ರಾಮನಾಥಪುರ, ಸೆ.26: ಭಕ್ತಿ ಮತ್ತು ಶಕ್ತಿಯ ಮಹಾ ಸಂಗಮವಾಗಿರುವ ರಾಮನಾಥಪುರದ ಶ್ರೀ ವರದಾನ ಬಸವೇಶ್ವರ ಸ್ವಾಮಿಯ ಸನ್ನಿಧಿಗೆ ಆಗಮಿಸುವ ಭಕ್ತರ ನಂಬಿಕೆಗೆ ದೇವರು ಸ್ಪಂದಿಸಿ, ಇಷ್ಟಾರ್ಥಗಳನ್ನು ಈಡೇರಿಸುತ್ತಾ ಸಂಕಷ್ಟಗಳನ್ನು ಪರಿಹರಿಸುತ್ತಿದ್ದಾರೆ ಎಂಬ ಭಾವನೆ ಭಕ್ತರಲ್ಲಿ ಬಲವಾಗಿದ್ದು, ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ ಎಂದು ಕೇರಳದ ಪಾಂಡುಚೇರಿಯ ಸಮಾಜಸೇವಕ ವಿಜಯಕುಮಾರ್ ಹೇಳಿದರು.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ರಾಮನಾಥಪುರದ ಶ್ರೀ ವರದಾನ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಸುಮಾರು 60 ವರ್ಷಗಳಿಂದ ಪ್ರತಿಷ್ಠಾಪಿಸಿಕೊಂಡು ಬರುತ್ತಿರುವ ಗೌರಿ-ಗಣೇಶ ಮೂರ್ತಿಗೆ ಗೌರಿ ಗಣೇಶ ಹಬ್ಬದ ಅಂಗವಾಗಿ ಸಂಪ್ರದಾಯಬದ್ಧವಾಗಿ ಪೂಜಾ ಕೈಂಕರ್ಯ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.
ಪೂಜಾ ಕಾರ್ಯಕ್ರಮದ ಬಳಿಕ ಪುರೋಹಿತರಿಂದ ಗೌರವ ಸ್ವೀಕರಿಸಿ ಮಾತನಾಡಿದ ವಿಜಯಕುಮಾರ್, ದೇವಾಲಯದ ಸಭಾಂಗಣದಲ್ಲಿ ಮಣ್ಣಿನಿಂದ ನಿರ್ಮಿಸಿರುವ ಗೌರಮ್ಮ ಮತ್ತು ಗಣೇಶ ಮೂರ್ತಿಯನ್ನು ನೋಡುವುದೇ ಭಕ್ತರಿಗೆ ವಿಶೇಷ ಸಂತಸ ನೀಡುತ್ತದೆ. ಇಂದಿನ ದಿನಗಳಲ್ಲಿ ಪಿಒಪಿ ಮೂರ್ತಿಗಳನ್ನು ಶೀಘ್ರವಾಗಿ ತಯಾರಿಸಬಹುದಾದರೂ, ಅವುಗಳಿಂದ ಪರಿಸರ ಮಾಲಿನ್ಯ ಉಂಟಾಗುವ ಸಾಧ್ಯತೆ ಇದೆ ಎಂದರು.
ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಗೌರಿ ಗಣೇಶ ಹಬ್ಬ ಆಚರಿಸುವುದು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ. ಜಲ ಸಂಪನ್ಮೂಲಗಳ ರಕ್ಷಣೆ ಸೇರಿದಂತೆ ಪ್ರಾಣಿ, ಪಕ್ಷಿ ಹಾಗೂ ಮಾನವ ಸಂಕುಲಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಪರಿಸರ ಸ್ನೇಹಿ ಆಚರಣೆಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಮಣ್ಣಿನ ಮೂರ್ತಿಯನ್ನು ಪೂಜಿಸಿ ನಂತರ ವಿಸರ್ಜಿಸುವ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ವಿಜಯಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅರ್ಚಕ ರಘವೇಂದ್ರ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀ ವರದಾನ ಬಸವೇಶ್ವರ ಭಕ್ತ ಬಳಗದ ಸದಸ್ಯರಾದ ಪ್ರವೀಣ್, ಶ್ರೀನಾಥ್, ದೇವೇಂದ್ರ, ಆರ್.ಕೆ. ಶ್ರೀನಿವಾಸ್, ಸಿದ್ದಯ್ಯ, ನಾಗೇಶ್, ಅಭಿಷೇಕ್, ಸಹನ, ರಾಧಾಕೃಷ್ಣ ಸೇರಿದಂತೆ ಹಲವು ಭಕ್ತರು ಭಾಗವಹಿಸಿದ್ದರು.
– ಕುಮಾರಸ್ವಾಮಿ ಎಂ.ಎನ್.
