖೆಯ ಜವಾಬ್ದಾರಿ ನೀಡಿದೆ.ಅವರನ್ನು ಸ್ವಾಗತಿಸುವ ನಿಟ್ಟಿನಲ್ಲಿ ತುಮಕೂರು ನಗರದಿಂದ ಹೆಚ್ಚಿನ ಜನರು ಭಾಗವಹಿಸುವಂತೆ ನೋಡಿಕೊಳ್ಳಲಾಗುವುದು ಎಂದರು.
– ಚಂದ್ರಚೂಡ ಕೆ.ಬಿ.
