ಅಂಟಾರ್ಟಿಕಾದ ಪೂರ್ವ ಭಾಗದ ಅಲನ್ ಹಿಲ್ಸ್ ಪ್ರದೇಶದಲ್ಲಿ ವಿಜ್ಞಾನಿಗಳು ಭೂಮಿಯ ಅತಿ ಹಳೆಯ ನೇರ ಗಾಳಿಯ ಮಾದರಿಯನ್ನು ಪತ್ತೆಹಚ್ಚಿದ್ದಾರೆ. ಸುಮಾರು 60 ಲಕ್ಷ ವರ್ಷಗಳಷ್ಟು ಹಳೆಯದಾದ ಹಿಮದಲ್ಲಿ ಸೆರೆಯಾಗಿದ್ದ ಗಾಳಿಯ ಬುಳ್ಳೆಗಳ ವಿಶ್ಲೇಷಣೆಯಿಂದ ಈ ಮಹತ್ವದ ಮಾಹಿತಿಯನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.
ಈ ಸಂಶೋಧನೆಯನ್ನು ಅಮೆರಿಕದ ನ್ಯಾಷನಲ್ ಸೈನ್ಸ್ ಫೌಂಡೇಶನ್ನ COLDEX (Center for Oldest Ice Exploration) ತಂಡ ನಡೆಸಿದೆ. ವುಡ್ಸ್ ಹೋಲ್ ಓಷನೋಗ್ರಾಫಿಕ್ ಇನ್ಸ್ಟಿಟ್ಯೂಟ್ನ ಸಾರಾ ಶ್ಯಾಕ್ಲೆಟನ್ ಹಾಗೂ ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಜಾನ್ ಹಿಗ್ಗಿನ್ಸ್ ನೇತೃತ್ವದಲ್ಲಿ ಅಧ್ಯಯನ ನಡೆಯಿತು.
ಹಿಮದೊಳಗಿನ ಗಾಳಿಯ ಬುಳ್ಳೆಗಳಲ್ಲಿ ಸೆರೆಯಾಗಿದ್ದ ಆರ್ಗಾನ್ ಐಸೋಟೋಪ್ಗಳ ವಿಶ್ಲೇಷಣೆಯ ಮೂಲಕ ಹಿಮದ ವಯಸ್ಸನ್ನು ನಿರ್ಧರಿಸಲಾಗಿದೆ. ಅಧ್ಯಯನದ ಪ್ರಕಾರ ಕಳೆದ 60 ಲಕ್ಷ ವರ್ಷಗಳಲ್ಲಿ ಅಂಟಾರ್ಟಿಕಾದ ತಾಪಮಾನವು ಸುಮಾರು 12 ಡಿಗ್ರಿ ಸೆಲ್ಸಿಯಸ್ ಮಟ್ಟಿಗೆ ಕುಸಿದಿರುವುದು ತಿಳಿದುಬಂದಿದೆ.
ಇದರ ಜೊತೆಗೆ ಯುರೋಪಿನ ‘ಬಿಯಾಂಡ್ EPICA’ ಯೋಜನೆಯಡಿಯಲ್ಲಿ 2.8 ಕಿಲೋಮೀಟರ್ ಆಳದ ಹಿಮಕೋರ್ ಸಂಗ್ರಹಿಸಲಾಗಿದ್ದು, ಅದು ಸುಮಾರು 12 ಲಕ್ಷ ವರ್ಷಗಳ ಹವಾಮಾನ ದಾಖಲೆಗಳನ್ನು ಒಳಗೊಂಡಿದೆ. ಈ ಹಿಮಕೋರ್ಗಳಲ್ಲಿ ಕಾರ್ಬನ್ ಡೈಆಕ್ಸೈಡ್ ಮತ್ತು ಮೀಥೇನ್ ಅನಿಲಗಳಂತಹ ಹಸಿರುಮನೆ ಅನಿಲಗಳ ಮಾಹಿತಿ ಕೂಡ ಸಿಕ್ಕಿದೆ.
ಈ ಸಂಶೋಧನೆ ಭೂಮಿಯ ಹವಾಮಾನ ಬದಲಾವಣೆಗಳ ಇತಿಹಾಸ ಹಾಗೂ ಭವಿಷ್ಯದ ಹವಾಮಾನ ಅಧ್ಯಯನಗಳಿಗೆ ಮಹತ್ವದ ದಿಕ್ಕುನಿರ್ದೇಶನ ನೀಡಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
