ಹಾಸನ: ಸಹೋದರಿಯಿಂದ ಜಮೀನು ವಂಚನೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮನನೊಂದು ವ್ಯಕ್ತಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ ತಾಲ್ಲೂಕಿನ ಹೆಚ್. ಭೈರಾಪುರ ಗ್ರಾಮದಲ್ಲಿ ಸಂಭವಿಸಿದೆ.
ಆತ್ಮಹತ್ಯೆಗೆ ಶರಣಾದವರನ್ನು ರವಿ (42) ಎಂದು ಗುರುತಿಸಲಾಗಿದೆ. ಕುಟುಂಬದವರ ಪ್ರಕಾರ, ತಂದೆಗೆ ಸೇರಿದ ಎಂಟು ಎಕರೆ ಜಮೀನಿನಲ್ಲಿ ಸಹೋದರಿ ಕಮಲ ಐದು ಎಕರೆ ಜಮೀನನ್ನು ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದು, ಉಳಿದ ಮೂರು ಮಕ್ಕಳಿಗೆ ತಲಾ ಒಂದು ಎಕರೆ ಮಾತ್ರ ಹಂಚಲಾಗಿದೆ.
ಜಮೀನು ಹಂಚಿಕೆ ವಿಚಾರದಲ್ಲಿ ರವಿ ಮತ್ತು ಕಮಲ ನಡುವೆ ಕಳೆದ ಕೆಲವು ದಿನಗಳಿಂದ ತೀವ್ರ ಜಗಳ ನಡೆಯುತ್ತಿದ್ದು, ಸಮಾನವಾಗಿ ಜಮೀನು ಹಂಚಲು ಕಮಲ ನಿರಾಕರಿಸಿದ್ದರಿಂದ ರವಿ ಮಾನಸಿಕವಾಗಿ ನೊಂದಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಘಟನೆಯು ಕಮಲ ಖಾತೆ ಮಾಡಿಸಿಕೊಂಡಿರುವ ಜಮೀನಿನಲ್ಲೇ ನಡೆದಿದೆ. ಘಟನೆ ಸ್ಥಳಕ್ಕೆ ದುದ್ದ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರಿಸುತ್ತಿದ್ದಾರೆ.
