ಕೊರಟಗೆರೆ: ತಾಲ್ಲೂಕಿನ ಕಸಬಾ ಹೋಬಳಿಯ ಕ್ಯಾಮೇನಹಳ್ಳಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಿದಲೋಟಿ ಗ್ರಾಮದ ತೀರ್ಥೇಶ್ ಕುಮಾರ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದ ಸಕ್ರಿಯ ಯುವ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ತೀರ್ಥೇಶ್ ಕುಮಾರ್, ಪಕ್ಷ ವಹಿಸಿರುವ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತಾ ಬಂದಿದ್ದಾರೆ. ಸ್ಥಳೀಯವಾಗಿ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವ ಅವರು, ಯುವಕರ ನೆಚ್ಚಿನ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
ತೀರ್ಥೇಶ್ ಕುಮಾರ್ ಅವರ ತಂದೆ ನಾಗರಾಜು ಅವರು ಜೆಡಿಎಸ್ ಬೆಂಬಲಿತ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದು, ತಮ್ಮ ಗ್ರಾಮದಲ್ಲಿ ಜನಪರ ಕೆಲಸಗಳ ಮೂಲಕ ಜನಮನ್ನಣೆ ಗಳಿಸಿದ್ದಾರೆ. ನಾಗರಾಜು ಅವರಿಗೆ ಇಬ್ಬರು ಪುತ್ರರಿದ್ದು, ಹಿರಿಯ ಪುತ್ರ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರೆ, ಕಿರಿಯ ಪುತ್ರ ತೀರ್ಥೇಶ್ ಕುಮಾರ್ ಅವರು ಚಿಕ್ಕ ವಯಸ್ಸಿನಿಂದಲೇ ರಿಯಲ್ ಎಸ್ಟೇಟ್ ಮತ್ತು ಲೇಔಟ್ ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ವ್ಯವಹಾರದ ಜೊತೆಗೆ ಸಾಮಾಜಿಕ ಸೇವೆಯಲ್ಲಿಯೂ ಆಸಕ್ತಿ ಹೊಂದಿರುವ ತೀರ್ಥೇಶ್ ಕುಮಾರ್, ತಮ್ಮ ವ್ಯಾಪ್ತಿಯ ಯುವಕರು ಹಾಗೂ ಸ್ಥಳೀಯ ಜನರಿಗೆ ಸಾಧ್ಯವಾದಷ್ಟು ನೆರವು ನೀಡುತ್ತಾ ಬಂದಿದ್ದಾರೆ. ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದು, ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಿಗೆ ಕೈಜೋಡಿಸುವುದು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜಾತ್ರೆ, ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಸಹಾಯಹಸ್ತ ಚಾಚುವುದು ಅವರ ಸಾಮಾಜಿಕ ಚಟುವಟಿಕೆಗಳ ಪ್ರಮುಖ ಭಾಗವಾಗಿದೆ.
ಇದೀಗ ಕ್ಯಾಮೇನಹಳ್ಳಿ ತಾಲ್ಲೂಕು ಪಂಚಾಯಿತಿ ಕ್ಷೇತ್ರವು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಕಣಕ್ಕೆ ಇಳಿಯಲು ತೀರ್ಥೇಶ್ ಕುಮಾರ್ ಸಿದ್ಧತೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಸ್ಥಳೀಯ ಜೆಡಿಎಸ್ ಮತ್ತು ಬಿಜೆಪಿ ಮುಖಂಡರನ್ನು ಭೇಟಿಯಾಗಿ ಬೆಂಬಲ ಕೋರುತ್ತಿದ್ದಾರೆ ಎನ್ನಲಾಗಿದೆ.
ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ, ಯುವಕರ ಬೆಂಬಲ ಹಾಗೂ ಹಲವು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಅನುಭವದಿಂದ ಮುಂಬರುವ ಚುನಾವಣೆಯಲ್ಲಿ ಉತ್ತಮ ಅವಕಾಶ ದೊರೆಯುವ ನಿರೀಕ್ಷೆಯಲ್ಲಿದ್ದಾರೆ. ತೀರ್ಥೇಶ್ ಕುಮಾರ್ ಅವರಿಗೆ ಎನ್ಡಿಎ ಟಿಕೆಟ್ ಲಭಿಸಿದರೆ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡಲಿದ್ದಾರೆ ಎಂಬ ಅಭಿಪ್ರಾಯ ಸ್ಥಳೀಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
