ರಾಮನಾಥಪುರ, ಮೇ 21: ಹೋಬಳಿಯ ಬೂದನೂರು ಗ್ರಾಮದಲ್ಲಿ ಸುಮಾರು ₹65 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಆರೋಗ್ಯ ಉಪಕೇಂದ್ರ ಕಟ್ಟಡ ಕಾಮಗಾರಿಗೆ ಮಾಜಿ ಸಚಿವರು ಹಾಗೂ ಶಾಸಕ A. Manju ಗುದ್ದಲಿ ಪೂಜೆ ನೆರವೇರಿಸಿದರು.
ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಮನುಷ್ಯ ಶಾಶ್ವತವಲ್ಲ, ಆದರೆ ಅಭಿವೃದ್ಧಿ ಕಾರ್ಯಗಳೇ ಶಾಶ್ವತ. ನಾವು ಮಾಡಿದ ಪುಣ್ಯ ಕೆಲಸಗಳೇ ನಮ್ಮ ಹೆಸರನ್ನು ಜನರ ಮನಸ್ಸಿನಲ್ಲಿ ಉಳಿಸುತ್ತವೆ” ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ರೈತರು ಹಾಗೂ ಸಾರ್ವಜನಿಕರಿಗೆ ತುರ್ತು ಆರೋಗ್ಯ ಸೇವೆ ಸುಲಭವಾಗಿ ದೊರೆಯುವ ಉದ್ದೇಶದಿಂದ ಆರೋಗ್ಯ ಉಪಕೇಂದ್ರ ನಿರ್ಮಿಸಲಾಗುತ್ತಿದೆ. ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.
ಸುಸಜ್ಜಿತ ಆರೋಗ್ಯ ಉಪಕೇಂದ್ರವು ಆರು ತಿಂಗಳೊಳಗೆ ಪೂರ್ಣಗೊಳ್ಳಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
