ಕ್ರೈಸ್ತ ಸಮುದಾಯದ ಏಕತೆಯ ವೇದಿಕೆಗೆ ಬೆಂಗಳೂರಿನಲ್ಲಿ ಅಧಿಕೃತ ಚಾಲನೆ
ಬೆಂಗಳೂರು, ಮೇ 11: ಭಾರತದ ವಿವಿಧ ಕ್ರೈಸ್ತ ಪಂಥಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ “ನ್ಯಾಷನಲ್ ಫೆಡರೇಶನ್ ಆಫ್ ಚರ್ಚಸ್ ಇನ್ ಇಂಡಿಯಾ” (NFCI) ಅನ್ನು ಮೇ 8ರಂದು ಅಧಿಕೃತವಾಗಿ ಸ್ಥಾಪಿಸಲಾಯಿತು. ಬೆಂಗಳೂರಿನ ಸೇಂಟ್ ಜಾನ್ಸ್ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ನಲ್ಲಿ ನಡೆದ ನಾಲ್ಕನೇ ರಾಷ್ಟ್ರೀಯ ಏಕ್ಯಮತ ಬಿಷಪ್ಗಳ ಫೆಲೋಶಿಪ್ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು.
ಹೈದರಾಬಾದ್ ಮಹಾಧರ್ಮಾಧ್ಯಕ್ಷ ಹಾಗೂ ಕ್ಯಾಥೋಲಿಕ್ ಬಿಷಪ್ಗಳ ಸಮಿತಿಯ (CBCI) ಅಧ್ಯಕ್ಷರಾದ ಕಾರ್ಡಿನಲ್ ಆಂಥನಿ ಪೂಲಾ ಅವರನ್ನು NFCIಯ ಮೊದಲ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
NFCI ದೇಶದ ಕ್ಯಾಥೋಲಿಕ್, ಪ್ರೊಟೆಸ್ಟಂಟ್, ಎವಾಂಜೆಲಿಕಲ್, ಸ್ವತಂತ್ರ ಚರ್ಚ್ ಹಾಗೂ ಪೆಂಟೆಕೋಸ್ಟಲ್ ಸಮುದಾಯಗಳನ್ನು ಒಳಗೊಂಡ ರಾಷ್ಟ್ರೀಯ ಏಕ್ಯಮತ ಸಂಘಟನೆಯಾಗಿ ಕಾರ್ಯನಿರ್ವಹಿಸಲಿದೆ. ವಿವಿಧ ಕ್ರೈಸ್ತ ಪಂಥಗಳ ನಡುವಿನ ಸಹಕಾರ, ಸಂವಾದ ಹಾಗೂ ಸಾಮಾನ್ಯ ಸಮಸ್ಯೆಗಳ ಬಗ್ಗೆ ಒಗ್ಗಟ್ಟಿನ ಧ್ವನಿಯಾಗಿ ಈ ಸಂಸ್ಥೆ ಕಾರ್ಯನಿರ್ವಹಿಸುವ ಉದ್ದೇಶ ಹೊಂದಿದೆ.
ಆರ್ಚ್ಬಿಷಪ್ ಜೋಸೆಫ್ ಡಿಸೋಜಾ, ಬಿಷಪ್ ಜೋಸೆಫ್ ಕಲ್ಲರಂಗಾಟ್ ಹಾಗೂ ಬಿಷಪ್ ವಿನ್ಸೆಂಟ್ ವಿನೋದ್ ಕುಮಾರ್ ಅವರನ್ನು ಸಂಘಟನೆಯ ಸಂಯೋಜಕರಾಗಿ ಆಯ್ಕೆ ಮಾಡಲಾಗಿದೆ. ಸಿಬಿಸಿಐ ರಾಷ್ಟ್ರೀಯ ಕಾರ್ಯದರ್ಶಿ ಫಾದರ್ ಆಂಥನಿರಾಜ್ ತುಮ್ಮಾ ಅವರು NFCI ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲಿದ್ದಾರೆ.
ಸುಮಾರು 45 ಹಿರಿಯ ಚರ್ಚ್ ಮುಖಂಡರು, ಬಿಷಪ್ಗಳು ಹಾಗೂ ಪ್ರತಿನಿಧಿಗಳ ಅನುಮೋದನೆಯೊಂದಿಗೆ NFCI ರೂಪುಗೊಂಡಿದ್ದು, ಕ್ರೈಸ್ತ ಸಮುದಾಯದ ಸಾಮಾನ್ಯ ಹಿತಾಸಕ್ತಿಗಳ ವಿಚಾರದಲ್ಲಿ ಒಗ್ಗಟ್ಟಿನ ವೇದಿಕೆಯಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
