ಬೆಂಗಳೂರು, ನ. 3: ಜಾಗತಿಕ ಮೊಬೈಲ್ ಸಂಪರ್ಕ ಜಾಲಗಳ ಒಕ್ಕೂಟವಾದ ಜಿಎಸ್ಎಂಎ (GSMA) ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಭಾರ್ತಿ ಏರ್ಟೆಲ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಗೋಪಾಲ್ ವಿಠ್ಠಲ್ ಅವರು 2027–2028ನೇ ಸಾಲಿನ ಅವಧಿಗೆ ಮರು ಆಯ್ಕೆಯಾಗಿದ್ದಾರೆ. ಈ ಮೂಲಕ ಅವರು 2028ರ ಡಿಸೆಂಬರ್ವರೆಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಕಳೆದ 10 ವರ್ಷಗಳಿಂದ ಜಿಎಸ್ಎಂಎ ಆಡಳಿತ ಮಂಡಳಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಗೋಪಾಲ್ ವಿಠ್ಠಲ್ ಅವರು 2025ರಿಂದ ಮಂಡಳಿಯ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇದೀಗ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅವರು, ಜಾಗತಿಕ ಮೊಬೈಲ್ ಆಪರೇಟರ್ಗಳು ಹಾಗೂ ಮೊಬೈಲ್ ಉದ್ಯಮದ ವಿವಿಧ ಕ್ಷೇತ್ರಗಳ ಕಂಪನಿಗಳನ್ನು ಪ್ರತಿನಿಧಿಸುವ ಸಂಸ್ಥೆಯ ಕಾರ್ಯತಂತ್ರಗಳಿಗೆ ನೇತೃತ್ವ ವಹಿಸಲಿದ್ದಾರೆ.
ಇದೇ ವೇಳೆ ಮಂಡಳಿಯು ರಾಲ್ಫ್ ಮುಪಿತಾ ಅವರನ್ನು ಸಹ-ಉಪಾಧ್ಯಕ್ಷರಾಗಿ ಮರು ಆಯ್ಕೆ ಮಾಡಿದ್ದು, ಮಾರ್ಗರಿಟಾ ಡೆಲ್ಲಾ ವ್ಯಾಲೆ ಅವರನ್ನು ನೂತನ ಸಹ-ಉಪಾಧ್ಯಕ್ಷೆಯಾಗಿ ನೇಮಕ ಮಾಡಿದೆ. ಇವರಿಬ್ಬರೂ 2028ರ ಅಂತ್ಯದವರೆಗೆ ಈ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಮರು ಆಯ್ಕೆಯ ಕುರಿತು ಪ್ರತಿಕ್ರಿಯಿಸಿರುವ ಗೋಪಾಲ್ ವಿಠ್ಠಲ್, ಜಿಎಸ್ಎಂಎ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾಗಿರುವುದು ಗೌರವದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಟೆಲಿಕಾಂ ಉದ್ಯಮವು ಹೊಸ ತಂತ್ರಜ್ಞಾನ ಯುಗಕ್ಕೆ ಪ್ರವೇಶಿಸುತ್ತಿದ್ದು, ಸುಧಾರಿತ ನೆಟ್ವರ್ಕ್ಗಳು, ಕೃತಕ ಬುದ್ಧಿಮತ್ತೆ (ಎಐ) ಮತ್ತು ಮುಕ್ತ ಡಿಜಿಟಲ್ ವೇದಿಕೆಗಳು ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿವೆ. ಈ ಸಂದರ್ಭದಲ್ಲಿ ಸೈಬರ್ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಹೆಚ್ಚುತ್ತಿರುವ ಸೈಬರ್ ದಾಳಿಗಳು, ಬಾಹ್ಯ ಬೆದರಿಕೆಗಳು ಹಾಗೂ ಆನ್ಲೈನ್ ವಂಚನೆಗಳಿಂದ ರಾಷ್ಟ್ರಗಳು ಮತ್ತು ಗ್ರಾಹಕರನ್ನು ರಕ್ಷಿಸುವುದು ಅತ್ಯಂತ ಅಗತ್ಯವಾಗಿದೆ. ಜತೆಗೆ, ತಂತ್ರಜ್ಞಾನ ಕ್ಷೇತ್ರದಲ್ಲಿ ನಿರಂತರ ಹೂಡಿಕೆಗೆ ಉತ್ತೇಜನ ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಗುಣಮಟ್ಟದ ಡಿಜಿಟಲ್ ಮೂಲಸೌಕರ್ಯ ನಿರ್ಮಾಣಕ್ಕೆ ಟೆಲಿಕಾಂ ಉದ್ಯಮವನ್ನು ಸುಸ್ಥಿರವಾಗಿಡುವುದು ತಮ್ಮ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಜಿಎಸ್ಎಂಎ ತಂಡ ಹಾಗೂ ಆಡಳಿತ ಮಂಡಳಿಯ ಸದಸ್ಯರೊಂದಿಗೆ ಈ ಜವಾಬ್ದಾರಿಯನ್ನು ಮುಂದುವರಿಸಲು ಉತ್ಸುಕನಾಗಿದ್ದೇನೆ. ಸಹ-ಉಪಾಧ್ಯಕ್ಷರಾದ ರಾಲ್ಫ್ ಮುಪಿತಾ ಮತ್ತು ಮಾರ್ಗರಿಟಾ ಡೆಲ್ಲಾ ವ್ಯಾಲೆ ಅವರ ಅನುಭವ, ಜಾಗತಿಕ ಕಾರ್ಯಕ್ಷೇತ್ರದ ಪರಿಚಯ ಹಾಗೂ ಒಳನೋಟಗಳು ಸಂಸ್ಥೆಯ ಕಾರ್ಯಸೂಚಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನೆರವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗೋಪಾಲ್ ವಿಠ್ಠಲ್ ಅವರ ಹಿನ್ನೆಲೆ
