ನವದೆಹಲಿ, ಮೇ 21: ಆಫ್ರಿಕಾದ ಕೆಲವು ಭಾಗಗಳಲ್ಲಿ ಎಬೋಲಾ ವೈರಸ್ ಹರಡುವಿಕೆ ಹೆಚ್ಚುತ್ತಿರುವ ಹಿನ್ನೆಲೆ, ನವದೆಹಲಿಯಲ್ಲಿ ಮೇ 28ರಿಂದ 31ರವರೆಗೆ ನಡೆಯಬೇಕಿದ್ದ ನಾಲ್ಕನೇ ಭಾರತ-ಆಫ್ರಿಕಾ ಫೋರಂ ಶೃಂಗಸಭೆಯನ್ನು ಭಾರತ ಹಾಗೂ ಆಫ್ರಿಕನ್ ಯೂನಿಯನ್ ಪರಸ್ಪರ ಸಮಾಲೋಚನೆಯ ಬಳಿಕ ಮುಂದೂಡಿವೆ.
ಪ್ರಜಾಸತ್ತಾತ್ಮಕ ಗಣರಾಜ್ಯ ಕಾಂಗೋ ಮತ್ತು ಉಗಾಂಡಾದಲ್ಲಿ ಎಬೋಲಾ ಸೋಂಕು ತೀವ್ರಗೊಂಡಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಮೇ 16ರಂದು ಈ ಸೋಂಕು ಹರಡುವಿಕೆಯನ್ನು “ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ” ಎಂದು ಘೋಷಿಸಿದೆ.
ಭಾರತ-ಆಫ್ರಿಕಾ ಫೋರಂ ಶೃಂಗಸಭೆ ಭಾರತ ಮತ್ತು ಆಫ್ರಿಕಾ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿಸುವ ಪ್ರಮುಖ ವೇದಿಕೆಯಾಗಿದೆ. ಮೊದಲ ಶೃಂಗಸಭೆ 2008ರಲ್ಲಿ ನಡೆದಿದ್ದು, ಮೂರನೇ ಶೃಂಗಸಭೆ 2015ರಲ್ಲಿ ನವದೆಹಲಿಯಲ್ಲಿ ಆಯೋಜನೆಯಾಗಿತ್ತು.
ಈ ಬಾರಿ ನಡೆಯಬೇಕಿದ್ದ ಶೃಂಗಸಭೆಯಲ್ಲಿ ವ್ಯಾಪಾರ, ಆರೋಗ್ಯ, ತಂತ್ರಜ್ಞಾನ, ಕೃಷಿ ಮತ್ತು ಭದ್ರತಾ ಸಹಕಾರ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಬೇಕಿತ್ತು. ಆದರೆ ಎಬೋಲಾ ಸೋಂಕಿನ ಹಿನ್ನೆಲೆ ಸಾರ್ವಜನಿಕ ಆರೋಗ್ಯದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಬೋಲಾ ವೈರಸ್ ಸೋಂಕು ದೇಹದ ದ್ರವಗಳ ಸಂಪರ್ಕದ ಮೂಲಕ ಹರಡುವ ಅಪಾಯಕಾರಿ ವೈರಲ್ ರೋಗವಾಗಿದೆ. ಪ್ರಸ್ತುತ ಹರಡುತ್ತಿರುವ ‘ಬುಂಡಿಬುಗ್ಯೋ’ ತಳಿ ವಿರಳವಾಗಿದ್ದು, ಇದಕ್ಕೆ ಇನ್ನೂ ಪರಿಣಾಮಕಾರಿ ಲಸಿಕೆ ಲಭ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಭಾರತ ಸರ್ಕಾರ ಆಫ್ರಿಕಾ ರಾಷ್ಟ್ರಗಳಿಗೆ ಅಗತ್ಯ ಸಹಕಾರ ನೀಡಲು ಸಿದ್ಧವಿದೆ ಎಂದು ತಿಳಿಸಿದ್ದು, ಶೃಂಗಸಭೆಯ ಹೊಸ ದಿನಾಂಕವನ್ನು ಭಾರತ ಮತ್ತು ಆಫ್ರಿಕನ್ ಯೂನಿಯನ್ ನಡುವಿನ ಮುಂದಿನ ಚರ್ಚೆಗಳ ಬಳಿಕ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಲಾಗಿದೆ.
