ಹಾಸನ: ಪಶುವೈದ್ಯಕೀಯ ಕಾಲೇಜು ನಿರ್ಮಾಣಕ್ಕಾಗಿ ರೈತರ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಂಡು, ಸೂಕ್ತ ಪರಿಹಾರ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಪಶುವೈದ್ಯಕೀಯ ಕಾಲೇಜಿನ ಡೀನ್ ಕಚೇರಿಯ ಜಂಗಮ ಆಸ್ತಿಗಳನ್ನು ಜಪ್ತಿ ಮಾಡಲು ಕೋರ್ಟ್ ವಾರಂಟ್ ಹೊರಡಿಸಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ.
2009ರಲ್ಲಿ ಪಶುವೈದ್ಯಕೀಯ ಕಾಲೇಜು ನಿರ್ಮಾಣಕ್ಕಾಗಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರಿಗೆ ಸೂಕ್ತ ಪರಿಹಾರ ಹಾಗೂ ಹಣವನ್ನು ಪಾವತಿಸಿಲ್ಲ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ರೈತರು 2011ರಲ್ಲಿ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ರೈತರಿಗೆ ಪರಿಹಾರ ಮೊತ್ತ ಪಾವತಿಸುವಂತೆ ಆದೇಶಿಸಿತ್ತು. ಸುಮಾರು ₹14,97,383 ಸೇರಿದಂತೆ ಹೆಚ್ಚುವರಿ ಮೊತ್ತವನ್ನು ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದ್ದರೂ, ಸಂಬಂಧಪಟ್ಟ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರೆಯಲಿಲ್ಲ ಎಂದು ವಕೀಲರು ತಿಳಿಸಿದ್ದಾರೆ.
ನ್ಯಾಯಾಲಯದ ಆದೇಶದಂತೆ ಬಾಕಿ ಪರಿಹಾರ ಮೊತ್ತ ಪಾವತಿಯಾಗದ ಹಿನ್ನೆಲೆಯಲ್ಲಿ ಇದೀಗ ಕೋರ್ಟ್ ಅಮೀನ್ ಮೂಲಕ ಪಶುವೈದ್ಯಕೀಯ ಕಾಲೇಜು ಡೀನ್ ಕಚೇರಿಯ ಜಂಗಮ ಆಸ್ತಿಗಳನ್ನು ಜಪ್ತಿ ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಭೂಸ್ವಾಧೀನಗೊಂಡು ಹಲವು ವರ್ಷಗಳು ಕಳೆದಿದ್ದರೂ ಪರಿಹಾರ ದೊರೆಯದಿರುವುದು ರೈತರಿಗೆ ಅನ್ಯಾಯವಾಗಿದೆ. ನ್ಯಾಯಾಲಯದ ಆದೇಶದಂತೆ ಬಾಕಿ ಪರಿಹಾರವನ್ನು ಶೀಘ್ರ ಪಾವತಿಸಬೇಕು ಎಂದು ರೈತರ ಪರ ವಕೀಲರು ಒತ್ತಾಯಿಸಿದ್ದಾರೆ.