ಗೋಪಾಲ್ ವಿಠ್ಠಲ್ ಅವರು ಗ್ರಾಹಕರ ಸಂಖ್ಯೆಯ ಆಧಾರದಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ಟೆಲಿಕಾಂ ಸಂಸ್ಥೆ ಎಂದು ಗುರುತಿಸಲ್ಪಟ್ಟಿರುವ ಭಾರ್ತಿ ಏರ್ಟೆಲ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ. ಏರ್ಟೆಲ್ ಸಮೂಹದ ಡಿಜಿಟಲ್ ಮತ್ತು ತಂತ್ರಜ್ಞಾನ ವಿಭಾಗ, ನೆಟ್ವರ್ಕ್ ಕಾರ್ಯತಂತ್ರ, ಖರೀದಿ ಹಾಗೂ ಮಾನವ ಸಂಪನ್ಮೂಲ ಸೇರಿದಂತೆ ಪ್ರಮುಖ ವಿಭಾಗಗಳ ಕಾರ್ಯತಂತ್ರ ಮತ್ತು ಸಮನ್ವಯದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಇದರ ಜತೆಗೆ ಏರ್ಟೆಲ್ ಆಫ್ರಿಕಾ ಮತ್ತು ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ನ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿಯೂ, ಬ್ರಿಟನ್ನ ಬಿಟಿ ಗ್ರೂಪ್ನ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಏರ್ಟೆಲ್ ಮೊಬೈಲ್, ಹೋಮ್ಸ್, ಬಿ2ಬಿ ಹಾಗೂ ಡಿಜಿಟಲ್ ಸೇವೆಗಳ ಕ್ಷೇತ್ರಗಳಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿದೆ.
ರಾಲ್ಫ್ ಮುಪಿತಾ ಅವರ ಅನುಭವ
ರಾಲ್ಫ್ ಮುಪಿತಾ ಅವರು ಈ ಹಿಂದೆ ಎಂಟಿಎನ್ ಗ್ರೂಪ್ನ ಸಮೂಹ ಮುಖ್ಯ ಹಣಕಾಸು ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. 2020ರ ಸೆಪ್ಟೆಂಬರ್ನಿಂದ ಎಂಟಿಎನ್ ಗ್ರೂಪ್ನ ಸಮೂಹ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಕಾರ್ಯನಿರ್ವಹಿಸುತ್ತಿದ್ದಾರೆ. 2025ರ ಏಪ್ರಿಲ್ನಿಂದ ಜಿಎಸ್ಎಂಎ ಉಪಾಧ್ಯಕ್ಷರಾಗಿರುವ ಅವರು, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಗಾಗಿ ಬ್ರಾಡ್ಬ್ಯಾಂಡ್ ಆಯೋಗದ ಸದಸ್ಯರಾಗಿಯೂ, ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ (ಐಟಿಯು) ಎಐ ಫಾರ್ ಗುಡ್ ಗ್ಲೋಬಲ್ ಕಮಿಷನ್ನ ಸ್ಥಾಪಕ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಆಫ್ರಿಕಾ ಖಂಡದಾದ್ಯಂತ ದೂರಸಂಪರ್ಕ ಜಾಲ, ಹಣಕಾಸು ತಂತ್ರಜ್ಞಾನ (ಫಿನ್ಟೆಕ್) ಹಾಗೂ ಡಿಜಿಟಲ್ ಮೂಲಸೌಕರ್ಯಗಳ ವಿಸ್ತರಣೆಯನ್ನು ಗುರಿಯಾಗಿಸಿಕೊಂಡಿರುವ ಎಂಟಿಎನ್ನ ‘ಆಂಬಿಷನ್ 2030’ ಕಾರ್ಯತಂತ್ರಕ್ಕೆ ಅವರು ನೇತೃತ್ವ ನೀಡುತ್ತಿದ್ದಾರೆ.
ಮಾರ್ಗರಿಟಾ ಡೆಲ್ಲಾ ವ್ಯಾಲೆ ಅವರ ಸಾಧನೆ
ಮಾರ್ಗರಿಟಾ ಡೆಲ್ಲಾ ವ್ಯಾಲೆ ಅವರು 2018ರಿಂದ ವೊಡಾಫೋನ್ ಗ್ರೂಪ್ನ ಮುಖ್ಯ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 2023ರ ಜನವರಿಯಿಂದ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಜವಾಬ್ದಾರಿ ವಹಿಸಿಕೊಂಡಿದ್ದಾರೆ. ವೊಡಾಫೋನ್ ಸಂಸ್ಥೆಯ ವ್ಯವಹಾರ ವ್ಯವಸ್ಥೆಯನ್ನು ಸರಳಗೊಳಿಸುವುದು, ಕಾರ್ಯಕ್ಷಮತೆ ಹೆಚ್ಚಿಸುವುದು ಹಾಗೂ ಜಾಗತಿಕ ಮಟ್ಟದಲ್ಲಿ ಸಂಸ್ಥೆಯನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
